ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಠಾಣೆ ಸಮೀಪದ ಮೋರಿಯಲ್ಲಿ ಆಸ್ಥಿಪಂಜರ ಪತ್ತೆ

Last Updated 15 ಫೆಬ್ರುವರಿ 2021, 14:40 IST
ಅಕ್ಷರ ಗಾತ್ರ

ಬೆಂಗಳೂರು: ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆ ಸಮೀಪದಲ್ಲಿರುವ ಮೋರಿಯೊಂದರಲ್ಲಿ ಸೋಮವಾರ ಆಸ್ಥಿಪಂಜರ ಪತ್ತೆಯಾಗಿದ್ದು, ಅದು ಯಾರದ್ದು ಎಂಬುದನ್ನು ತಿಳಿಯಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

‘ನಾಲ್ಕು ವರ್ಷಗಳ ಹಿಂದೆ ಮೃತಪಟ್ಟಿರುವ ವ್ಯಕ್ತಿಯ ಆಸ್ತಿಪಂಜರವೆಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಸಂಚಾರ ಠಾಣೆಯಿಂದ 50 ಮೀಟರ್ ದೂರದಲ್ಲಿ ಎಚ್‌ಬಿಆರ್ ಕಲ್ಯಾಣ ಮಂಟಪವಿದ್ದು, ಅದರ ಬಳಿಯ ಮೋರಿಯಲ್ಲಿ ಆಸ್ತಿಪಂಜರವಿತ್ತು. ಕಲ್ಲು ಹಾಗೂ ಮಣ್ಣಿನಿಂದ ಮೋರಿ ಮುಚ್ಚಿಕೊಂಡಿತ್ತು. ಇತ್ತೀಚೆಗೆ ಮೋರಿ ಸ್ವಚ್ಛಗೊಳಿಸಲು ಕಲ್ಲು ತೆಗೆಯಲಾಗಿತ್ತು. ಮಣ್ಣು ಕೊಚ್ಚಿಕೊಂಡು ಹೋಗಿ ಆಸ್ಥಿಪಂಜರ ಕಂಡಿದೆ.’

‘ನಾಲ್ಕು ವರ್ಷಗಳ ಹಿಂದೆ ಬಿಬಿಎಂಪಿ ಸಿಬ್ಬಂದಿ, ಮೋರಿ ಕಾಮಗಾರಿ ನಡೆಸಿ ಮೇಲ್ಭಾಗದಲ್ಲಿ ಕಲ್ಲು ಹಾಕಿದ್ದರು. ಅದೇ ಸಂದರ್ಭದಲ್ಲೇ ವ್ಯಕ್ತಿಯ ಮೃತದೇಹವನ್ನು ಮೋರಿಯಲ್ಲಿ ಹಾಕಿರುವ ಅನುಮಾನವಿದೆ. ಜೊತೆಗೆ, ಮಳೆಗಾಲದಲ್ಲಿ ನೀರಿನೊಂದಿಗೆ ತೇಲಿಕೊಂಡು ಬಂದು ಮೃತದೇಹ ಮೋರಿಯಲ್ಲಿ ಸಿಲುಕಿಕೊಂಡಿರುವ ಸಾಧ್ಯತೆಯೂ ಇದೆ. ಎಲ್ಲ ಆಯಾಮದಲ್ಲಿ ತನಿಖೆ ನಡೆಸಲಾಗುತ್ತಿದೆ. ಇದು ಕೊಲೆಯೋ ಅಥವಾ ಬೇರೆ ಏನಾದರೂ ಆಗಿದೆಯೋ ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ’ ಎಂದೂ ಮೂಲಗಳು ತಿಳಿಸಿವೆ.

‘ಆಸ್ಥಿಪಂಜರ, ಅದರ ಬಳಿ ಸಿಕ್ಕ ವಸ್ತುಗಳು ಹಾಗೂ ಸ್ಥಳದಲ್ಲಿರುವ ಮಣ್ಣನ್ನು ಸಂಗ್ರಹಿಸಿ ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮೃತಪಟ್ಟ ವ್ಯಕ್ತಿ ಯಾರು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ನಾಲ್ಕು ವರ್ಷಗಳಿಂದ ನಾಪತ್ತೆಯಾಗಿರುವ ವ್ಯಕ್ತಿಗಳು ಯಾರು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ. ಕಾಣೆಯಾದ ವ್ಯಕ್ತಿಗಳ ಸಂಬಂಧಿಕರು ಯಾರಾದರೂ ಇದ್ದರೆ ಪೊಲೀಸರನ್ನು ಸಂಪರ್ಕಿಸಬಹುದು’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT