ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

#MeToo ದೂರು ಕೊಟ್ಟಿದ್ದಕ್ಕೆ ಹೆಮ್ಮೆ ಇದೆ : ಶ್ರುತಿ ಹರಿಹರನ್ 

ಮುಟ್ಟಿದ್ದರೆ ಹೇಳಿ, ಮಾತನಾಡಿದ್ದರೆ ಹೇಳಬೇಡಿ: ಇದೆಂಥಾ ವ್ಯವಸ್ಥೆ
Last Updated 3 ನವೆಂಬರ್ 2019, 19:21 IST
ಅಕ್ಷರ ಗಾತ್ರ

ಬೆಂಗಳೂರು: ‘ನನಗೂ ಲೈಂಗಿಕ ಕಿರುಕುಳ ಆಗಿದೆ (ಮೀ ಟೂ)ಎಂದು ದೂರು ಕೊಟ್ಟಿದ್ದಕ್ಕೆ ಹೆಮ್ಮೆ ಇದೆ. ಇದರಿಂದ ನನಗೆ ಚಿತ್ರರಂಗದಲ್ಲಿ ಅವಕಾಶ ಕಡಿಮೆಯಾಯಿತು. ಅದಕ್ಕಾಗಿ ಖಂಡಿತ ವಿಷಾದ ಇಲ್ಲ’ ಎಂದು ನಟಿ ಶ್ರುತಿ ಹರಿಹರನ್‌ ಹೇಳಿದರು.

‘ಮುಟ್ಟಿದ್ದರೆ ಹೇಳಿ, ಮಾತನಾಡಿದ್ದರೆ ಹೇಳಬೇಡಿ ಎಂಬ ಧೋರಣೆ ವಕೀಲರ ವಲಯದಲ್ಲೂ ಇದೆ. ಅತ್ಯಾಚಾರ ಪ್ರಕರಣದಲ್ಲಿ ಸಾಕ್ಷ್ಯ ನೀಡಬಹುದು, ಮೀ ಟೂಗೆ ಸಾಕ್ಷ್ಯ ಎಲ್ಲಿಂದ ತರಲಿ. ವಕೀಲರು ಸೂಕ್ಷ್ಮ ಸಂವೇದಿಯಾಗಿಲ್ಲದಿದ್ದರೆ ಇಂತಹ ಪ್ರಕರಣಗಳಲ್ಲಿ ನೊಂದವರಿಗೆ ನ್ಯಾಯ ಸಿಗುವುದು ಕಷ್ಟವೇನೊ’ ಎಂದು ಆತಂಕ ವ್ಯಕ್ತಪಡಿಸಿದರು.

‘ಫೇಸ್‌ಬುಕ್ ಯುಎನ್‌ ವಿಮೆನ್‌’ ವತಿಯಿಂದ ಭಾನುವಾರ ಇಲ್ಲಿ ಏರ್ಪಡಿಸಿದ್ದ 'ವಿ ದ ವುಮೆನ್' ಮಹಿಳಾ ಸಂವಾದ ಕಾರ್ಯಕ್ರಮದಲ್ಲಿ ತಮಗಾದ ಲೈಂಗಿಕ ಕಿರುಕುಳ, ಹಿಂಸೆಯನ್ನು ಬಿಚ್ಚಿಟ್ಟರು. ಹಿರಿಯ ಪತ್ರಕರ್ತೆ ಬರ್ಖಾ ದತ್‌ ಕಾರ್ಯಕ್ರಮ ಸಂಘಟಿಸಿದ್ದರು.

‘ನನ್ನ ಪ್ರಕರಣ ಬೆಳಕಿಗೆ ಬಂದ ಮೇಲಾದರೂ ಮಹಿಳೆಯರು ತಮಗಾದ ನೋವು ಹೇಳಿಕೊಳ್ಳಬೇಕು. ಕನ್ನಡ ಚಿತ್ರರಂಗದಲ್ಲಿ ಇನ್ನಾದರೂ ಆಂತರಿಕ ದೂರು ಸಮಿತಿ (ಐಸಿಸಿ) ರಚಿಸಬೇಕು’ ಎಂದು ಶ್ರುತಿ ಕೇಳಿಕೊಂಡರು.

ಚಪ್ಪಲಿ ಕೈಗೆ ಬರಲಿ:ವೇದಿಕೆಗೆ ಬಂದ ಶ್ರುತಿ ಅವರ ತಾಯಿ ಜಯಲಕ್ಷ್ಮಿ, ತಮ್ಮ ಪುತ್ರಿ ತೋರಿದ ಧೈರ್ಯಕ್ಕೆ ಶಹಬ್ಬಾಶ್‌ ಹೇಳಿದರು. ‘ಮೀ ಟೂ ಅನುಭವ ಆದರೆ ಸುಮ್ಮನೆ ಇರಬೇಡಿ. ಚಪ್ಪಲಿ ಕೈಗೆ ಬರಲಿ’ ಎಂದು ಅವರು ಸಲಹೆ ನೀಡಿದರು.

ಮಹಿಳಾ ಉತ್ಸವ ದಿನವಿಡಿ ನಡೆಯಿತು. ಸಾಧಕಿಯರಾದ ಅಥ್ಲೀಟ್‌ ದ್ಯುತಿ ಚಾಂದ್‌, ನಿಶಾ ಮಿಲೆಟ್‌, ನಟಿ ಸಾರಾ ಆಲಿ ಖಾನ್‌, ಕಿರಣ್‌ ಮಜುಂದಾರ್‌ ಷಾ, ಐಎಫ್‌ಎಸ್‌ ಅಧಿಕಾರಿ ನಿರುಪಮಾ ರಾವ್‌ ಸೇರಿ 25ಕ್ಕೂ ಅಧಿಕ ಮಂದಿ ಮಾತನಾಡಿದರು.

‘ಸಂಚಲನ ಮೂಡಿಸಿದ ಕ್ಷಣ’
ಕೆಲಸದ ಸ್ಥಳದಲ್ಲಿ ನಡೆಯುವ ಮಹಿಳಾ ಲೈಂಗಿಕ ದೌರ್ಜನ್ಯವನ್ನು ಹತ್ತಿಕ್ಕುವ ನಿಟ್ಟಿನಲ್ಲಿ 1997ರಲ್ಲಿ ‘ವಿಶಾಖಾ ಮಾರ್ಗದರ್ಶಿ’ ರೂಪುಗೊಳ್ಳಲು ಕಾರಣಕರ್ತರಾದ ರಾಜಸ್ಥಾನದ ಭನ್ವರಿ ದೇವಿ ಅವರು ವೇದಿಕೆಗೆ ಬಂದಾಗ ಮಿಂಚಿನ ಸಂಚಾರವಾದ ಅನುಭವವಾಯಿತು.

ಬಾಲ್ಯವಿವಾಹವನ್ನು ತಡೆಯಲು ಯತ್ನಿಸಿದ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿತ್ತು.ರಾಜಸ್ಥಾನ ಹೈಕೋರ್ಟ್‌ನಿಂದ ಅವರಿಗೆ ನ್ಯಾಯ ಸಿಗದಿದ್ದಾಗ ‘ವಿಶಾಖಾ’ ಹೆಸರಿನ ಮಹಿಳಾ ಹಕ್ಕುಹೋರಾಟಗಾರರ ಗುಂಪು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ಒಂದು ಮಹತ್ವದಶಾಸನ ರೂಪಿಸುವುದಕ್ಕೆ ದಾರಿ ಮಾಡಿಕೊಟ್ಟಿತ್ತು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT