ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜಕೀಯದಲ್ಲಿ ‘ಬಾಸ್‌’ ಕಲ್ಪನೆ ಬೇಕಿಲ್ಲ’

Last Updated 30 ಮಾರ್ಚ್ 2023, 21:03 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜಕೀಯದಲ್ಲಿ ಯಾರೂ ಬಾಸ್‌ ಅಲ್ಲ. ಸಹವರ್ತಿಗಳು ಅಥವಾ ಪಾಲುದಾರರು ಅಷ್ಟೇ. ರಾಜಕೀಯ ಪ್ರವೇಶ ಮಾಡುವವರು ಜೀವನದುದ್ದಕ್ಕೂ ಇದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು’ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜೋತಿರಾದಿತ್ಯ ಸಿಂಧಿಯಾ ಹೇಳಿದರು.

ಬಿಜೆಪಿ ಯುವ ಮೋರ್ಚಾ ಮಂಗಳವಾರ ಈಸ್ಟ್‌ ಪಾಯಿಂಟ್‌ ಗ್ರೂಪ್ ಆಫ್‌ ಇನ್‌ಸ್ಟಿಟ್ಯೂಷನ್‌ನಲ್ಲಿಏರ್ಪಡಿಸಿದ್ದ ‘ಯುವ ಸಂವಾದ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯೊಬ್ಬ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ತನಗೆ ‘ಬಾಸ್‌’ ಇದ್ದಂತೆ ಎಂದು ಹೇಳಿದಾಗ, ‘ಯಾರೂ ಬಾಸ್‌ ಅಲ್ಲ, ಎಲ್ಲರೂ ಪಾಲುದಾರರು. ಇದೇ ನಾವು ಮಾಡುವ ತಪ್ಪು, ಜೀವನಕ್ಕೆ ಇದು ಮತ್ತೊಂದು ಪಾಠ ಆಗಬೇಕು’ ಎಂದರು.

‘ಒಂದು ವೇಳೆ ಮುಂದೆ ನೀವು ನಾಯಕರಾಗಿ ಹೊರ ಹೊಮ್ಮಿದಾಗ ಎಂದಿಗೂ ‘ಬಾಸ್‌’ ಎಂಬ ಭಾವನೆ ಮೂಡಿಸಿಕೊಳ್ಳಬಾರದು. ಸಹವರ್ತಿ ಎಂಬ ಭಾವನೆಯನ್ನು ಜೀವನದ ಉದ್ದಕ್ಕೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ನಿಮಗೆ ಹೇಗೆ ಕುಟುಂಬ ಇರುತ್ತದೆಯೋ, ನಿಮ್ಮ ಜತೆ ಕೆಲಸ ಮಾಡುವ ಕಾರ್ಯಕರ್ತರೂ ಕುಟುಂಬದ ಭಾಗ ಎಂಬುದನ್ನು ತಿಳಿದುಕೊಂಡು ಅದೇ ರೀತಿಯಲ್ಲಿ ವ್ಯವಹರಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಮೊದಲ ಬಾರಿಯ ಮತದಾರರು ಮುಂಬರುವ ಚುನಾವಣೆಯ ಮತದಾನದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ದೇಶದ ರಾಜಕೀಯ ಭವಿಷ್ಯವನ್ನು ನಿರ್ಧರಿಸುವ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಸರಿಯಾದ ಆಯ್ಕೆಯನ್ನು ಮಾಡಬೇಕು. ನೀವು ಪ್ರಜಾತಂತ್ರದ ಪ್ರಕ್ರಿಯೆಯ ಭಾಗವಾಗಬೇಕು. ನಮ್ಮೆಲ್ಲರ ಭವಿಷ್ಯವನ್ನು ನಿರ್ಧರಿಸುವುದಕ್ಕಾಗಿ ನಾಯಕತ್ವ ವಹಿಸುವವರಿಗಾಗಿ ಮತದಾನದ ದಿನ ಮತ ಚಲಾಯಿಸಲೇಬೇಕು’ ಎಂದರು.

ನೋಟಾದ ಔಚಿತ್ಯದ ಬಗ್ಗೆ ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಸಿಂಧಿಯಾ, ‘ಯಾವ ಅಭ್ಯರ್ಥಿಯ ಮನಸ್ಸು ಸರಿಯಾದ ದಿಕ್ಕಿನಲ್ಲಿ ಇಲ್ಲದಿದ್ದರೂ, ಹೃದಯ ಸರಿಯಾದ ವಿಚಾರದಲ್ಲಿ ಚಿಂತಿಸುತ್ತದೆಯೋ ಆಗ, ನೋಟಾ ಚಲಾಯಿಸುವ ಕುರಿತು ಯೋಚಿಸಬೇಕಾಗಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT