ಶನಿವಾರ, ಅಕ್ಟೋಬರ್ 24, 2020
18 °C

ಮನಸು ಗಟ್ಟಿ ಮಾಡಿಕೊಂಡರೆ ಕೊರೊನಾ ಸಹಬಾಳ್ವೆ ಕಷ್ಟವೇನಲ್ಲ: ಎಲ್‌. ಸುರೇಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನಗರದಲ್ಲಿ ಕೊರೊನಾ ನಿಯಂತ್ರಣದಲ್ಲಿ ಮುಂಚೂಣಿಯಲ್ಲಿರುವುದು ಬಿಬಿಎಂಪಿ. ಹಾಗಾಗಿ ನಮ್ಮ ಸಿಬ್ಬಂದಿಗೆ ಸೋಂಕು ತಗಲುವ ಸಾಧ್ಯತೆ ಜಾಸ್ತಿ. ಆದರೂ ನಾವು ಅಳುಕಿಲ್ಲದೇ ಕೋವಿಡ್‌ ವಿರುದ್ಧದ ಹೋರಾಟದಲ್ಲಿ ತೊಡಗಿದ್ದೇವೆ. ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದರೆ ಕೊರೊನಾ ಜೊತೆ ಬದುಕುವುದು ಕಷ್ಟವೇನಲ್ಲ’ ಎನ್ನುತ್ತಾರೆ ಬಿಬಿಎಂಪಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್‌. ಸುರೇಶ್.

ಸುರೇಶ್‌ ಅವರಿಗೂ ಕೊರೊನಾ ಸೋಂಕು ತಗುಲಿತ್ತು. ಮಧುಮೇಹ ಹೊಂದಿದ್ದರೂ ಅವರು ಈ ಸೋಂಕನ್ನು ಗೆದ್ದಿದ್ದು, ಈಗ ಕಚೇರಿಗೆ ಬಂದು ಹಿಂದಿನಂತೆಯೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

‘ಕರ್ತವ್ಯದ ವೇಳೆ ನಿತ್ಯ ನೂರಾರು ಮಂದಿಯನ್ನು ಭೇಟಿಯಾಗಬೇಕಾಗುತ್ತದೆ. ನನ್ನ ಅಮ್ಮನಿಗೆ ವಯಸ್ಸಾಗಿದೆ. ಹಾಗಾಗಿ ಸಾಧ್ಯವಾದಷ್ಟು ಹೆಚ್ಚು ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿದ್ದೆ. ಮನೆಯಲ್ಲೇ ಆಕ್ಸಿಮೀಟರ್‌ ಇಟ್ಟುಕೊಂಡು ಆಗಾಗ ರಕ್ತದಲ್ಲಿ ಆಮ್ಲಜನಕದ ಪ್ರಮಾಣವನ್ನು ತಪಾಸಣೆ ಮಾಡಿಕೊಳ್ಳುತ್ತಿದ್ದೆ. ನನಗೆ ಜ್ವರ, ರುಚಿ ಕಳೆದುಕೊಳ್ಳುವುದು, ಕೆಮ್ಮು ಮುಂತಾದ ಸೋಂಕಿನ ಯಾವುದೇ ಲಕ್ಷಣಗಳೂ ಇರಲಿಲ್ಲ. ಒಂದು ದಿನ ಇದ್ದಕ್ಕಿದ್ದಂತೆ ರಕ್ತದಲ್ಲಿ ಆಮ್ಲಜನಕರ ಪ್ರಮಾಣ ಶೇ 82ಕ್ಕೆ ಇಳಿಕೆ ಕಂಡಿತು. ಪರೀಕ್ಷೆ ಮಾಡಿಸಿದಾಗ ಕೋವಿಡ್‌ ಇರುವುದು ದೃಢಪಟ್ಟಿತು.’

‘ಆಸ್ಪತ್ರೆಗೆ ದಾಖಲಾದಾಗ ಸ್ವಲ್ಪ ಸುಸ್ತು ಬಿಟ್ಟರೆ ಬೇರಾವುದೇ ಆರೋಗ್ಯ ಸಮಸ್ಯೆಗಳು ಇರಲಿಲ್ಲ. ಮಧುಮೇಹ ಇದ್ದುದರಿಂದ ರೋಗ ವಾಸಿಯಾಗಲು ಸಮಯ ಹಿಡಿಯಬಹುದು ಎಂದು ಭಾವಿಸಿದ್ದೆ. ಆಸ್ಪತ್ರೆಗೆ ದಾಖಲಾದ ಎರಡು ದಿನಗಳಲ್ಲಿ ಪರೀಕ್ಷೆ ಮಾಡಿಕೊಂಡಾಗ ಮತ್ತೆ ಪಾಸಿಟಿವ್‌ ಫಲಿತಾಂಶ ಬಂದಿತು. ಐದು ದಿನ ಕಳೆದ ಬಳಿಕ ಮತ್ತೆ ಪರೀಕ್ಷೆ ಮಾಡಿಸಿಕೊಂಡಾಗಲೂ ನಾನು ಸೋಂಕಿನಿಂದ ಗುಣಮುಖನಾಗಿರಲಿಲ್ಲ. ಏಳು ದಿನಗಳ ಬಳಿಕ ಪರೀಕ್ಷೆ ಮಾಡಿಸಿದಾಗಲೂ ಸೋಂಕು ಇತ್ತು. ಆಗ ಸ್ವಲ್ಪ ಆತಂಕವಾಗಿದ್ದು ನಿಜ.’

‘ಬಿಬಿಎಂಪಿ ಆಯುಕ್ತರು, ಸಹೋದ್ಯೋಗಿಗಳು, ಬಂಧುಗಳು, ಗೆಳೆಯರೆಲ್ಲ ಕರೆ ಮಾಡಿ ಧೈರ್ಯ ಹೇಳುತ್ತಿದ್ದರು. ಮನಸ್ಸು ಗಟ್ಟಿಮಾಡಿಕೊಂಡಿದ್ದೆ. ರೋಗ ಲಕ್ಷಣಗಳಿಲ್ಲದ ಕಾರಣ ಆಸ್ಪತ್ರೆಯಿಂದ ಬಿಡುಗಡೆಯಾಗಿ ಖಾಸಗಿ ಹೋಟೆಲ್‌ನಲ್ಲಿ ಪ್ರತ್ಯೇಕ ವಾಸಕ್ಕೆ ತೆರಳಿದೆ. ಅಲ್ಲಿ  ಕೋವಿಡ್‌ ಪರೀಕ್ಷೆ ಮಾಡಿಸಿದಾಗ ಫಲಿತಾಂಶ ನೆಗೆಟಿವ್‌ ಬಂತು. 15 ದಿನಗಳ ಪ್ರತ್ಯೇಕ ವಾಸದ ಬಳಿಕ ಮನೆಗೆ ಮರಳಿದೆ.’

‘ಕೊರೊನಾ ಕುರಿತು ಮುನ್ನೆಚ್ಚರಿಕೆ ವಹಿಸಲೇಬೇಕು. ಮನೆಯಲ್ಲೇ ಆಕ್ಸಿಮೀಟರ್‌ ಇಟ್ಟುಕೊಂಡು ರಕ್ತದ ಆಮ್ಲಜನಕದ ಪ್ರಮಾಣವನ್ನು ನಿತ್ಯವೂ ಪರೀಕ್ಷೆ ಮಾಡಿಕೊಳ್ಳಿ. ಅದು 92ಕ್ಕಿಂತ ಹೆಚ್ಚಿದ್ದರೆ ಆತಂಕಪಡಬೇಕಿಲ್ಲ. ಆಕ್ಸಿಜನ್‌ ಪ್ರಮಾಣ ದಿಢೀರ್‌ ಕಡಿಮೆಯಾದರೆ, ರೋಗ ಲಕ್ಷಣ ಇಲ್ಲದಿದ್ದರೂ ತಡ ಮಾಡದೆ, ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ. ಮಧುಮೇಹ ಇದ್ದವರೂ ಗಾಬರಿಯಾಗಬೇಕಿಲ್ಲ. ಮನಸ್ಸು ಗಟ್ಟಿಮಾಡಿಕೊಂಡರೆ ಈ ಸೋಂಕು ಬರದಂತೆ ತಡೆಯುವುದು, ಒಂದು ವೇಳೆ ಬಂದರೂ ಅದನ್ನು ಗೆಲ್ಲುವುದು ಕಷ್ಟವೇನಲ್ಲ’ ಎಂದು ಅವರು ಕಿವಿಮಾತು ಹೇಳಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು