ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕ್ಕಿಯಲ್ಲಿ ಅವಿತು ದರೋಡೆ ಯತ್ನ: ಬಂಧನ

Last Updated 3 ಜುಲೈ 2021, 18:59 IST
ಅಕ್ಷರ ಗಾತ್ರ

ಬೆಂಗಳೂರು: ಕ್ಯಾಬ್‌ನ ಡಿಕ್ಕಿಯಲ್ಲಿ ಅಡಗಿ, ಪ್ರಯಾಣಿಕರಿಂದ ದರೋಡೆಗೆ ಸಂಚು ರೂಪಿಸಿದ್ದ ತಂಡದಲ್ಲಿದ್ದ ಒಬ್ಬನನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.

ದೆಹಲಿಯ ಕರ್ನಲ್ ಬಹದ್ದೂರ್ ಯಾದವ್ ಅವರ ದರೋಡೆಗೆ ದುಷ್ಕರ್ಮಿಗಳು ಸಂಚು ರೂಪಿಸಿದ್ದರು.

ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಹದ್ದೂರ್, ದೆಹಲಿಯಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗುರುವಾರ ರಾತ್ರಿ ಬಂದಿದ್ದರು. ಕ್ಯಾಬ್‌ ಹತ್ತಿ ಶಿವಾಜಿನಗರಕ್ಕೆ ಕರೆದೊಯ್ಯುವಂತೆ ಚಾಲಕನಿಗೆ ಸೂಚಿಸಿದ್ದರು. ಚಾಲಕ ಟೋಲ್‌ ರಸ್ತೆಯ ಬದಲಿಗೆ ಬೇರೊಂದು ಮಾರ್ಗದಲ್ಲಿ ಅವರನ್ನು ಕರೆದೊಯ್ದಿದ್ದ.

ಬೇಗೂರು ವೃತ್ತದ ಮೂಲಕ ಸಾಗಿ ನಿರ್ಜನ ಪ್ರದೇಶದ ಬಳಿ ಕಾರು ನಿಲ್ಲಿಸಿದ್ದ. ಇದನ್ನು ಪ್ರಶ್ನಿಸಿದಾಗ, ಡಿಕ್ಕಿಯಲ್ಲಿ ಸದ್ದಾಗುತ್ತಿದ್ದು, ಪರಿಶೀಲಿಸುವುದಾಗಿ ಡಿಕ್ಕಿ ತೆರೆದಿದ್ದ. ಅದರಲ್ಲಿ ಅವಿತಿದ್ದ ಇಬ್ಬರು ಚಾಕು ಹಿಡಿದು ಬಹದ್ದೂರ್ ಅವರನ್ನು ಬೆದರಿಸಿ, ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು.

‘ಅದೇ ಮಾರ್ಗದಲ್ಲಿ ಗಸ್ತಿನಲ್ಲಿದ್ದ ಪೊಲೀಸರ ಹೊಯ್ಸಳ ವಾಹನ ಅನುಮಾನಾಸ್ಪದವಾಗಿ ನಿಂತಿದ್ದ ಈ ಕಾರಿನ ಬಳಿಗೆ ತೆರಳಿತ್ತು. ಪೊಲೀಸರನ್ನು ಕಂಡು ಮೂವರೂ ಪರಾರಿಯಾಗಲು ಯತ್ನಿಸಿದ್ದರು. ಅವರನ್ನು ಬೆನ್ನಟ್ಟಿದಾಗ ಒಬ್ಬ ಸಿಕ್ಕಿಬಿದ್ದ. ಇಬ್ಬರು ತಪ್ಪಿಸಿಕೊಂಡರು’ ಎಂದು ಪೊಲೀಸರು ತಿಳಿಸಿದರು.

‘ಕಾರಿನಲ್ಲಿ ಪ್ರಯಾಣಿಸುವವರನ್ನು ದರೋಡೆ ಮಾಡಲು ಚಾಲಕ ಹಾಗೂ ಆರೋಪಿಗಳು ಮೊದಲೇ ಸಂಚು ರೂಪಿಸಿದ್ದರು. ಇದಕ್ಕಾಗಿ ಒಂದು ಗಂಟೆಗೂ ಮೊದಲು ಡಿಕ್ಕಿಯಲ್ಲಿ ಇಬ್ಬರನ್ನು ಕೂರಿಸಲಾಗಿತ್ತು’ ಎಂದು ಬಂಧಿತ ವ್ಯಕ್ತಿ ವಿಚಾರಣೆ ವೇಳೆ ತಿಳಿಸಿದ್ದಾನೆ. ಕ್ಯಾಬ್‌ ಜಪ್ತಿ ಮಾಡಲಾಗಿದ್ದು, ತಲೆಮರೆಸಿಕೊಂಡಿರುವ ಇಬ್ಬರಿಗಾಗಿ ಶೋಧ ಮುಂದುವರಿದಿದೆ’ ಎಂದೂ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT