ಶುಕ್ರವಾರ, ಏಪ್ರಿಲ್ 10, 2020
19 °C
ಐಎಂಎ ಕಚೇರಿ ಎದುರು ಹೂಡಿಕೆದಾರರ ಪ್ರತಿಭಟನೆ

ಐಎಂಎ ಕಚೇರಿ ಎದುರು ಪ್ರತಿಭಟನೆ, ಕಲ್ಲು ತೂರಾಟ; ಲಘು ಲಾಠಿ ಪ್ರಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸಾವಿರಾರು ಜನರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ವಂಚಿಸಿದ ಆರೋಪ ಹೊತ್ತಿರುವ ಐಎಂಎ ಸಮೂಹ ಕಂಪನಿ ಕಚೇರಿ ಎದುರು ಹೂಡಿಕೆದಾರರ ಭಾನುವಾರ ದಿಢೀರ್‌ ಪ್ರತಿಭಟನೆ ನಡೆಸಿದರು. ಇದೇ ವೇಳೆ ಕೆಲವರು ಕಲ್ಲು ತೂರಾಟ ನಡೆಸಿದ್ದರಿಂದ ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಲಘು ಲಾಠಿ ಬೀಸಿದರು.

ಶಿವಾಜಿನಗರದ ಲೇಡಿ ಕರ್ಜನ್ ರಸ್ತೆಯಲ್ಲಿರುವ ಕಂಪನಿ ಕಚೇರಿ ಎದುರು ಮಧ್ಯಾಹ್ನ ಸೇರಿದ್ದ ಪ್ರತಿಭಟನಾಕಾರರು, ‘ಐಎಂಎ ಸಮೂಹ ಕಂಪನಿ ವಿರುದ್ಧ ದಾಖಲಾಗಿರುವ ವಂಚನೆ ಪ್ರಕರಣದ ತನಿಖೆಯನ್ನು ತ್ವರಿತವಾಗಿ ಮುಗಿಸಬೇಕು. ನಮ್ಮ ಹಣವನ್ನು ವಾಪಸು ಕೊಡಿಸಬೇಕು’ ಎಂದು ಒತ್ತಾಯಿಸಿದರು.

ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿ, ‘ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಉ‍ಪಚುನಾವಣೆ ದಿನಾಂಕ ಪ್ರಕಟವಾಗಿದೆ. ಕ್ಷೇತ್ರದಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಯಾವುದೇ ಪ್ರತಿಭಟನೆಗೆ ಅವಕಾಶವಿಲ್ಲ. ಇಲ್ಲಿಂದ ವಾಪಸು ಹೋಗಿ’ ಎಂದು ಕೋರಿದರು.

ಅದಕ್ಕೆ ಕ್ಯಾರೆ ಎನ್ನದ ಪ್ರತಿಭಟನಾಕಾರರು, ಸ್ಥಳ ಬಿಟ್ಟು ಹೋಗುವುದಿಲ್ಲವೆಂದು ಪಟ್ಟು ಹಿಡಿದರು. ಕಂಪನಿ ವಿರುದ್ಧ ಘೋಷಣೆ ಕೂಗಲಾರಂಭಿಸಿದ್ದರು.

ಇದೇ ವೇಳೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮುಮ್ತಾಜ್‌ ಎಂಬುವರಿಗೆ ಕಲ್ಲೇಟು ಬಿದ್ದು ರಕ್ತ ಬರುತ್ತಿತ್ತು. ಕೂಡಲೇ ಅವರನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಪೊಲೀಸರು ಲಘು ಲಾಠಿ ಬೀಸಿ ಪ್ರತಿಭಟನಾಕಾರರನ್ನು ಸ್ಥಳದಿಂದ ಚದುರಿಸಿದರು. ಕೆಲವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ಯರು. ಇದರಿಂದ ಸ್ಥಳದಲ್ಲಿ ರಾತ್ರಿಯವರೆಗೂ ಬಿಗುವಿನ ವಾತಾವರಣವಿತ್ತು. ಮುಂಜಾಗ್ರತಾ ಕ್ರಮವಾಗಿ ಐಎಂಎ ಕಚೇರಿ ಹಾಗೂ ಆಭರಣ ಮಳಿಗೆಗೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ.

ಹಣ ಸಿಗುವವರೆಗೂ ಹೋರಾಟ: ‘ಕಳೆದ ಭಾನುವಾರವೂ ಕಚೇರಿ ಎದುರು ಪ್ರತಿಭಟನೆ ಮಾಡಲಾಗಿತ್ತು. ಹಣ ವಾಪಸು ಕೊಡಿಸುವುದಾಗಿ ಹೇಳಿ ಪೊಲೀಸರು ವಾಪಸು ಕಳುಹಿಸಿದ್ದರು. ಇವಾಗಲೂ ಅವರು ಅದೇ ಮಾತು ಹೇಳುತ್ತಿದ್ದಾರೆ’ ಎಂದು ಪ್ರತಿಭಟನಾಕಾರರು ದೂರಿದರು.

‘ಕಷ್ಟಪಟ್ಟು ದುಡಿದ ಹಣವನ್ನು ಹೂಡಿಕೆ ಮಾಡಿದ್ದೇವೆ. ನಮ್ಮ ಹಣ ನಮಗೆ ಬೇಕು. ಅದು ಸಿಗುವವರೆಗೂ ಹೋರಾಟ ಮಾಡುತ್ತೇವೆ’ ಎಂದು ಅವರು ಎಚ್ಚರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು