ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಲ್ಬರಿ ಗ್ರೀನ್ಸ್’ ಮೇಲೆ ಎಸ್‌ಐಟಿ ದಾಳಿ

ಐಎಂಎ ಪ್ರಕರಣ * ₹ 4.62 ಕೋಟಿ ಡಿ.ಡಿ ನೀಡಿದ ‘ಅಡೊನೈ’
Last Updated 20 ಜುಲೈ 2019, 19:11 IST
ಅಕ್ಷರ ಗಾತ್ರ

ಬೆಂಗಳೂರು: ‘ಐಎಂಎ ಸಮೂಹ’ ಕಂಪನಿ ಮಾಲೀಕ ಮನ್ಸೂರ್ ಖಾನ್ ಅವರನ್ನು ಇ.ಡಿ ಅಧಿಕಾರಿಗಳು ಕಸ್ಟಡಿಗೆ ಪಡೆದಿದ್ದು, ಇತ್ತ ವಿಶೇಷ ತನಿಖಾ ದಳದ (ಎಸ್‌ಐಟಿ) ಅಧಿಕಾರಿಗಳು ಕಂಪನಿ ಒಡೆತನದ ‘ಮಲ್ಬರಿ ಗ್ರೀನ್ಸ್’ ಮಳಿಗೆ ಮೇಲೆ ಶನಿವಾರ ದಾಳಿ ಮಾಡಿದರು.

ಇನ್ಫೆಂಟ್ರಿ ರಸ್ತೆಯಲ್ಲಿರುವ ಮಳಿಗೆಯ ಪ್ರಧಾನ ಕಚೇರಿಯಲ್ಲಿ ಬೆಳಿಗ್ಗೆಯಿಂದ ರಾತ್ರಿಯವರೆಗೆ ‍ಪರಿಶೀಲನೆ ನಡೆಸಿದ ಎಸ್‌ಐಟಿ ತಂಡ, ₹ 60 ಸಾವಿರ ಮೌಲ್ಯದ 300 ಬೆಳ್ಳಿ ನಾಣ್ಯಗಳು ಹಾಗೂ ₹ 52,030 ನಗದು ಜಪ್ತಿ ಮಾಡಿದೆ.

‘ಸಾವಿರಾರು ಜನರಿಂದ ಕೋಟ್ಯಂತರ ರೂಪಾಯಿ ಷೇರು ಸಂಗ್ರಹಿಸಿದ್ದ ಮನ್ಸೂರ್ ಖಾನ್, ಆ ಹಣದಲ್ಲೇ ‘ಮಲ್ಬರಿ ಗ್ರೀನ್’ ಮಳಿಗೆ ತೆರೆದಿದ್ದ. ಮಳಿಗೆಯ ಪ್ರಧಾನ ಕಚೇರಿ ಮೇಲೆ ದಾಳಿ ಮಾಡಿ ಕೆಲ ದಾಖಲೆಗಳನ್ನು ಸುಪರ್ದಿಗೆ ಪಡೆಯಲಾಗಿದೆ’ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ತಿಳಿಸಿದರು.

₹ 4.62 ಕೋಟಿಗೆ ಡಿ.ಡಿ ನೀಡಿದ ‘ಅಡೊನೈ’: ‘ನಗರದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ‘ಐಎಂಎ ಸಮೂಹ’ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದ್ದ ’ಅಡೊನೈ’ ಕಂಪನಿ, ಮನ್ಸೂರ್ ಖಾನ್‌ರಿಂದ ಪಡೆದಿದ್ದ ₹ 4. 60 ಕೋಟಿ ಹಣವನ್ನು ಡಿ.ಡಿ ಮೂಲಕ ಎಸ್‌ಐಟಿಗೆ ಶನಿವಾರ ಹಿಂತಿರುಗಿಸಿದೆ.

‘ಮೇಲ್ಸೇತುವೆ, ಸ್ಕೈವಾಕ್‌ಗಳನ್ನು ನಿರ್ಮಿಸಲು ಬಿಬಿಎಂಪಿ ಕಡೆಯಿಂದ ಐಎಂಎ ಸಮೂಹ ಸಂಸ್ಥೆಯು ಗುತ್ತಿಗೆ ಪಡೆದಿತ್ತು. ಕಾಮಗಾರಿ ಕೈಗೊಳ್ಳಲು ‘ಅಡೊನೈ’ ಕಂಪನಿ ಜೊತೆ ಕರಾರು ಸಹ ಮಾಡಿಕೊಂಡಿತ್ತು. ಕಂಪನಿಯ ಪ್ರತಿನಿಧಿಗಳು ಈಗಾಗಲೇ ₹ 1.5 ಕೋಟಿ ವಾಪಸ್ ನೀಡಿದ್ದರು. ಈಗ ಪುನಃ ₹ 4.62 ಕೋಟಿ ನೀಡಿದ್ದಾರೆ’ ಎಂದು ಅಧಿಕಾರಿ ಮಾಹಿತಿ ನೀಡಿದರು.

ಇ.ಡಿ ಕಚೇರಿ ಎದುರು ಪ್ರತಿಭಟನೆ

‘ಐಎಂಎ ಸಮೂಹ’ ಕಂಪನಿ ವಿರುದ್ಧದ ವಂಚನೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು’ ಎಂದು ಒತ್ತಾಯಿಸಿ ಸಂತ್ರಸ್ತರು ನಗರದಲ್ಲಿರುವ ಇ.ಡಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಕಂಪನಿಯ ಮಾಲೀಕ ಮನ್ಸೂರ ಖಾನ್ ಅವರನ್ನು ಇ.ಡಿ ಅಧಿಕಾರಿಗಳು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಸುದ್ದಿ ತಿಳಿಯುತ್ತಿದ್ದಂತೆ ಕಚೇರಿ ಎದುರು ಸೇರಿದ್ದ ಸಂತ್ರಸ್ತರು, ‘ನಮ್ಮ ಹಣ ವಾಪಸ್ ಕೊಡಿಸಿ’ ಎಂದು ಘೋಷಣೆ ಕೂಗಿದರು.

‘ಕಂಪನಿಯಲ್ಲಿ ಹಣ ಹೂಡಿಕೆ ಮಾಡಿ ಬೀದಿಗೆ ಬಂದಿದ್ದೇವೆ. ನಮಗೆ ನ್ಯಾಯ ಬೇಕು. ಪ್ರಕರಣದ ಸಮಗ್ರ ತನಿಖೆ ನಡೆಸಿ ಹಣವನ್ನು ವಾಪಸ್‌ ಕೊಡಿಸುವ ಕೆಲಸವಾಗಬೇಕು. ಹೀಗಾಗಿ, ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು’ ಎಂದು ಸಂತ್ರಸ್ತರು ಒತ್ತಾಯಿಸಿದರು.

ಇನ್ನೂ ₹ 100 ಕೋಟಿ ಮೌಲ್ಯದ ಆಸ್ತಿ ಪತ್ತೆ

ಮನ್ಸೂರ್‌ ಖಾನ್‌ ಅವರಿಗೆ ಸೇರಿದ ಇನ್ನೂ ₹ 100 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಪತ್ತೆ ಹಚ್ಚಿದ್ದು, ಒಂದೆರಡು ದಿನಗಳಲ್ಲಿ ಜಪ್ತಿ ಮಾಡುವ ನಿರೀಕ್ಷೆ ಇದೆ.

ಬೆಂಗಳೂರು, ದೆಹಲಿ ಸೇರಿದಂತೆ ಬೇರೆ ಬೇರೆ ಸ್ಥಳಗಳಲ್ಲಿ ಸುಮಾರು 30 ಆಸ್ತಿಗಳಿದ್ದು, ಇವುಗಳ ನಿಖರವಾದ ಮೌಲ್ಯವನ್ನು ಇನ್ನೂ ನಿರ್ಧರಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ಶುಕ್ರವಾರ ಬೆಳಗಿನ ಜಾವ ದೆಹಲಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮನ್ಸೂರ್ ಖಾನ್‌ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ದೆಹಲಿ ಮತ್ತು ಚೆನ್ನೈಗಳಿಂದ ಬಂದಿರುವ ಇ.ಡಿ ಅಧಿಕಾರಿಗಳು ಶನಿವಾರ ಬೆಂಗಳೂರಿನಲ್ಲೂ ವಿಚಾರಣೆ ಮುಂದುವರಿಸಿದ್ದಾರೆ.

ಇ.ಡಿ ಈಗಾಗಲೇ ₹ 209 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದೆ. ‘ಮನ್ಸೂರ್‌ ಖಾನ್‌ ಅವರಿಗೆ ಸೇರಿರುವ ಆಸ್ತಿಗಳನ್ನು ಪತ್ತೆ ಹಚ್ಚಿ ಹಣ ಕಳೆದುಕೊಂಡವರಿಗೆ ಹಿಂತಿರುಗಿಸುವ ಮೂಲಕ ನ್ಯಾಯ ಒದಗಿಸುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ’ ಎಂದು ಇ.ಡಿ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT