ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಂಎ ವಂಚನೆ | ಮತ್ತೆ ಐವರು ನಿರ್ದೇಶಕರ ಬಂಧನ

ಜ್ಯುವೆಲ್ಸ್ ಮಳಿಗೆ ಪರಿಶೀಲನೆ, ₹20 ಕೋಟಿ ಮೌಲ್ಯದ ಆಭರಣ ಜಪ್ತಿ
Last Updated 21 ಜೂನ್ 2019, 19:41 IST
ಅಕ್ಷರ ಗಾತ್ರ

ಬೆಂಗಳೂರು: ಸಾವಿರಾರು ಜನರಿಂದ ಷೇರು ಸಂಗ್ರಹಿಸಿ ವಂಚಿಸಿರುವ ‘ಐಎಂಎ ಸಮೂಹ ಕಂಪನಿ’ ವಿರುದ್ಧದ ಪ್ರಕರಣಗಳ ತನಿಖೆ ಚುರುಕುಗೊಳಿಸಿರುವ ಎಸ್‌ಐಟಿ ಅಧಿಕಾರಿಗಳು, ಮತ್ತೆ ಐವರು ನಿರ್ದೇಶಕರನ್ನು ಗುರುವಾರ ರಾತ್ರಿ ಬಂಧಿಸಿದ್ದಾರೆ. ಇದರಿಂದಾಗಿ ಈವರೆಗೆ 13 ನಿರ್ದೇಶಕರ ಬಂಧನವಾದಂತಾಗಿದೆ.

ಶಾದಬ್ ಅಕ್ಬರ್‌ ಖಾನ್(28), ಇಸ್ರಾರ್ ಅಹಮ್ಮದ್ ಖಾನ್ (32), ಫುಜೈಲ್ ಅಹ್ಮದ್ (30), ಮಹಮ್ಮದ್‍ ಇದ್ರೀಸ್ (30) ಹಾಗೂ ಉಸ್ಮಾನ್ ಅಬರೇಜ್ (33) ಬಂಧಿತ ನಿರ್ದೇಶಕರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಿವಾಜಿನಗರದ ಲೇಡಿ ಕರ್ಜನ್ ರಸ್ತೆಯಲ್ಲಿರುವ ಕಂಪನಿ ಒಡೆತನದ ಮೂರು ಅಂತಸ್ತಿನ ಕಟ್ಟಡದಲ್ಲಿ ಎಸ್‌ಐಟಿ ಅಧಿಕಾರಿಗಳು ಗುರುವಾರ ಪರಿಶೀಲನೆ ನಡೆಸಿದರು. ಕಂಪನಿಯ ಪ್ರಧಾನ ಕಚೇರಿಯಲ್ಲಿದ್ದ ದಾಖಲೆಗಳು ಹಾಗೂ ಕಂಪ್ಯೂಟರ್‌ಗಳನ್ನು ಜಪ್ತಿ ಪಡೆದರು. ‘ಐಎಂಎ ಜ್ಯುವೆಲ್ಸ್’ ಮಳಿಗೆಯಲ್ಲಿದ್ದ ಚಿನ್ನ, ಬೆಳ್ಳಿ ಹಾಗೂ ವಜ್ರದ ಆಭರಣಗಳನ್ನು ವಶಪಡಿಸಿಕೊಂಡರು.

ಪರಿಶೀಲನೆ ವೇಳೆ ಸಿಕ್ಕ ದಾಖಲೆಗಳನ್ನು ಆಧರಿಸಿ ಕಂಪನಿಯ ಐವರು ನಿರ್ದೇಶಕರನ್ನೂ ಗುರುವಾರ ರಾತ್ರಿಯೇ ಬಂಧಿಸಿದ ಪೊಲೀಸರು, ಶುಕ್ರವಾರ ಬೆಳಿಗ್ಗೆ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯ ಎಸ್‌ಐಟಿ ಕಸ್ಟಡಿಗೆ ನೀಡಿದೆ.

‘ಈ ಹಿಂದೆ ಏಳು ನಿರ್ದೇಶಕರನ್ನು ಬಂಧಿಸಿ, ಕಸ್ಟಡಿಗೆ ಪಡೆಯಲಾಗಿತ್ತು. ಇದೀಗ ಮತ್ತೆ ಐವರು ನಿರ್ದೇಶಕರನ್ನು ಬಂಧಿಸಲಾಗಿದೆ. ಅವರನ್ನೂ ವಿಚಾರಣೆಗೆ ಒಳಪಡಿಸಿ ಮಾಹಿತಿ ಕಲೆಹಾಕಬೇಕಿದೆ’ ಎಂದು ಎಸ್ಐಟಿ ಮುಖ್ಯಸ್ಥ ಬಿ.ಆರ್.ರವಿಕಾಂತೇಗೌಡ ತಿಳಿಸಿದರು.

ನಾಲ್ಕನೇ ಪತ್ನಿ ಸಹೋದರನ ಮನೆಯಲ್ಲಿ ಶೋಧ

‘ಐಎಂಎ ಸಮೂಹ ಕಂಪನಿ’ ವಂಚನೆ ಪ್ರಕರಣದ ತನಿಖೆ ಕೈಗೊಂಡಿರುವ ಎಸ್‌ಐಟಿ ಅಧಿಕಾರಿಗಳು, ಆರೋಪಿ ಮನ್ಸೂರ್ ಖಾನ್‌ನ ನಾಲ್ಕನೇ ಪತ್ನಿಯ ಸಹೋದರನ ಮನೆ ಮೇಲೆ ಶುಕ್ರವಾರ ದಾಳಿ ನಡೆಸಿದರು.

ಶಿವಾಜಿನಗರದ ಕೊಲ್ಸ್‌ ಪಾರ್ಕ್‌ ಬಳಿ ಇರುವ ಮನೆಗೆ ಬೆಳಿಗ್ಗೆ ತೆರಳಿದ್ದ ಅಧಿಕಾರಿಗಳು, ಸಂಜೆಯವರೆಗೂ ಶೋಧ ನಡೆಸಿದರು. ಈ ಹಿಂದೆ ಖಾನ್‌ನ ಪತ್ನಿಯೂ ಇದೇ ಮನೆಯಲ್ಲಿರುತ್ತಿದ್ದಳು. ದಾಳಿ ನಡೆದ ವೇಳೆ ಆಕೆ ಮನೆಯಲ್ಲಿ ಇರಲಿಲ್ಲ ಎಂದು ಗೊತ್ತಾಗಿದೆ.

ಪತ್ನಿಯ ಸಹೋದರನನ್ನೇ ವಿಚಾರಣೆಗೆ ಒಳಪಡಿಸಿ ಅಧಿಕಾರಿಗಳು ಮಾಹಿತಿ ಕಲೆಹಾಕಿದ್ದಾರೆ. ಯಾವುದೇ ಮಹತ್ವದ ದಾಖಲೆಗಳು ಸಿಕ್ಕಿಲ್ಲವೆಂದು ಮೂಲಗಳು ತಿಳಿಸಿವೆ. ‘ಮನ್ಸೂರ್‌ಗೆ ನಾಲ್ವರು ಪತ್ನಿಯರಿರುವ ವಿಷಯ ತನಿಖೆಯಿಂದ ಗೊತ್ತಾಗಿದೆ. ಆತ ಮತ್ತೊಬ್ಬ ಮಹಿಳೆ ಜೊತೆ ಸಲುಗೆ ಬೆಳೆಸಿಕೊಂಡು, ತನ್ನ ಮನೆಯಲ್ಲೇ ಆಕೆಗೆ ಆಶ್ರಯ ನೀಡಿದ್ದ ಎಂಬ ಸಂಗತಿ ತಿಳಿದುಬಂದಿದೆ. ಆದರೆ, ಆ ಮಹಿಳೆ ಈಗ ಎಲ್ಲಿದ್ದಾಳೆ ಎಂಬುದು ಗೊತ್ತಾಗಿಲ್ಲ’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

‘ಮನ್ಸೂರ್‌ ಅವರ ಸಂಬಂಧಿಕರು ಯಾರು ಎಂಬುದನ್ನು ವಿಳಾಸ ಸಮೇತ ಪಟ್ಟಿ ಮಾಡಲಾಗಿದೆ. ಆ ಸಂಬಂಧಿಕರೆಲ್ಲರ ಮನೆಯಲ್ಲೂ ಶೋಧ ನಡೆಸಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.

ನೌಕರರ ಮನೆ ಮೇಲೆ ದಾಳಿ: ‘ಐಎಂಎ ಸಮೂಹ ಕಂಪನಿ’ ಪ್ರಧಾನ ಕಚೇರಿ ಹಾಗೂ ಕಂಪನಿ ಅಧೀನದ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದ ಕೆಲ ನೌಕರರ ಮನೆ ಮೇಲೂ ಎಸ್‌ಐಟಿ ಅಧಿಕಾರಿಗಳು ದಾಳಿ ಮಾಡಿದರು.

‘ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಹಲವೆಡೆ ಶೋಧ ಮುಂದುವರಿಸಿದ್ದೇವೆ. ಸದ್ಯಕ್ಕೆ ಹೆಚ್ಚಿನ ಮಾಹಿತಿ ನೀಡಲಾಗದು’ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ತಿಳಿಸಿದರು.

ಮುಖ್ಯಾಂಶಗಳು

* ಶಿವಾಜಿನಗರದಲ್ಲಿರುವ ಐಎಂಎ ಜ್ಯುವೆಲ್ಸ್ ಮಳಿಗೆ

* ₹ 20 ಕೋಟಿ ಮೌಲ್ಯದ ಆಭರಣ ಜಪ್ತಿ

* ಬಂಧಿತ ಐವರು ನಿರ್ದೇಶಕರು ಎಸ್ಐಟಿ ಕಸ್ಟಡಿಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT