ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ ಜಾರಿ ಸಂವಿಧಾನ ವಿರೋಧಿ ಕ್ರಮ: ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್‌

Published 24 ಫೆಬ್ರುವರಿ 2024, 15:54 IST
Last Updated 24 ಫೆಬ್ರುವರಿ 2024, 15:54 IST
ಅಕ್ಷರ ಗಾತ್ರ

ಬೆಂಗಳೂರು: ‘ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಯು ಸಂವಿಧಾನ ವಿರೋಧಿ ಕ್ರಮವಾಗಿದೆ. ಈ ಕಾಯ್ದೆಯು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ವಿರುದ್ಧವಾಗಿದೆ’ ಎಂದು ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್‌ ತಿಳಿಸಿದರು. 

ಸಮಾಜ ಕಲ್ಯಾಣ ಇಲಾಖೆ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶದಲ್ಲಿ ‘ಮೂಲಭೂತ ಹಕ್ಕುಗಳು, ರಾಜನೀತಿಯ ನಿರ್ದೇಶಕ ತತ್ವಗಳು ಮತ್ತು ಪೌರತ್ವ’ ಗೋಷ್ಠಿಯಲ್ಲಿ ಭಾಗವಹಿಸಿ, ಮಾತನಾಡಿದರು. 

‘ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆ ಚುನಾವಣೆಗೂ ಮುನ್ನವೇ ಸಿಎಎ ಜಾರಿ ಮಾಡುವುದಾಗಿ ಪ್ರಕಟಿಸಿದ್ದಾರೆ. ಸಿಎಎ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಆದ್ದರಿಂದ ಸಂವಿಧಾನದ ಉಳಿವಿಗಾಗಿ ಇದರ ವಿರುದ್ಧ ಪ್ರತಿಭಟನೆ ಮಾಡಬೇಕಾಗಿದೆ’ ಎಂದು ಹೇಳಿದರು. 

‘ದೇಶದಲ್ಲಿ ಆರ್ಥಿಕ ಅಸಮಾನತೆಯನ್ನು ಕಾಣಬಹುದಾಗಿದೆ. ಕೋವಿಡ್ ಕಾಣಿಸಿಕೊಂಡ ಬಳಿಕ ಕಾರ್ಪೊರೇಟ್ ವ್ಯಕ್ತಿಗಳ ಆಸ್ತಿಯಲ್ಲಿ ಗಣನೀಯ ಏರಿಕೆ ಕಂಡಿದೆ. ಇದೇ ವೇಳೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಮನ ಬಗ್ಗೆ, ರಾಮ ರಾಜ್ಯದ ಬಗ್ಗೆ ಮಾತುಗಳು ಕೇಳಿಬರುತ್ತಿದೆ. ಕೇವಲ ರಾಮನಿಂದ ಹೊಟ್ಟೆ ತುಂಬುವುದಿಲ್ಲ. ಪ್ರಕೃತಿ, ಜೀವನ, ಭೂಮಿ, ಕಾಡಿನಲ್ಲಿಯೇ ರಾಮನನ್ನು ನೋಡಿದವರು ನಮ್ಮ ಜನ. ಆದರೆ, ಈಗ ಕಾಯ್ದೆಗಳಿಗೆ ತಿದ್ದುಪಡಿ ತಂದು, ಅರಣ್ಯ ಭೂಮಿಗಳನ್ನು ಕಾರ್ಪೊರೇಟ್‌ ಸಂಸ್ಥೆಗಳಿಗೆ ಮಾರಲಾಗುತ್ತಿದೆ. ಇದರಿಂದ ಅರಣ್ಯಗಳು ನಾಶವಾಗಿ, ಹವಾಮಾನ ವೈಪರೀತ್ಯದಂತಹ ಸಮಸ್ಯೆ ಎದುರಿಸಬೇಕಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು. 

‘ಸಂವಿಧಾನವೇ ನಮ್ಮ ನಿಜವಾದ ‘ಆಧಾರ್’ ಆಗಿದೆ. ಅದಕ್ಕೆ ಬದ್ಧವಾಗಿ ನಡೆದುಕೊಳ್ಳಬೇಕು. ಈ ಸಮಾವೇಶದಲ್ಲಿ ನಡೆದ ಚರ್ಚೆಗಳನ್ನು ಕರ್ನಾಟಕ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಇಲ್ಲಿನ ಚರ್ಚೆಗಳ ಆಧಾರದಲ್ಲಿ ಕ್ರಿಯಾಯೋಜನೆ ರೂಪಿಸಿ, ಅದನ್ನು ಅನುಷ್ಠಾನ ಮಾಡಬೇಕು’ ಎಂದು ಆಗ್ರಹಿಸಿದರು. 

Quote - ಹಿಂದುತ್ವದ ಹೆಸರಿನಲ್ಲಿ ಭಯದ ವಾತಾವರಣ ಸೃಷ್ಟಿಸಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಮುಸ್ಲಿಮರು ಭಯದಲ್ಲಿ ಜೀವಿಸುತ್ತಿದ್ದಾರೆ ಹರ್ಷ ಮಂದರ್‌ ಲೇಖಕ

ರೈತರನ್ನು ಅಪರಾಧಿಗಳಂತೆ ಕಾಣುತ್ತಿರುವ ಕೇಂದ್ರ: ಸಿದ್ಧಾರ್ಥ್

‘ಪ್ರತಿಭಟನೆಗಳನ್ನು ಹತ್ತಿಕ್ಕುತ್ತಿರುವ ಕೇಂದ್ರ ಸರ್ಕಾರ ರೈತ ಹೋರಾಟಗಾರರನ್ನು ಅಪರಾಧಿಗಳ ರೀತಿ ಕಾಣುತ್ತಿದೆ’ ಎಂದು ‘ದಿ ವೈರ್‌’ನ ಸಂಸ್ಥಾಪಕ ಸಂಪಾದಕ ಸಿದ್ಧಾರ್ಥ್‌ ವರದರಾಜನ್‌ ಹೇಳಿದರು.

ದೆಹಲಿ ಪಂಜಾಬ್ ಮತ್ತು ಹರಿಯಾಣದ ಗಡಿಗಳಲ್ಲಿ ರೈತರ ಮೇಲೆ ದಾಳಿ ಮಾಡಲಾಗಿದೆ. ಅವರನ್ನು ಹತ್ತಿಕ್ಕಲು ಎಲ್ಲ ರೀತಿಯ ಪ್ರಯತ್ನಗಳು ನಡೆಯುತ್ತಿವೆ. ಅವರು ಒಂದೆಡೆ ಸೇರದಂತೆ ಮಾಡಲು ಇಂಟರ್ನೆಟ್‌ ಕಡಿತ ಮಾಡಲಾಗುತ್ತಿದೆ. ಸಾಮಾಜಿಕ ಜಾಲತಾಣ ಕಂಪನಿಗಳಿಗೂ ಮಾಹಿತಿಗಳನ್ನು ಡಿಲಿಟ್ ಮಾಡುವಂತೆ ಒತ್ತಡ ಹಾಕಲಾಗುತ್ತಿದೆ’ ಎಂದರು.

‘ರೈತರು ತಮ್ಮ ಹೋರಾಟಕ್ಕೆ ಸಂಬಂಧಿಸಿದಂತೆ ಹಾಕಿದ ಮಾಹಿತಿಗಳು ವಿಡಿಯೊಗಳನ್ನು ಅಳಿಸಿ ಹಾಕಲಾಗಿದೆ. ಮಾಧ್ಯಮಗಳ ಮೇಲೂ ಹಿಡಿತ ಸಾಧಿಸಲಾಗುತ್ತಿದೆ. ಈ ಕ್ರಮಗಳ ಬಗ್ಗೆ ಕೋರ್ಟ್‌ಗಳು ಕೂಡ ಪ್ರಶ್ನಿಸುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಪೋಸ್ಟ್‌ ಮಾಡಿದಲ್ಲಿ ಅದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದಲ್ಲಿ ಹಂಚಿಕೊಂಡಲ್ಲಿ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT