ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಚಿತ ವರ್ತನೆ: ನಾಲ್ವರ ಬಂಧನ

ಮದ್ಯದ ಅಮಲಿನಲ್ಲಿದ್ದ ಯುವತಿಯರಿಗೆ ರಕ್ಷಕರಾದ ಆರಕ್ಷಕರು!
Last Updated 1 ಜನವರಿ 2020, 22:34 IST
ಅಕ್ಷರ ಗಾತ್ರ

ಬೆಂಗಳೂರು: ಹೊಸ ವರ್ಷಾಚರಣೆ ಸಂದರ್ಭದಲ್ಲಿ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲ ಮತ್ತು ಇಂದಿರಾ ನಗರದಲ್ಲಿ ಮದ್ಯದ ಅಮಲಿನಲ್ಲಿದ್ದ ಕೆಲವು ಯುವಕರು, ಯುವತಿಯರ ಜೊತೆ ಅನುಚಿತವಾಗಿ ವರ್ತಿಸಿದ ಪ್ರಕರಣಗಳು ನಡೆದಿದ್ದರೂ ಕೇವಲ ಒಂದು ದೂರು ಮಾತ್ರ ದಾಖಲಾಗಿದೆ.

ಕಂಠಪೂರ್ತಿ ಮದ್ಯ ಸೇವಿಸಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಕೆಲವು ಯುವತಿಯರನ್ನು ಪೊಲೀಸರು ಅವರವರ ಮನೆಗೆ ತಲುಪಿಸಿದ್ದಾರೆ.ಸಂಭ್ರಮಾಚರಣೆಗೆ ಜೊತೆಯಾಗಿ ಬಂದಿದ್ದ ಅನೇಕ ಯುವಕ– ಯುವತಿಯರು ‍ಪರಸ್ಪರ ಅಪ್ಪಿಕೊಂಡು ಮುದ್ದಾಡು
ವುದು ಸಾಮಾನ್ಯವಾಗಿ ಕಂಡುಬಂತು. ಗದ್ದಲದಲ್ಲಿ ತಮ್ಮ ಮೈಕೈ ಮುಟ್ಟುವ ಮೂಲಕ ಅನುಚಿತವಾಗಿ ವರ್ತಿಸಿದ ಕೆಲವು ಬೀದಿ ಕಾಮಣ್ಣರಿಗೆ ಯುವತಿಯರು ಕಪಾಳ ಮೋಕ್ಷ ಮಾಡಿದರು.

ವ್ಯಾಪಕ ಭದ್ರತೆ ನಡುವೆಯೂ ಯುವತಿಯರ ಜೊತೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಅಶೋಕ ನಗರ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಈ ಸಂಬಂಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ಪ್ರತ್ಯೇಕ ಪ್ರಕರಣಗಳಲ್ಲಿ ಯುವತಿಯರನ್ನು ಮುಟ್ಟುತ್ತಿರುವಾಗಲೇ ರಾಮು, ಶಿವಕುಮಾರ್‌, ಸಿದ್ದು ಮತ್ತು ತಮಿಳುನಾಡಿನ ಕೃಷ್ಣಗಿರಿಯ ಅತೀಕ್‌ ಎಂಬುವವರನ್ನು ಪೊಲೀಸರು ಬಂಧಿಸಿದರು.

ಬೆಳಗಿನ ಜಾವ 1.15ರ ಸುಮಾರಿಗೆ ಎಂ.ಜಿ. ರಸ್ತೆ ಕಡೆಯಿಂದ ಬ್ರಿಗೇಡ್‌ ರಸ್ತೆಗೆ ಬೈಕ್‌ನಲ್ಲಿ ಹೋಗುತ್ತಿದ್ದ ಮಹಿಳೆಯ ಜೊತೆ ಶಿವಕುಮಾರ್‌ ಅನುಚಿತವಾಗಿ ವರ್ತಿಸಿದ. ಮಹಿಳೆ ಕೂಗಿಕೊಂಡಾಗ ಸ್ಥಳದಲ್ಲಿದ್ದ ಮಹಿಳಾ ಪೊಲೀಸ್‌ ಸಿಬ್ಬಂದಿ ಅವನನ್ನು ಪ್ರಶ್ನಿಸಿದರು. ಆಕೆಯ ಜೊತೆಗೂ ಆರೋಪಿ ಅಸಭ್ಯವಾಗಿ ವರ್ತಿಸಿದ. ಸ್ಥಳದಲ್ಲಿದ್ದ ಹಿರಿಯ ಅಧಿಕಾರಿಯೊಬ್ಬರು ಆತನನ್ನು ಹಿಡಿದು ಹೊಯ್ಸಳದಲ್ಲಿ ಹಾಕಿ ಠಾಣೆಗೆ ಕಳುಹಿಸಿದರು.

ಒಪೆರಾ ಜಂಕ್ಷನ್ ಹೌಸ್‍ ಬಳಿ ತಮಿಳುನಾಡಿನಿಂದ ಬಂದಿದ್ದ ಅತೀಕ್‌ ಎಂಬಾತ ಯುವತಿಯೊಬ್ಬರ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ. ತಕ್ಷಣ ಆತನನ್ನು ಹಿಡಿದ ಆಕೆ ಚಪ್ಪಲಿಯಿಂದ ಹೊಡೆದರು. ಆತನನ್ನು ಪೊಲೀಸರು ಎಳೆದುಕೊಂಡು ಹೋದರು. ಕೋರಮಂಗಲದಲ್ಲಿ ಯುವಕರ ಗುಂಪಿನ ದುಂಡಾವರ್ತನೆಯಿಂದ ಆತಂಕಕ್ಕೊಳಗಾದ ಯುವತಿಯೊಬ್ಬರು ಕೂಗಿಕೊಂಡರು. ತಕ್ಷಣ ಪೊಲೀಸರು ಆಕೆಯ ನೆರವಿಗೆ ಧಾವಿಸಿದರು. ಅಷ್ಟರಲ್ಲೇ ಆರೋಪಿಗಳು ಅಲ್ಲಿಂದ ಕಾಲ್ಕಿತ್ತಿದ್ದರು. ಪೊಲೀಸರು ಸಿ.ಸಿ.ಟಿ.ವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಜಾಲಾಡಿದರು.

ಎಂ.ಜಿ. ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ 25ಕ್ಕೂ ಹೆಚ್ಚು ಯುವತಿಯರು ಅರೆ ಪ್ರಜ್ಞಾ ಸ್ಥಿತಿಯಲ್ಲಿದ್ದರೆ, ಬ್ರಿಗೇಡ್ ಜಂಕ್ಷನ್‍ನಲ್ಲಿ ರಸ್ತೆ ಬದಿಯಲ್ಲಿ ಯುವತಿಯೊಬ್ಬರು ನಿದ್ದೆಗೆ ಜಾರಿದ್ದರು. ಇಂಥ ಪರಿಸ್ಥಿತಿ ನಿಭಾಯಿಸಲೆಂದೇ ಅಲ್ಲಲ್ಲಿ ತೆರೆದಿದ್ದ ಸೇಫ್ಟಿ ಐಲ್ಯಾಂಡ್‍ ಸಿಬ್ಬಂದಿ ಯುವತಿಯರನ್ನು ಕ್ಯಾಬ್ ಮೂಲಕ ಅವರವರ ಮನೆಗೆ ತಲುಪಿಸಿದ್ದಾರೆ. ಕುಡಿದ ಮತ್ತಿನಲ್ಲಿ ಓಲಾಡುತ್ತಾ ತಮ್ಮ ಕಾರುಗಳನ್ನು ಹುಡುಕುತ್ತಿದ್ದ ಯುವತಿಯರಿಗೆ, ಪೊಲೀಸರು ನೆರವಾಗಿದ್ದಾರೆ. ವಾಹನ ಇಲ್ಲದವರಿಗೆ ಕ್ಯಾಬ್‍ಗಳನ್ನು ಬುಕ್ ಮಾಡಿ ಮನೆಗಳಿಗೆ ಕಳುಹಿಸಿದ್ದಾರೆ.

ಕೋರಮಂಗಲದಲ್ಲಿ ಅರೆ ಪ್ರಜ್ಞಾ ಸ್ಥಿತಿಯಲ್ಲಿ ಒಬ್ಬಂಟಿಯಾಗಿ ಓಡಾಡುತ್ತಿದ್ದ ಯುವತಿಗೆ ಕೆಲ ಹೊತ್ತು ಸೇಫ್ಟಿ ಐಲ್ಯಾಂಡ್‍ನಲ್ಲಿ ಆಶ್ರಯ ನೀಡಿದ ಪೊಲೀಸರು, ಬಳಿಕ ಮನೆಗೆ ತಲುಪಿಸಿದ್ದಾರೆ.

ಮದ್ಯದ ಅಮಲಿನಲ್ಲಿದ್ದ ಇಬ್ಬರು ಲೈಂಗಿಕ ಅಲ್ಪಸಂಖ್ಯಾತರು, ಯುವಕ, ಯುವತಿಯರ ಜತೆ ಅಸಭ್ಯವಾಗಿ ವರ್ತಿಸಿದ ಪ್ರಸಂಗವೂ ನಡೆಯಿತು. ಅವರಿಬ್ಬರೂ ಯುವಕ-ಯುವತಿಯರ ಕೆನ್ನೆ ಸವರಿ, ತಬ್ಬಿಕೊಳ್ಳಲು ಮುಂದಾಗಿದ್ದರು. ಅದನ್ನು ಕಂಡ ಪೊಲೀಸ್ ಸಿಬ್ಬಂದಿ, ‘ಈ ರೀತಿ ನಡೆದುಕೊಳ್ಳಬಾರದು’ ಎಂದು ಬುದ್ದಿವಾದ ಹೇಳಿದ್ದಕ್ಕೆ ಅವರ ಜತೆಗೂ ಒರಟಾಗಿ ವರ್ತಿಸಿದರು ಎನ್ನಲಾಗಿದೆ.

ಆತಂಕ ಸೃಷ್ಟಿಸಿದ ಯುವಕ!
ಕಂಠಪೂರ್ತಿ ಕುಡಿದಿದ್ದ ಯುವಕನೊಬ್ಬ ಮದ್ಯದ ಅಮಲಿನಲ್ಲಿ ಎಂ.ಜಿ. ರಸ್ತೆಯಲ್ಲಿದ್ದ ಬಹುಮಹಡಿ ಕಟ್ಟಡ ಏರಿ ಸೆಲ್ಫಿ ತೆಗೆದುಕೊಂಡು ಕೆಲಕಾಲ ಆತಂಕದ ವಾತವರಣ ಸೃಷ್ಟಿಸಿದ. ಕೆಳಗಿದ್ದ ಸಾರ್ವಜನಿಕರು ಕೆಳಗೆ ಇಳಿಯುವಂತೆ ಕೂಗಿಕೊಂಡರು ಇಳಿಯಲಿಲ್ಲ. ಪೊಲೀಸರೂ ಸೂಚಿಸಿದರೂ ಕ್ಯಾರೆ ಎನ್ನಲಿಲ್ಲ. ಆನಂತರ ಕಟ್ಟಡದಲ್ಲಿದ್ದ ಇತರೆ ಯುವಕರು ಆತನನ್ನು ಅಲ್ಲಿಂದ ಕರೆದೊಯ್ದರು.

ಬ್ಯಾಗ್‌ ತಂದೊಡ್ಡಿದ ಪೀಕಲಾಟ!
ಚರ್ಚ್‌ಸ್ಟ್ರೀಟ್‍ನಲ್ಲಿ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿ, ಕೆಲಹೊತ್ತು ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಆ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಿದರು.

ಬಾಂಬ್ ನಿಷ್ಕ್ರಿಯ ದಳ ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿ ಖಾಲಿ ಟಿಫಿನ್ ಬಾಕ್ಸ್ ಪತ್ತೆಯಾಗಿದೆ. ಬಳಿಕ ಪೊಲೀಸರು, ‘ಯಾರು ಆತಂಕ ಪಡುವ ಅಗತ್ಯವಿಲ್ಲ’ ಎಂದು ಹೇಳುವ ಮೂಲಕ ವಾತಾವರಣ ತಿಳಿಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT