ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಹಕಾರಿ ಬ್ಯಾಂಕ್‌ಗಳಿಂದ ಜನರ ಆರ್ಥಿಕ ಸ್ಥಿತಿ ಸುಧಾರಣೆ: ಥಾವರಚಂದ್ ಗೆಹಲೋತ್‌

Published 23 ಜೂನ್ 2024, 15:20 IST
Last Updated 23 ಜೂನ್ 2024, 15:20 IST
ಅಕ್ಷರ ಗಾತ್ರ

ಬೆಂಗಳೂರು: ‘ಬಡವರ, ಮಧ್ಯಮ ವರ್ಗದವರ, ವ್ಯಾಪಾರಸ್ಥರ ಆರ್ಥಿಕ ಸ್ಥಿತಿ ಸುಧಾರಣೆ ಮಾಡುವಲ್ಲಿ ಸಹಕಾರಿ ಬ್ಯಾಂಕುಗಳ ಪಾತ್ರ ಮಹತ್ವದಾಗಿದೆ’ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಹೇಳಿದರು.

ಸುಬ್ರಮಣ್ಯೇಶ್ವರ ಕೋ–ಆಪರೇಟಿವ್‌ ಬ್ಯಾಂಕ್‌ ಲಿಮಿಟೆಡ್‌ನ ಸುವರ್ಣ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸುಬ್ರಮಣ್ಯೇಶ್ವರ ಕೋ–ಆಪರೇಟಿವ್‌ ಬ್ಯಾಂಕ್‌ ಕಳೆದ 50 ವರ್ಷಗಳಿಂದ ‘ಸೇವೆಯೇ ನಮ್ಮ ಪರಂಪರೆ’ ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ. 2023–24ನೇ ಸಾಲಿನಲ್ಲಿ ಒಟ್ಟು ₹8.83 ಕೋಟಿ ನಿವ್ವಳ ಲಾಭ ಗಳಿಸಿದೆ. ಗ್ರಾಹಕರ ಆರ್ಥಿಕ ಸ್ಥಿತಿಗತಿಯನ್ನು ಸುಧಾರಿಸುವ ಕೆಲಸ ಮಾಡುತ್ತಿದೆ’ ಎಂದರು.

‘ನಾನು 1990ರಲ್ಲಿ ಮಧ್ಯಪ್ರದೇಶ ಸರ್ಕಾರದಲ್ಲಿ ಸಚಿವನಾದಾಗ ಸಹಕಾರಿ ಕ್ಷೇತ್ರದಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದೇನೆ. ಮಹಾರಾಷ್ಟ್ರ, ಕರ್ನಾಟಕ ರಾಜ್ಯಗಳಿಂದ ಪ್ರೇರಿತರಾಗಿ ಮಧ್ಯಪ್ರದೇಶದಲ್ಲಿ ಸಹಕಾರಿ ಕ್ಷೇತ್ರವನ್ನು ಮುನ್ನಡೆಸಿದ್ದೇವೆ. ಗ್ರಾಹಕರಿಗೆ ಇಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ. ಲಾಭಾಂಶದಲ್ಲೂ ಸದಸ್ಯರಿಗೆ ಸಮಾನವಾಗಿ ಹಂಚಿಕೆ ಮಾಡಲಾಗುತ್ತದೆ’ ಎಂದು ಹೇಳಿದರು.

‘ಕರ್ನಾಟಕ ಮತ್ತು ಮಹಾರಾಷ್ಟ್ರ ಕೇಂದ್ರ ಸರ್ಕಾರಕ್ಕೆ ಆದಾಯ ತೆರಿಗೆ ಸೇರಿದಂತೆ ಸಂಪನ್ಮೂಲ ಕ್ರೋಡೀಕರಣಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಿವೆ. ಇದರಲ್ಲಿ, ಸಹಕಾರಿ ಬ್ಯಾಂಕ್‌ಗಳ ಪಾತ್ರವೂ ಇದೆ. ಆದ್ದರಿಂದ, ಈ ರಾಜ್ಯಗಳ ಆರ್ಥಿಕ ಸ್ಥಿತಿಗತಿಗಳು ಬಹಳ ಚೆನ್ನಾಗಿವೆ’ ಎಂದರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ, ‘ಪಟ್ಟಣ ಸಹಕಾರಿ ಬ್ಯಾಂಕ್‌ಗಳು ತೊಂದರೆಗೆ ಸಿಲುಕಿದರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನೆರವು ನೀಡುತ್ತಿಲ್ಲ. ಈ ಬ್ಯಾಂಕ್‌ಗಳಿಗೆ ಸರ್ಕಾರಗಳಿಂದ ಹೆಚ್ಚಿನ ನೆರವು, ಪ್ರೋತ್ಸಾಹದ ಅಗತ್ಯವಿದೆ’ ಎಂದರು. 

‘ಜನಸಾಮಾನ್ಯರ ಸಾಮಾಜಿಕ, ಆರ್ಥಿಕ ಪ್ರಗತಿಗಾಗಿ ಸಹಕಾರಿ ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತಿವೆ. ಉದ್ಯೋಗ ಸೃಜನೆಗೆ ಒತ್ತು ನೀಡುತ್ತಿವೆ. ರಾಜ್ಯದಲ್ಲಿ 253 ಪಟ್ಟಣ ಸಹಕಾರಿ ಬ್ಯಾಂಕ್‌ಗಳಿದ್ದು, 1,050 ಶಾಖೆಗಳನ್ನು ಒಳಗೊಂಡಿವೆ. ₹47,258 ಕೋಟಿ ಠೇವಣಿ ಹೊಂದಿದ್ದು, ₹426 ಕೋಟಿ ಲಾಭದಲ್ಲಿವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT