ಗುರುವಾರ , ಡಿಸೆಂಬರ್ 1, 2022
27 °C

ಬೆಂಗಳೂರು: ಭವಿಷ್ಯದಲ್ಲಿ ನೀರಿನ ಸಮಸ್ಯೆ ತೀವ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಮುಂದಿನ ದಿನಗಳಲ್ಲಿ ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಲಿದೆ’ ಎಂದು ಐಎಸ್‌ಇಸಿಯ ಸೆಂಟರ್‌ ಆಫ್‌ ಎಕನಾಮಿಕ್‌ ಸ್ಟಡೀಸ್‌ ಆ್ಯಂಡ್‌ ಪಾಲಿಸಿಯ ಪ್ರಾಧ್ಯಾಪಕ ಕೃಷ್ಣರಾಜ್‌ ಎಚ್ಚರಿಸಿದರು.

ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ (ಐಸೆಕ್‌) ‘ವರ್ಸನಿಂಗ್‌ ಕ್ಲೈಮೇಟ್‌ ಚೇಂಜ್‌: ವಾಟ್‌ ಶುಡ್‌ ಕರ್ನಾಟಕ ಆ್ಯಂಡ್‌ ಇಂಡಿಯಾ ಡೂ?’ ಎಂಬ ಸಂಶೋಧನಾ ವರದಿ ಸಿದ್ಧಪಡಿಸಿದ್ದು, ಈ ಕುರಿತು ಚರ್ಚಿಸುವ ಸಲುವಾಗಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ವೆಬಿನಾರ್‌ನಲ್ಲಿ ಅವರು ಮಾತನಾಡಿದರು.

‘ಮಳೆಯ ಪ್ರಮಾಣದಲ್ಲಿ ಏರುಪೇರು ಉಂಟಾಗುವುದರಿಂದ ಕಾವೇರಿ ನದಿ ಜಲಾನಯನ ಪ್ರದೇಶದಲ್ಲಿ ನೀರಿನ ಲಭ್ಯತೆ ಕ್ಷೀಣಿಸಲಿದೆ. ಹವಾಮಾನ ವೈಪರೀತ್ಯದಿಂದಾಗಿ ಭಾರತದ ಕೃಷಿ ವಲಯ ಮತ್ತು ಜಲಮೂಲಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ. 2040ರ ವೇಳೆಗೆ ಜಾಗತಿಕ ತಾಪಮಾನ 1.5 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆ ಆಗಲಿದ್ದು, ಮಹಾ ದುರಂತವೊಂದಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ. ಇದರಿಂದ ದೇಶದ ಆರ್ಥಿಕತೆಗೂ ದೊಡ್ಡ ಪೆಟ್ಟು ಬೀಳಲಿದೆ’ ಎಂದರು.

ಐಎಸ್‌ಇಸಿಯ ಸೆಂಟರ್‌ ಫಾರ್‌ ಇಕಲಾಜಿಕಲ್‌ ಎಕನಾಮಿಕ್ಸ್‌ ಆ್ಯಂಡ್‌ ನ್ಯಾಚುರಲ್‌ ರೀಸೋರ್ಸಸ್‌ನ ಸಹಾಯಕ ಪ್ರಾಧ್ಯಾಪಕ ಡಾ.ಬಾಲಸುಬ್ರಹ್ಮಣ್ಯಂ ‘ಹವಾಮಾನ ವೈಪರೀತ್ಯ ನಿಯಂತ್ರಿಸಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ಬದಲಾವಣೆಗೆ ಒಗ್ಗಿಕೊಳ್ಳುವ ಮನೋಭಾವವನ್ನೂ ಮೈಗೂಡಿಸಿಕೊಳ್ಳಬೇಕು. ಹಾಗಾದಾಗ ಮಾತ್ರ ಕರ್ನಾಟಕದ ಜನ ಮುಂದೆ ಎದುರಾಗಬಹುದಾದ ಅಪಾಯದಿಂದ ಪಾರಾಗಲು ಸಾಧ್ಯ’ ಎಂದು ಸಲಹೆ ನೀಡಿದರು.

ಈಗಾಗಲೇ ಭೂಮಿಯ ಉಷ್ಣಾಂಶ 1.2 ಡಿಗ್ರಿ ಸೆಲ್ಸಿಯಸ್‌ ಮೀರಿದೆ. ಮುಂದಿನ ಕೆಲ ವರ್ಷಗಳಲ್ಲಿ ಪರಿಸರಕ್ಕೆ ಇಂಗಾಲದ ಹೊರಸೂಸುವಿಕೆ ಪ್ರಮಾಣಸಂಪೂರ್ಣವಾಗಿ ತಗ್ಗಿಸುವ ಮೂಲಕ ಜಾಗತಿಕ ತಾಪಮಾನವು 2 ಡಿಗ್ರಿ ಸೆಲ್ಸಿಯಸ್‌ ಮೀರದಂತೆ ತಡೆಯಬೇಕು ಎಂದು ಇಂಟರ್‌ ಗವರ್ನ್‌ಮೆಂಟಲ್‌ ಪ್ಯಾನಲ್‌ ಆನ್‌ ಕ್ಲೈಮೇಟ್‌ ಚೇಂಜ್‌ (ಐಪಿಸಿಸಿ) ತನ್ನ ವರದಿಯಲ್ಲಿ ತಿಳಿಸಿದೆ. ಈ ಕುರಿತೂ ವೆಬಿನಾರ್‌ನಲ್ಲಿ ಚರ್ಚಿಸಲಾಯಿತು. ಐಎಸ್‌ಇಸಿಯ ಪ್ರಭಾರ ನಿರ್ದೇಶಕ ಡಾ.ರಾಜಶೇಖರ್‌, ಉತ್ತರ ಪ್ರದೇಶ ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಪ್ರೊ.ಕೆ.ವಿ.ರಾಜು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು