ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಧಾನ್ಯ ಬೆಳೆಯುವವರಿಗೆ ಪ್ರೋತ್ಸಾಹ ಧನ: ಸಚಿವ ಚೆಲುವರಾಯ ಸ್ವಾಮಿ

‘ನನ್ನ ತಟ್ಟೆಯಲ್ಲಿ ಸಿರಿಧಾನ್ಯಗಳ ಪುನರುತ್ಥಾನ’ ಕಾರ್ಯಕ್ರಮದಲ್ಲಿ ಕೃಷಿ ಸಚಿವ ಚೆಲುವರಾಯ ಸ್ವಾಮಿ
Published 21 ಡಿಸೆಂಬರ್ 2023, 14:29 IST
Last Updated 21 ಡಿಸೆಂಬರ್ 2023, 14:29 IST
ಅಕ್ಷರ ಗಾತ್ರ

ಬೆಂಗಳೂರು: ಸಿರಿಧಾನ್ಯ ಬೆಳೆಯುವ ರೈತರಿಗೆ ಸರ್ಕಾರ ಪ್ರೋತ್ಸಾಹ ಧನ ನೀಡಲಿದೆ ಎಂದು ಕೃಷಿ ಸಚಿವ ಚೆಲುವರಾಯ ಸ್ವಾಮಿ ತಿಳಿಸಿದರು.

ಜನವರಿ 5 ರಿಂದ 7ರವರೆಗೆ ನಡೆಯಲಿರುವ ಅಂತರರಾಷ್ಟ್ರೀಯ ಸಾವಯವ ಸಿರಿಧಾನ್ಯ ಮೇಳದ ಪೂರ್ವಭಾವಿಯಾಗಿ ನಗರದ ಮೌಂಟ್‌ ಕಾರ್ಮೆಲ್ ಕಾಲೇಜಿನಲ್ಲಿ ಗುರುವಾರ ನಡೆದ ‘ನನ್ನ ತಟ್ಟೆಯಲ್ಲಿ ಸಿರಿಧಾನ್ಯಗಳ ಪುನರುತ್ಥಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮೊದಲ ಬಾರಿಗೆ ಅಂತರರಾಷ್ಟ್ರೀಯ ಸಾವಯವ ಸಿರಿಧಾನ್ಯ ಮೇಳ ಆಯೋಜಿಸಲಾಗಿತ್ತು. ಇದೀಗ ಮತ್ತೊಮ್ಮೆ ಸಿರಿಧಾನ್ಯ ಮೇಳವನ್ನು ದೊಡ್ಡ ಮಟ್ಟದಲ್ಲಿ ಏರ್ಪಡಿಸಲಾಗುತ್ತಿದೆ. ಸರ್ಕಾರ ಸಿರಿಧಾನ್ಯಗಳಿಗೆ ಹೆಚ್ಚಿನ ಪ್ರಾಧಾನ್ಯ ನೀಡುತ್ತಿದೆ. ಸಿರಿಧಾನ್ಯಗಳ ಮಹತ್ವ ಕುರಿತು ವಿದ್ಯಾರ್ಥಿ ಸಮೂಹದಲ್ಲಿ ಅರಿವು  ಮೂಡಿಸಲಾಗುತ್ತಿದೆ’ ಎಂದರು.

ಕೃಷಿ ಇಲಾಖೆ ಆಯುಕ್ತ ವೈ.ಎಸ್. ಪಾಟೀಲ್ ಮಾತನಾಡಿ, ‘ಬರಗಾಲವನ್ನು ಎದುರಿಸಿ ಬೆಳೆಯುವ ಶಕ್ತಿ ಸಿರಿಧಾನ್ಯಗಳಿಗಿದೆ. ಕಡಿಮೆ ನೀರಿನಿಂದ ಬೆಳೆಯುವ ಇಂಥ ಉತ್ಪನ್ನಗಳನ್ನು ಪ್ರೋತ್ಸಾಹಿಸಬೇಕು’ ಎಂದರು.

‘ಸಿರಿಧಾನ್ಯಗಳಿಂದ ಹಲವು ರೀತಿಯ ಖಾದ್ಯಗಳನ್ನು ತಯಾರಿಸಲಾಗುತ್ತಿದೆ. ಯುವ ಸಮೂಹ ಇಷ್ಟಪಡುವ ಪಿಜ್ಜಾ, ಬರ್ಗರ್‌ನಂತಹ ಉತ್ಪನ್ನಗಳನ್ನು ಸಹ ಸಿರಿಧಾನ್ಯಗಳಿಂದ ತಯಾರಿಸಲಾಗುತ್ತಿದೆ’ ಎಂದು ಹೇಳಿದರು.

ಕೃಷಿ ಇಲಾಖೆ ಕಾರ್ಯದರ್ಶಿ ವಿ. ಅನ್ಬುಕುಮಾರ್ ಮಾತನಾಡಿ, ‘ಕೆಲ ದಶಕಗಳ ಹಿಂದೆ ಸಿರಿಧಾನ್ಯಗಳು ನಮ್ಮ ದೈನಂದಿನ  ಆಹಾರವಾಗಿದ್ದವು. ಈಗ ಸಿರಿಧಾನ್ಯವನ್ನು ಮತ್ತೆ ಪರಿಚಯಿಸಬೇಕಾದ ಪರಿಸ್ಥಿತಿ ಉಂಟಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ವಾರ್ಷಿಕ ₹ 270 ಕೋಟಿ ಮೌಲ್ಯದ ಸಿರಿಧಾನ್ಯಗಳನ್ನು ರಫ್ತು ಮಾಡುತ್ತಿದ್ದು, ವಿದೇಶಗಳಲ್ಲೂ ಸಿರಿಧಾನ್ಯಗಳಿಗೆ ಬೇಡಿಕೆ ಇದೆ. ವಿದ್ಯಾರ್ಥಿಗಳು ಸಿರಿಧಾನ್ಯ ವಲಯದಲ್ಲಿ ನವೋದ್ಯಮಿಗಳಾಗಿ ಹೊರ ಹೊಮ್ಮಬೇಕು ಎಂದು ಸಲಹೆ ನೀಡಿದರು.

ಮೌಂಟ್ ಕಾರ್ಮೆಲ್ ಸ್ವಾಯತ್ತ ಶಿಕ್ಷಣ ಸಂಸ್ಥೆಯ ಸ್ಕೂಲ್ ಆಫ್ ನ್ಯಾಚುರಲ್ ಆ್ಯಂಡ್‌ ಅಪ್ಲೈಡ್ ಸೈನ್ಸ್‌ನ ಡೀನ್ ಡಾ. ಎ. ಸುಂದರವಳ್ಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT