ಗಡುವು ಮುಗಿದರೂ ಸೇವೆಯಿಲ್ಲ
ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ಸಾವಿರ ಹಾಸಿಗೆಯ 11 ಮಹಡಿಗಳ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಈ ಕಟ್ಟಡ ನಿರ್ಮಾಣ ಕಾಮಗಾರಿಗೆ 2019ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶಂಕುಸ್ಥಾಪನೆ ನೆರವೇರಿಸಿದ್ದರು. ಇದನ್ನು 2021ರೊಳಗೆ ಪೂರ್ಣಗೊಳಿಸಿ, ಸೇವೆ ಪ್ರಾರಂಭಿಸಲು ಈ ಹಿಂದಿನ ಸರ್ಕಾರ ಗಡುವು ನೀಡಿತ್ತು. ಆದರೆ, ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಈವರೆಗೂ ಪೂರ್ಣಗೊಳಿಸಿಲ್ಲ. ಇದರಿಂದ ರೋಗಿಗಳ ಚಿಕಿತ್ಸೆಗೆ ಸಮಸ್ಯೆಯಾಗಿದೆ. ಬಿಎಂಸಿಆರ್‌ಐ ಮೂಲಗಳ ಪ್ರಕಾರ ಈ ಕಟ್ಟಡದ ಕಾಮಗಾರಿ ಶೇ 90ರಷ್ಟು ಮುಗಿದಿದ್ದು, ಕಾರ್ಯಾರಂಭಕ್ಕೆ ಇನ್ನೂ ಮೂರರಿಂದ ನಾಲ್ಕು ತಿಂಗಳು ಬೇಕು. ಈ ಕಟ್ಟಡ ಕಾರ್ಯಾರಂಭಿಸಿದಲ್ಲಿ ವಿಕ್ಟೋರಿಯಾ ಆಸ್ಪತ್ರೆ ಮೇಲಿನ ರೋಗಿಗಳ ಭಾರ ಇಳಿಯಲಿದೆ.