ಶನಿವಾರ, ಅಕ್ಟೋಬರ್ 1, 2022
20 °C
ಗಮನ ಸೆಳೆದ ಈಸೂರು ಹೋರಾಟ, ಜೈ ಜವಾನ್ ಜೈ ಕಿಸಾನ್ ನೃತ್ಯರೂಪಕ

ಸ್ವಾತಂತ್ರ್ಯೋತ್ಸವ: ಎಲ್ಲೆಲ್ಲೂ ದೇಶ ಭಕ್ತಿಯ ಅಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್ ಮರೆಯಾದ ಬಳಿಕ, ಮಾಣೆಕ್ ಷಾ ಪರೇಡ್ ಮೈದಾನಕ್ಕೆ ಇದೇ ಮೊದಲ ಬಾರಿ ಸಾರ್ವಜನಿಕರಿಗೆ ಮುಕ್ತ ಪ್ರವೇಶ ನೀಡಿದ್ದರಿಂದ ಅಧಿಕ ಸಂಖ್ಯೆಯಲ್ಲಿ ಜನರು ಸೇರಿದ್ದರು. ಮೈದಾನದ ತುಂಬಾ ದೇಶ ಭಕ್ತಿಯ ಉತ್ಸಾಹದ ಅಲೆ ಕಾಣುತ್ತಿತ್ತು.

ಮಕ್ಕಳ ನೃತ್ಯಗಳಿಗೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ವಿವಿಧ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳ ಸಂಭ್ರಮ ಮುಗಿಲುಮುಟ್ಟಿತ್ತು. ಕೇಸರಿ, ಬಿಳಿ, ಹಸಿರು ಎಲ್ಲೆಡೆ ರಾರಾಜಿಸುತ್ತಿದ್ದವು. 

ಕಿಕ್ಕೇರಿ ಕೃಷ್ಣಮೂರ್ತಿ ಅವರ ತಂಡದ ಸದಸ್ಯರ ನಾಡಗೀತೆ, ರೈತಗೀತೆಗೆ ಜನರೂ ಧ್ವನಿಗೂಡಿಸಿದರು. ರಾಷ್ಟ್ರಧ್ವಜ ಬೀಸುತ್ತಾ ಸಂಭ್ರಮಿಸಿದರು. ಕವಾಯತಿನ ಶಿಸ್ತು, ಅಚ್ಚುಕಟ್ಟು ನಿರ್ವಹಣೆಗೆ ಮೆಚ್ಚುಗೆ ವ್ಯಕ್ತವಾಯಿತು.  

ಬೆಂಗಳೂರು ಉತ್ತರ ಜಿಲ್ಲೆಯ ಚಿಕ್ಕಬಿದರಕಲ್ಲು ಸರ್ಕಾರಿ ಪ್ರೌಢಶಾಲೆಯ 800 ಮಕ್ಕಳು ‘ಅಮೃತ ಮಹೋತ್ಸವದ ಭಾರತದ ಸಂಭ್ರಮದ’ ನೃತ್ಯ ಪ್ರದರ್ಶಿಸಿದರು. ಉತ್ತರ ವಲಯದ ಹೇರೋಹಳ್ಳಿ ಬಿಬಿಎಂಪಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ 800 ಮಕ್ಕಳು ‘ಈಸೂರು ಹೋರಾಟ’ ಹಾಗೂ ಗುರಪ್ಪನಪಾಳ್ಯದ ಲಿಲ್ಲಿ ರೋಜ್ ಪ್ರೌಢಶಾಲೆಯ 850 ಮಕ್ಕಳು ‘ಜೈ ಜವಾನ್ ಜೈ ಕಿಸಾನ್’ ಕಾರ್ಯಕ್ರಮ ನಡೆಸಿಕೊಟ್ಟರು. ಎಂಇಜಿ ತಂಡದವರು ಟೆಂಟ್ ಪೆಗ್ಗಿಂಗ್, ಕೊಂಬ್ಯಾಟ್ ಫ್ರೀ ಫಾಲ್ ಮತ್ತು ಉತ್ತಮ ದೇಹದಾರ್ಢ್ಯ ಸಾಹಸ ಪ್ರದರ್ಶಿಸಿದರು.

ಧ್ವಜಾರೋಹಣದ ನಂತರ ಮುಖ್ಯಮಂತ್ರಿ ತೆರೆದ ಜೀಪಿನಲ್ಲಿ ಪರೇಡ್ ವೀಕ್ಷಿಸಿದರಲ್ಲದೇ, ಗೌರವ ರಕ್ಷೆ ಸ್ವೀಕರಿಸಿದರು. ಪೊಲೀಸ್, ಗೃಹ ರಕ್ಷಕ ದಳ, ಅಗ್ನಿಶಾಮಕ ಸೇವಾ ಸಿಬ್ಬಂದಿ ಸೇರಿದಂತೆ 36 ತುಕಡಿಗಳ 1,200 ಮಂದಿ ಪಥಸಂಚಲನದಲ್ಲಿ ಭಾಗವಹಿಸಿದ್ದರು.

ಮೃತ ಸೈನಿಕರ ಕುಟುಂಬಕ್ಕೆ ನೌಕರಿ
ಕರ್ತವ್ಯದಲ್ಲಿದ್ದಾಗ ಮೃತರಾಗುವ ಸೈನಿಕರ ಕುಟುಂಬದ ಒಬ್ಬ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ನೀಡಲು ಸರ್ಕಾರ ನಿರ್ಧರಿಸಿದೆ. 

ಯಡಿಯೂರಪ್ಪ ಕಾರ್ಯಕ್ಕೆ ಮೆಚ್ಚುಗೆ
ರಾಜ್ಯವು ಕೋವಿಡ್‌ ಗ್ರಹಣದಿಂದ ಮುಕ್ತಗೊಂಡು ಮತ್ತೆ ಅಭಿವೃದ್ಧಿಯತ್ತ ಸಾಗುತ್ತಿದೆ. ಕೋವಿಡ್‌ ಸಂಕಷ್ಟವನ್ನು ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮರ್ಥವಾಗಿ ನಿಯಂತ್ರಿಸಿದರು. ಆರ್ಥಿಕತೆ ಹಳಿ ತಪ್ಪದಂತೆ ಮುನ್ನಡೆಸಿದ ಕಾರಣ ಆರ್ಥಿಕತೆ ತ್ವರಿತವಾಗಿ ಚೇತರಿಸಿಕೊಂಡಿದೆ.  ಅವರ ಕಾರ್ಯ ಶ್ಲಾಘನೀಯ ಎಂದರು.

ಕವಿತೆಗಳ ಸಾಲು ಪ್ರಸ್ತಾಪ
ಕವಿ ಜಿ.ಎಸ್‌.ಶಿವರುದ್ರಪ್ಪ ಅವರ ‘ನೆಳಲು–ಬೆಳಕುಗಳ ರೆಕ್ಕೆಯ ಬಿಚ್ಚುತ ಹಾರಾಡುವ ಧ್ವಜ ಒಂದೇ’ ಬಿ.ಎಂ.ಶ್ರೀಕಂಠಯ್ಯ ಅವರ ‘ಭಾರತಾಂಭೆಯ ಹಿರಿಯ ಹೆಳ್ಮಗಳೆ, ದಾರಿ ತೋರುವ ಹಿರಿಯ ಸೊಡರೆ ಬಾಳಮ್ಮ, ಬಾಳು’ ಕವಿತೆಯ ಸಾಲುಗಳನ್ನು ಮುಖ್ಯಮಂತ್ರಿ ಪ್ರಸ್ತಾಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು