ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೃತ ಸ್ವಾತಂತ್ರ್ಯೋತ್ಸವ: ಸಿಎಂ ಸಮ್ಮುಖದಲ್ಲಿ ನಡುರಾತ್ರಿ ಧ್ವಜಾರೋಹಣ

ಮಲ್ಲೇಶ್ವರಂನಲ್ಲಿ ಗಾಯನ ಸಂಭ್ರಮ
Last Updated 14 ಆಗಸ್ಟ್ 2022, 21:28 IST
ಅಕ್ಷರ ಗಾತ್ರ

ಬೆಂಗಳೂರು: ವೇದಿಕೆ ಮೇಲೆಲ್ಲ ತಿರಂಗದ ಝಗಮಗ ಬಣ್ಣಗಳ ಬಳುಕು, ಸಭಾಂಗಣದಲ್ಲಿ ಸೇರಿದ್ದವರ ಕೈಯಲ್ಲಿ ಅರಳಿದ್ದ ರಾಷ್ಟ್ರಧ್ವಜಗಳು, ಶಾಸ್ತ್ರೀಯ ನೃತ್ಯ ಮತ್ತು ಸಂಗೀತಗಳ ಹದವಾದ ಸಮ್ಮಿಲನದಲ್ಲಿ ತಾಯಿ ಭಾರತಿಯ ಸ್ತುತಿ, ಬಳಿಕ ಸಮಕಾಲೀನ ಚಿತ್ರಗೀತೆಗಳ ಮೂಲಕ ಜನರಲ್ಲಿ ಸಂಭ್ರಮ ಹೆಚ್ಚಿಸಿದ ಗಾಯಕಿ ಮಂಗ್ಲಿ (ಸತ್ಯವತಿ)ಮತ್ತು ಅವರ ತಂಗಿ ಇಂದಿರಾವತಿ, ಇದಕ್ಕೆ ಕಳಶವಿಟ್ಟಂತೆ ನಡುರಾತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರಿಂದ ಧ್ವಜಾರೋಹಣ.

ಇವು ಡಾ.ಸಿ.ಎನ್.ಅಶ್ವತ್ಥ ನಾರಾ ಯಣ ಪ್ರತಿಷ್ಠಾನ ಮಲ್ಲೇಶ್ವರಂ 18ನೇ ಅಡ್ಡರಸ್ತೆಯ ಸರಕಾರಿ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಸ್ವಾತಂ ತ್ರ್ಯದ ಅಮೃತ ಮಹೋತ್ಸವದ ಝಲಕ್!

ಮಲ್ಲೇಶ್ವರ ಕ್ಷೇತ್ರದ ಶಾಸಕರೂ ಆದ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು

ರಾತ್ರಿ ಒಂಬತ್ತು ಗಂಟೆ ಹೊತ್ತಿಗೆ ಕಾರ್ಯಕ್ರಮ ಶುರುವಾಗಿದ್ದು, ಕ್ಷಣಗಳು ಉರುಳಿದಂತೆ ವಿವಿಧ ನೃತ್ಯಪಟುಗಳು ಭಾರತಾಂಬೆಯನ್ನು ವಿವಿಧ ಭಾವಗಳಲ್ಲಿ ಗ್ರಹಿಸಿ, ಅಭಿವ್ಯಕ್ತಿಸಿದರು. ಭಾರತ ಮಾತೆಯನ್ನು 'ಸೂರ್ಯ ಚಂದ್ರ ಕರ್ಣಾವತಂಸಂ ತಾರಾಗಣ' ಎಂದು ದಿವ್ಯವಾದ ಪ್ರಭಾವಳಿಯಲ್ಲಿ ಬೆಳಗಿಸಿದರು. ಇದಕ್ಕೆ ಭರತನಾಟ್ಯ, ಒಡಿಸ್ಸಿ, ಕಥಕ್ ಮುಂತಾದ ನೃತ್ಯ ಪ್ರಕಾರಗಳು ಆಸರೆಯಾಗಿದ್ದವು.

ಮಂಗ್ಲಿ ಮೋಡಿ: ಚಿತ್ತಾಕರ್ಷಕ ಬಾಣ-ಬಿರುಸು ದೇಶಾಭಿಮಾನದಿಂದ ಜಮಾಯಿಸಿದ್ದ ಹತ್ತು ಸಾವಿರಕ್ಕೂ ಹೆಚ್ಚು ಜನರನ್ನು ಬೇರೊಂದು ಲೋಕಕ್ಕೆ ಕರೆದೊಯ್ದಿದ್ದು ಗಾಯಕಿ ಮಂಗ್ಲಿ ಮತ್ತು ಅವರ ತಂಡ!

'ಕಣ್ಣು ಹೊಡಿಯಾಕ ಕಲಿತಾನ' ಎಂದುಕೊಂಡು ಜನಪದ ಲಯದಿಂದ ಆರಂಭಿಸಿದ ಮಂಗ್ಲಿ, ಬಳಿಕ 'ಏಳು ಬೆಟ್ಟಾದ ಒಡೆಯನೇ...' ಎನ್ನುತ್ತ ಮಲೆ ಮಾದಪ್ಪನಿಂದ ಹಿಡಿದು ಕಾಶಿ ವಿಶ್ವನಾಥನವರೆಗೂ ಭಾರತದ ವಿಹಾರ ಮಾಡಿಸಿದರು!

ದೇಶಕ್ಕೆ 75 ವರ್ಷಗಳ ಹಿಂದೆ ನಟ್ಟ ನಡುರಾತ್ರಿ ಸ್ವಾತಂತ್ರ್ಯ ಬಂತಷ್ಟೆ. ಆ ದಿವ್ಯ ಘಳಿಗೆಯನ್ನು ಕಾರ್ಯಕ್ರಮದಲ್ಲಿ ಭರ್ಜರಿ ಪಟಾಕಿ, ಬಾಣ-ಬಿರುಸು ಮತ್ತು ಸಿಡಿಮದ್ದುಗಳ ನಯನ‌ ಮನೋಹರ ಪ್ರದರ್ಶನದ ಮೂಲಕ ಮರುಸೃಷ್ಟಿ ಮಾಡಲಾಯಿತು.

ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಅಶ್ವತ್ಥನಾರಾಯಣ ಸೇರಿದಂತೆ ಹಲವರ ಚಿತ್ತಾರಗಳ ಬೆಡಗಿನ ಲೋಕವು ಗಮನಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT