ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಸರಳ–ಸಡಗರದ ಸ್ವಾತಂತ್ರ್ಯೋತ್ಸವ

ಸ್ವಾತಂತ್ರ್ಯದ ಅಮೃತ ಮಹೋತ್ಸವ * ಮುಗಿಲೆತ್ತರಕ್ಕೆ ಹಾರಿದ ರಾಷ್ಟ್ರಧ್ವಜಗಳು
Last Updated 15 ಆಗಸ್ಟ್ 2021, 21:05 IST
ಅಕ್ಷರ ಗಾತ್ರ

ಬೆಂಗಳೂರು: 75ನೇ ಸ್ವಾತಂತ್ರ್ಯದಿನವನ್ನು ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ದ ಹೆಸರಿನಲ್ಲಿ ನಗರದಲ್ಲಿ ಭಾನುವಾರ ಸರಳವಾಗಿ ಆಚರಿಸಲಾಯಿತು. ಅದ್ಧೂರಿ ಕಾರ್ಯಕ್ರಮಗಳಿಗೆ ಕೋವಿಡ್‌ ಕಾರಣಕ್ಕಾಗಿ ಕಡಿವಾಣ ಹಾಕಲಾಗಿತ್ತು. ಆದರೆ ಮುಗಿಲೆತ್ತರಕ್ಕೆ ಹಾರಿದ ರಾಷ್ಟ್ರಧ್ವಜಗಳು ಜನರ ದೇಶಪ್ರೇಮದ ಉತ್ಕಟತೆಯನ್ನು ಪರಿ ಪರಿಯಾಗಿ ಸಾರಿದವು.

ಶಾಲಾ–ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಲ್ಲದೆಯೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಶಿಕ್ಷಕರು– ಸಿಬ್ಬಂದಿ ವರ್ಗದವರು ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಧ್ವಜಾರೋಹಣ ಮಾಡಿ, ರಾಷ್ಟ್ರಗೀತೆ ಹಾಡುವಮೂಲಕ ಸರಳವಾಗಿ ಕಾರ್ಯಕ್ರಮ ಆಚರಿಸಿದರು.

ಹಲವರು ಆಟೊ–ಬೈಕ್‌ಗಳಲ್ಲಿ ತ್ರಿವರ್ಣ ಧ್ವಜಗಳನ್ನು ಕಟ್ಟಿಕೊಂಡು ಸಂಚರಿಸುತ್ತಿದ್ದುದು ಗಮನ ಸೆಳೆಯಿತು. ಜೀಪುಗಳು, ಕಾರುಗಳ ಮೇಲೂ ರಾಷ್ಟ್ರ ಧ್ವಜಗಳು ಹಾರಾಡಿದವು. ಕೆಲವರಂತೂ ಸೈಕಲ್ ಅನ್ನೇ ತ್ರಿವರ್ಣ ಧ್ವಜದ ಮಾದರಿಯಲ್ಲಿ ಅಲಂಕರಿಸಿ ಅದಕ್ಕೊಂದು ಧ್ವಜ ಸಿಕ್ಕಿಸಿಕೊಂಡು ನಗರದ ರಸ್ತೆಗಳಲ್ಲಿ ಸಂಚರಿಸುವ ಮೂಲಕ ವಿಭಿನ್ನವಾಗಿ ಸ್ವಾತಂತ್ರ್ಯೋತ್ಸವ ಆಚರಿಸಿದರು.

ಬಿಬಿಎಂಪಿಯಿಂದ ಆಚರಣೆ:

ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ ಸಿಂಗ್ ಹಾಗೂ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿದರು.

ಕೋವಿಡ್ ಸಂಕಷ್ಟ ಕಾಲದಲ್ಲಿ ವಿವಿಧ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿದ ವೈದ್ಯರು ಹಾಗೂ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಾಧಿಕಾರಿ ಗಳನ್ನುಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸನ್ಮಾನಿಸಲಾಯಿತು. ವಿಶೇಷ ಆಯುಕ್ತರಾದ ತುಳಸಿ ಮದ್ದಿನೇನಿ, ಮನೋಜ್ ಜೈನ್, ಬಸವರಾಜ್, ಡಿ.ರಂದೀಪ್, ದಯಾನಂದ್, ರೆಡ್ಡಿ ಶಂಕರ ಬಾಬು, ರವೀಂದ್ರ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಶ್ವವಿದ್ಯಾಲಯಗಳಲ್ಲಿ ಸಂಭ್ರಮ:

ನಗರದ ವಿಶ್ವವಿದ್ಯಾಲಯಗಳಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಮಹಾತ್ಮಾ ಗಾಂಧಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್‌ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಲಿಂಗರಾಜ ಗಾಂಧಿ, ’ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ನಾವಿದ್ದೇವೆ. ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಮಹನೀಯರನ್ನು ಆದರ್ಶವಾಗಿಟ್ಟುಕೊಂಡು ಯುವ ಪೀಳಿಗೆಯು ಉನ್ನತ ಸಾಧನೆ ಮಾಡಬೇಕು’ ಎಂದರು.

ಅಮೃತ ಮಹೋತ್ಸವದ ಅಂಗವಾಗಿ ವಿಶ್ವವಿದ್ಯಾಲಯದ ಎನ್ಎಸ್ಎಸ್ ಕೋಶ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ಸ್ವಾತಂತ್ರ್ಯೋತ್ಸವ ಕುರಿತು ವಿಶೇಷ ಉಪನ್ಯಾಸವನ್ನು ಆನ್‌ಲೈನ್‌ನಲ್ಲಿ ಆಯೋಜಿಸಿತ್ತು. 200 ಕಾಲೇಜಿನಿಂದ ಸುಮಾರು 800ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪ್ರಾಚಾರ್ಯರು ಭಾಗವಹಿಸಿದರು.

ಸೇನೆಯ ನಿವೃತ್ತ ಅಧಿಕಾರಿ ಮೇಜರ್ ಜನರಲ್ ಅರ್ಜುನ್ ಮುತ್ತಣ್ಣ, ವಿಶ್ವವಿದ್ಯಾಲಯದ ಕುಲಪತಿ ಡಾ. ಕುಮುದಾ, ಕುಲಸಚಿವರಾದ ಡಾ. ವೆಂಕಟೇಶ ಮೂರ್ತಿ, ಡಾ. ಜನಾರ್ದನಂ, ವಿತ್ತಾಧಿಕಾರಿ ವಸಂತ್ ಕುಮಾರ್ ಹಾಗೂ ಸಾಂಸ್ಕೃತಿಕ ಸಂಯೋಜಕರಾದ ಡಾ. ಪವಿತ್ರ ಉಪಸ್ಥಿತರಿದ್ದರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿಯೂ ಸ್ವಾತಂತ್ರ್ಯೋತ್ಸವ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆದವು.

ರಕ್ತದಾನ ಶಿಬಿರ:

ಬೆಂಗಳೂರು ಸಗಟು ಬಟ್ಟೆ ವ್ಯಾಪಾರಿಗಳ ಸಂಘದಿಂದ ಅರ್ಥಪೂರ್ಣವಾಗಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಸಂಘ ಮತ್ತು ಸುಮನ್ ಚಾರಿಟಬಲ್‌ ಟ್ರಸ್ಟ್‌ಗಳ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಿ, ಸುಮಾರು 55 ಯುನಿಟ್‌ ರಕ್ತ ಸಂಗ್ರಹಿಸಲಾಯಿತು. ರೋಟರಿ, ರೆಡ್‌ಕ್ರಾಸ್ ಹಾಗೂ ಜಯನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದೊಂದಿಗೆ ಈ ಶಿಬಿರ ನಡೆಯಿತು. ಸೈಕಲ್‌ ಜಾಥಾವನ್ನೂ ಏರ್ಪಡಿಸಲಾಯಿತು. ಸಂಘದ ಅಧ್ಯಕ್ಷ ಪ್ರಕಾಶ್‌ , ಕಾರ್ಯದರ್ಶಿ ಯೋಗೀಶ್‌ ಸೇಠ್‌ ಹಾಗೂ ಇತರರು ಭಾಗವಹಿಸಿದರು.

ಕಚ್ಚೆ ಸೀರೆಯಲ್ಲಿ ಮಿಂಚಿದ ಮಹಿಳಾ ಬೈಕರ್‌ಗಳು

ಸ್ವಾತಂತ್ರ್ಯೋತ್ಸವ ಅಂಗವಾಗಿ ‘ಷೀ ಫಾರ್ ಸೊಸೈಟಿ’ ಸಂಘಟನೆಯು ಹೆಬ್ಬಾಳದಲ್ಲಿ 75 ಮಹಿಳಾ ಬೈಕರ್‌ಗಳಿಗೆ ಫ್ಯಾಷನ್ ಷೋ ಏರ್ಪಡಿಸಿತ್ತು. ಸಾಂಪ್ರಾದಾಯಿಕ ಕಚ್ಚೆ ಸೀರೆ ಧರಿಸಿ, 100 ಅಡಿ ವೇದಿಕೆಯ ಮೇಲೆ ಬೈಕ್ ಓಡಿಸಿದ ಮಹಿಳೆಯರು ಗಮನ ಸೆಳೆದರು.

ಕೋಲಾರ ಜಿಲ್ಲೆಯ ಮಾಜಿ ಸೈನಿಕರ 75 ಕುಟುಂಬಗಳ ಹೆಣ್ಣು ಮಕ್ಕಳು 300 ಅಡಿ ಉದ್ದದ ತ್ರಿವರ್ಣ ಧ್ವಜ ಹಿಡಿದು ವೇದಿಕೆಯ ಮೇಲೆ ಪಥ ಸಂಚಲನ ಮಾಡಿದರು. ಈ ಕುಟುಂಬಗಳಿಗೆ ಸಂಘಟನೆಯ ವತಿಯಿಂದ ಸೌರದೀಪಗಳನ್ನು ವಿತರಿಸಿ ಸನ್ಮಾನಿಸಲಾಯಿತು.

ಮೈಸೂರು ಸಾಬೂನು ಕಾರ್ಖಾನೆ ಬಳಿ ಬೈಕ್ ರ‍್ಯಾಲಿಗೆ ಕೆಎಸ್‍ಡಿಎಲ್‍ನ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಹಸಿರು ನಿಶಾನೆ ತೋರಿದರು. ಅಲ್ಲಿಂದ ನಾನಾ ಭಾಗಗಳಲ್ಲಿ ಸಂಚರಿಸಿದ ರ‍್ಯಾಲಿಯುಹೆಬ್ಬಾಳ ಬಳಿ ಕೊನೆಗೊಂಡಿತು. ಸಂಘಟನೆಯ ಅಧ್ಯಕ್ಷರಾದ ಹರ್ಷಿಣಿ ವೆಂಕಟೇಶ್ ಉಪಸ್ಥಿತರಿದ್ದರು.

‘ರಾಯಣ್ಣ ಸ್ವಾತಂತ್ರ್ಯ ಸಂಗ್ರಾಮದ ಬೆಂಕಿ ಚೆಂಡು’

ಸ್ವಾತಂತ್ರ್ಯೋತ್ಸವದ ದಿನದಂದೇ ಜನಿಸಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜನ್ಮದಿನವನ್ನೂ ನಗರದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ನಗರದಲ್ಲಿರುವ ರಾಯಣ್ಣನ ಪ್ರತಿಮೆಗೆ ಪುಷ್ಪನಮನ ಸಲ್ಲಿಸಲಾಯಿತು.

ಮಲ್ಲೇಶ್ವರದ ಸುಬ್ರಹ್ಮಣ್ಯನಗರದಲ್ಲಿನ ಸಂಗೊಳ್ಳಿ ರಾಯಣ್ಣ ಪಾರ್ಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ‘ರಾಯಣ್ಣ ಸ್ವಾತಂತ್ರ್ಯ ಸಂಗ್ರಾಮದ ಬೆಂಕಿ ಚೆಂಡು. ಕೇವಲ 34 ವರ್ಷಗಳಷ್ಟೇ ಬದುಕಿದ ಈ ಮಹಾನ್‌ ಚೇತನ ನಮಗೆಲ್ಲರಿಗೂ ದಿವ್ಯಸ್ಫೂರ್ತಿ. ಬ್ರಿಟಿಷರಿಗೆ ಅವರು ಸಿಂಹಸ್ವಪ್ನರಾಗಿದ್ದರು’ ಎಂದರು.

ಸಾಮಾಜಿಕ ಮಾಧ್ಯಮಗಳಲ್ಲಿ ಸ್ವಾತಂತ್ರ್ಯದ ಸಡಗರ

ಸ್ವಾತಂತ್ರ್ಯೋತ್ಸವದ ಶುಭಾಶಯ ವಿನಿಮಯ, ಅಭಿಪ್ರಾಯ ಹಂಚಿಕೆಗೆ ಸಾಮಾಜಿಕ ಜಾಲತಾಣ ವೇದಿಕೆಯಾಯಿತು. ಹಲವು ಚಿತ್ರಗಳು, ಸಂದೇಶಗಳು, ಸ್ವಾತಂತ್ರ್ಯ ಹೋರಾಟಗಾರರ ಸಾಧನೆ ಬಿಂಬಿಸುವ ಪೋಸ್ಟ್‌ಗಳನ್ನು ನೆಟ್ಟಿಗರು ಹಂಚಿಕೊಂಡರು.

ಶಾಲಾ-ಕಾಲೇಜುಗಳು ಇನ್ನೂ ತೆರೆಯದ ಕಾರಣ, ಶಾಲಾ ಆವರಣದಲ್ಲಿ ಮಕ್ಕಳ ಚಿಲಿಪಿಲಿ ಇರಲಿಲ್ಲ. ಪುಟಾಣಿಗಳು ಮನೆಯಲ್ಲಿಯೇ ಹಾಡು, ನೃತ್ಯ, ಭಾಷಣದಂತಹ ಚಟುವಟಿಕೆಯಲ್ಲಿ ಪಾಲ್ಗೊಂಡು ಅದನ್ನು ಆನ್‌ಲೈನ್‌ ವೇದಿಕೆಗಳಲ್ಲಿ ಹಂಚಿಕೊಳ್ಳುವ ಮೂಲಕ ಸಂಭ್ರಮಿಸಿದರು.ಮಹಾತ್ಮಾ ಗಾಂಧೀಜಿ, ಜವಾಹರಲಾಲ್ ನೆಹರು, ಸುಭಾಷ್‍ಚಂದ್ರ ಬೋಸ್‌ರಂತಹ ರಾಷ್ಟ್ರನಾಯಕರ ಸಂದೇಶಗಳನ್ನು ವಿದ್ಯಾರ್ಥಿಗಳು ಸಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT