ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿರಾ ಕ್ಯಾಂಟೀನ್‌: ಈಡೇರದ ಭರವಸೆಗಳು!

ರಾಗಿ ಮುದ್ದೆ, ಇಡ್ಲಿ, ಬಿಸಿಬೇಳೆ ಬಾತ್‌ಗೆ ಸಿಕ್ಕಿಲ್ಲ ಅನುಮತಿ; ಹೊಸ ಕ್ಯಾಂಟೀನ್‌ ನಿರ್ಮಾಣಕ್ಕೂ ಮೌನ
Published 18 ಏಪ್ರಿಲ್ 2024, 20:01 IST
Last Updated 18 ಏಪ್ರಿಲ್ 2024, 20:01 IST
ಅಕ್ಷರ ಗಾತ್ರ

ಬೆಂಗಳೂರು: ಬಡವರ ಜೇಬಿಗೆ ಹೊರೆಯಾಗದಂತೆ ಹಸಿವನ್ನು ತಣಿಸುವ ‘ಇಂದಿರಾ ಕ್ಯಾಂಟೀನ್‌’ಗಳನ್ನು ಬಿಜೆಪಿ ಕಡೆಗಣಿಸಿ, ದೂಳು ಹಿಡಿಯುವಂತೆ ಮಾಡಿತ್ತು. ತನ್ನದೇ ಯೋಜನೆ ಎಂದು ಅದನ್ನು ಪ್ರಚಾರದ ಸರಕಾಗಿ ಮಾಡಿಕೊಂಡಿದ್ದ ಕಾಂಗ್ರೆಸ್‌, ಹೊಸ ರೂಪ ನೀಡುವ ಪ್ರತಿಷ್ಠೆಯ ಮಾತುಗಳನ್ನಾಡಿದ್ದರೂ ಅದು ಇನ್ನೂ ಕಾರ್ಯಗತವಾಗಿಲ್ಲ.

ತಮಿಳುನಾಡಿನ ‘ಅಮ್ಮ ಕ್ಯಾಂಟೀನ್‌’ ಮಾದರಿಯಲ್ಲಿ ರಾಜ್ಯದಲ್ಲೂ ಕಡಿಮೆ ದರದಲ್ಲಿ ಆಹಾರ ಒದಗಿಸಲು 2017ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ನಾಯಕಿ ದಿವಂಗತ ಇಂದಿರಾಗಾಂಧಿ ಹೆಸರಿನಲ್ಲಿ ‘ಇಂದಿರಾ ಕ್ಯಾಂಟೀನ್‌’ ಆರಂಭಿಸಿದ್ದರು. ಬೆಂಗಳೂರು ಅಲ್ಲದೆ ರಾಜ್ಯದ ವಿವಿಧ ನಗರಗಳಲ್ಲಿ ಈ ಕ್ಯಾಂಟೀನ್‌ಗಳು ತೆರೆದುಕೊಂಡವು. ಆದರೆ, ಆರಂಭದಲ್ಲಿದ್ದ ಉತ್ಸಾಹ ವರ್ಷ ಕಳೆದಂತೆ ಕರಗುತ್ತಾ ಬಂದಿತು. ‘ಇಂದಿ‌ರಾ ಕ್ಯಾಂಟೀನ್‌’ಗಳಲ್ಲಿನ ಆಹಾರದ ಗುಣಮಟ್ಟವೂ ಕುಸಿಯಿತು.

ಕಾಂಗ್ರೆಸ್‌ ನೇತೃತ್ವ ಸರ್ಕಾರ ಹೋಗಿ ಬಿಜೆಪಿ ನೇತೃತ್ವದ ಸರ್ಕಾರ ಬಂದ ಮೇಲೆ, ಬೆಂಗಳೂರು ವ್ಯಾಪ್ತಿಯಲ್ಲಿದ್ದ ‘ಇಂದಿರಾ ಕ್ಯಾಂಟೀನ್‌’ಗಳು ಸೊರಗಿದವು, ದೂಳು ಹಿಡಿದವು. ಸೇವಾ ಸಂಸ್ಥೆಗಳು ಸೇರಿದಂತೆ ಕೆಲವರಿಗೆ ಗುತ್ತಿಗೆಗೆ ನೀಡಲಾಗಿದ್ದ ಕ್ಯಾಂಟೀನ್‌ಗಳಲ್ಲಿ ಆಹಾರ ನೀಡುವ ಸಂಖ್ಯೆಗಳೂ ಕಡಿಮೆಯಾದವು. ಬಿಬಿಎಂಪಿಗೆ ಸರ್ಕಾರ ಅನುದಾನ ನೀಡಲಿಲ್ಲ. ಹೀಗಾಗಿ, ತಾನೇ ನಿರ್ವಹಿಸಬೇಕಿದ್ದ ‘ಇಂದಿರಾ ಕ್ಯಾಂಟೀನ್‌’ಗಳನ್ನು ಸರ್ಕಾರದ ಅನುದಾನದ ಕೊರತೆ ನೆಪವೊಡ್ಡಿ ಪಾಲಿಕೆ ಸುಮ್ಮನಾಯಿತು. ಸರ್ಕಾರ ಒಂದೆರಡು ಬಾರಿ ಹೆಸರು ಬದಲಿಸಲು ಮುಂದಾಯಿತು. ಕಾಂಗ್ರೆಸ್‌ ನಾಯಕರು ಆಗಾಗ ಧ್ವನಿ ಎತ್ತಿದಾಗ ವಿಷಯ ಬದಿಗೆ ಸರಿಯಿತು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇದೇ ‘ಇಂದಿರಾ ಕ್ಯಾಂಟೀನ್’ ಚುನಾವಣಾ ವಿಷಯವಾಯಿತು. ಕಾಂಗ್ರೆಸ್ ನಾಯಕರು ಇದನ್ನು ಹೆಚ್ಚಾಗಿಯೇ ಪ್ರಚಾರಕ್ಕೆ ಬಳಸಿಕೊಂಡರು. ‘ನಮ್ಮ ನಾಯಕಿ ಇಂದಿರಾಗಾಂಧಿ’ ಹೆಸರಿನ ಕ್ಯಾಂಟೀನ್‌ ಅನ್ನು ಬಿಜೆಪಿಯರು ಮುಚ್ಚಿದರು. ಹಸಿದವರಿಗೆ ಹೊಟ್ಟೆತುಂಬಾ ಅನ್ನ ನಾವು ಕೊಡುತ್ತೇವೆ’ ಎಂದರು. ಅಧಿಕಾರಕ್ಕೆ ಬಂದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಆದಿಯಾಗಿ ಎಲ್ಲವರೂ ‘ಇಂದಿರಾ ಕ್ಯಾಂಟೀನ್‌’ಗೆ ಮರುಜೀವ, ಹೊಸ ರೂಪ, ಹೊಸ ಮೆನು, ಗುಣಮಟ್ಟದ ಆಹಾರ ನೀಡುವುದಾಗಿ ಹೇಳಿದರು. ಬಜೆಟ್‌ನಲ್ಲೂ ಘೋಷಿಸಲಾಯಿತು. ಆದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸ ಮೆನುವಿನೊಂದಿಗೆ ಆರಂಭವಾಗಲು ಸರ್ಕಾರವೇ ಇನ್ನೂ ಅನುಮತಿ ನೀಡಿಲ್ಲ.

ನಗರದಲ್ಲಿ ವಾರ್ಡ್‌ಗೊಂದು, ದೊಡ್ಡ ವಾರ್ಡ್‌ಗಳಲ್ಲಿ ಎರಡು–ಮೂರು ‘ಇಂದಿರಾ ಕ್ಯಾಂಟೀನ್‌’ ಆರಂಭಿಸಲು ಬಿಬಿಎಂಪಿಗೆ ಸರ್ಕಾರ ಸೂಚನೆ ನೀಡಿತು. 169 ‘ಇಂದಿರಾ ಕ್ಯಾಂಟೀನ್‌’ಗಳಲ್ಲಿ ಬೆರಳೆಣಿಕೆಯಷ್ಟು ಮಾತ್ರ ಕಾರ್ಯನಿರ್ವಹಿಸುತ್ತಿದ್ದವು. ಎಲ್ಲವನ್ನೂ ದುರಸ್ತಿ ಮಾಡಲಾಯಿತು. ಹೊಸ ಕ್ಯಾಂಟೀನ್‌ ನಿರ್ಮಿಸಲು, ರಾಗಿ ಮುದ್ದೆ, ಇಡ್ಲಿ, ಬಿಸಿಬೇಳೆ ಬಾತ್‌, ಮಂಗಳೂರು ಬನ್ಸ್‌ ಸೇರಿದಂತೆ ಹೊಸ ಮೆನುವಿನೊಂದಿಗೆ ಕಾರ್ಯಾರಂಭ ಮಾಡುವ ಟೆಂಡರ್‌ ಅನ್ನೂ ಬಿಬಿಎಂಪಿ ಅಂತಿಮಗೊಳಿಸಿತ್ತು. ಇದಕ್ಕೆ ಅನುಮತಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ. ಜನವರಿಯಲ್ಲಿ ಮನವಿ ಸಲ್ಲಿಸಿದ್ದರೂ ಅನುಮತಿ ಇನ್ನೂ ಸಿಕ್ಕಿಲ್ಲ.

ಹೊಸ ಟೆಂಡರ್‌ನಲ್ಲಿ ಹೊಸ ಮೆನುವಿನ ಆಹಾರ ಸರಬರಾಜು ಮಾಡಲು ಹಾಗೂ ಹೊಸ ಕ್ಯಾಂಟೀನ್‌ ನಿರ್ಮಿಸಲು, ₹132 ಕೋಟಿ ವೆಚ್ಚ ಮಾಡಲು ರಾಜ್ಯ ಸರ್ಕಾರದ ಅನುಮತಿ ಕಾಯುತ್ತಿರುವ ಬಿಬಿಎಂಪಿ, ಹಿಂದಿನ ಗುತ್ತಿಗೆಯನ್ನೇ ಮುಂದುವರಿಸಿ, ಹಳೆಯ ರೀತಿಯಲ್ಲೇ ಆಹಾರ ನೀಡುತ್ತಿದೆ. ‘ಗುಣಮಟ್ಟವಿಲ್ಲ, ಸ್ವಚ್ಛತೆ ಇಲ್ಲ’ ಎಂಬ ದೂರು ಮುಂದುವರಿದಿದೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಂದು ‘ಇಂದಿರಾ ಕ್ಯಾಂಟೀನ್‌’ ಆರಂಭಿಸಿದ್ದು ಬಿಟ್ಟರೆ ಸರ್ಕಾರ ಇನ್ನೇನು ಮಾಡಿಲ್ಲ. ‘ಇಂದಿರಾ ಕ್ಯಾಂಟೀನ್‌’ಗಳನ್ನು ನಿರ್ವಹಿಸಲು 2017ರಲ್ಲಿ ₹50 ಕೋಟಿ ಅನುದಾನ ಬಿಬಿಎಂಪಿಗೆ ಸಿಕ್ಕದ್ದೇ ಕೊನೆ. ಆ ನಂತರ ಯಾವ ರೀತಿಯ ಅನುದಾನವೂ ಈ ಬಾಬ್ತಿನಲ್ಲಿ ಪಾಲಿಕೆಗೆ ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT