ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿರಾನಗರದಲ್ಲಿನ ಶಬ್ದಮಾಲಿನ್ಯ ಪ್ರಕರಣ| ಪೊಲೀಸರಿಗೆ ತರಾಟೆ

Last Updated 20 ಜೂನ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ‘ಇಂದಿರಾ ನಗರ ವ್ಯಾಪ್ತಿಯಲ್ಲಿರುವ ಪಬ್ ಮತ್ತು ಬಾರ್‌ಗಳಿಗೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿನ ವಸ್ತುಸ್ಥಿತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಕೋರ್ಟ್‌ಗೆ ಸಲ್ಲಿಸಬೇಕು’ ಎಂದು ಹೈಕೋರ್ಟ್‌ ಆದೇಶಿಸಿದೆ.

ಈ ಕುರಿತಂತೆ ಡಿಫೆನ್ಸ್‌ ಕಾಲೋನಿ ನಿವಾಸಿಗಳ ಸಂಘದ ಅಧ್ಯಕ್ಷ ಅಶೋಕ್‌ ಶರತ್‌ ಸೇರಿದಂತೆ 20 ಜನರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ ಹಾಗೂ ನ್ಯಾಯಮೂರ್ತಿ ಎಚ್‌.ಟಿ.ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಕೆ.ಜಿ.ರಾಘವನ್, ‘ಪೊಲೀಸರು ಈ ಪ್ರಕರಣದಲ್ಲಿ ಕೋರ್ಟ್‌ ಆದೇಶಗಳನ್ನು ಪಾಲಿಸುತ್ತಿಲ್ಲ. ಸಾರ್ವಜನಿಕರಿಗೆ ಅವರ ಮೇಲಿನ ವಿಶ್ವಾಸವೇ ಹೊರಟು ಹೋಗಿದೆ. ಇಂದಿರಾನಗರದಲ್ಲಿರುವ ಬಹುತೇಕ ಪಬ್‌ಗಳು ಕಟ್ಟಡಗಳ ತಾರಸಿ ಮೇಲಿದ್ದು ಅವೆಲ್ಲಾ ಕಾನೂನು ಬಾಹಿರವಾಗಿ ನಡೆಯುತ್ತಿವೆ’ ಎಂದು ಆಕ್ಷೇಪಿಸಿದರು.

ಈ ಮಾತಿಗೆ ಪೊಲೀಸರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಓಕಾ ಅವರು, ‘ಈ ನಿರ್ಲಕ್ಷ್ಯವನ್ನು ಕೋರ್ಟ್‌ ಸಹಿಸುವುದಿಲ್ಲ. ನಿಮ್ಮ ನಡವಳಿಕೆ ಇದೇ ರೀತಿ ಹಗುರ ವರ್ತನೆಯಿಂದ ಕೂಡಿದ್ದರೆ ಪೊಲೀಸ್ ಆಯುಕ್ತರನ್ನೇ ಕೋರ್ಟ್‌ಗೆ ಕರೆಯಿಸಬೇಕಾಗುತ್ತದೆ’ ಎಂದು ಪೊಲೀಸರಿಗೆ ಮತ್ತೊಮ್ಮೆ ಎಚ್ಚರಿಸಿದರು.

ಪೊಲೀಸರ ಪರ ವಾದ ಮಂಡಿಸಿದ ಹಿರಿಯ ವಕೀಲ ಎ.ಎಸ್.ಪೊನ್ನಣ್ಣ ಅವರು, ‘ಕೋರ್ಟ್‌ ಆದೇಶದಂತೆ ಸ್ಥಳ ಪರಿಶೀಲನೆ ನಡೆಸಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಶಬ್ದ ಮಾಲಿನ್ಯ ಪ್ರಮಾಣದ ಅಳತೆ ಮಾಡಿದೆ. ಮಾಲಿನ್ಯದ ಪ್ರಮಾಣ ನಿಗದಿತ ಮಿತಿಯಲ್ಲಿಯೇ ಇದೆ’ ಎಂದು ಸಮಜಾಯಿಷಿ ನೀಡಿದರು. ಈ ಕುರಿತ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

ವರದಿ ಗಮನಿಸಿದ ನ್ಯಾಯಮೂರ್ತಿಗಳು, ‘ಮಧ್ಯರಾತ್ರಿ ಹೆಚ್ಚಿನ ಶಬ್ದ ಮಾಲಿನ್ಯ ಇರುತ್ತದೆ ಎಂದು ಅರ್ಜಿದಾರರು ದೂರಿದ್ದಾರೆ. ಆದರೆ, ನಿಮ್ಮ ಕೆಎಸ್‌ಪಿಸಿಬಿ ಸಂಜೆ ಮತ್ತು ರಾತ್ರಿ ಹತ್ತು ಗಂಟೆಯ ಒಳಗೆ ಮಾಲಿನ್ಯ ಪ್ರಮಾಣದ ಅಳತೆ ಮಾಡಿದೆ. ಇದು ತೀರಾ ದುರದೃಷ್ಟಕರ ಸಂಗತಿ. ಕೋರ್ಟ್‌ ಹೇಳಿದ್ದೇ ಒಂದಾದರೆ ಪೊಲೀಸರು ಮಾಡಿರುವುದೇ ಮತ್ತೊಂದು. ಇದೆಲ್ಲಾ ತಮಾಷೆ ಎಂದುಕೊಂಡಿರುವಿರಾ’ ಎಂದು ಕಿಡಿ ಕಾರಿದರು.

ಸರ್ಕಾರದ ಪರ ವಕೀಲರು, ‘ಶಬ್ದ ಮಾಲಿನ್ಯ ಅಳೆಯಲು ಏಳು ಮೀಟರ್‌ಗಳನ್ನು ಖರೀದಿಸಲಾಗಿದೆ’ ಎಂದರು.

ಇದಕ್ಕೆ ನ್ಯಾಯಮೂರ್ತಿಗಳು, ಕೇಂದ್ರ ಪರಿಸರ ಮಾಲಿನ್ಯ ಮಂಡಳಿ ಮೀಟರ್‌ಗಳ ಖರೀದಿಗೆ ನಿಗದಿತ ಮಾನದಂಡ ರೂಪಿಸಿದೆ. ಅಂತಹುದೇ ಮೀಟರ್‌ಗಳನ್ನು ಖರೀದಿಸಬೇಕು’ ಎಂದೂ ಸರ್ಕಾರಕ್ಕೆ ನಿರ್ದೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT