ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿದವರ ಹೊಟ್ಟೆಗೆ ‘ಸಂಚಿಗೊಂದು’ ಆಧಾರ

Last Updated 2 ಅಕ್ಟೋಬರ್ 2020, 18:26 IST
ಅಕ್ಷರ ಗಾತ್ರ

ಬೆಂಗಳೂರು: ಹೋಟೆಲ್‌ಗೆ ಹೋಗಿ ಆಹಾರದ ಪಟ್ಟಿ (ಮೆನು) ನೋಡಿ ಊಟ ತರಿಸಿಕೊಳ್ಳುವ ಜನರು ಒಂದೆಡೆಯಾದರೆಅನ್ನ ಸಾಂಬಾರ್ ದರ ಎಷ್ಟು ಎಂದು ಕೇಳಿ ಜೇಬಿನಲ್ಲಿ ಹಣ ಇದ್ದರೆ ಮಾತ್ರ ತಿನ್ನುವ ಜನರೂ ಇದ್ದಾರೆ. ಹಸಿದವರು ಮತ್ತು ಉಳ್ಳವರ ನಡುವೆ ಸೇತುವೆಯಾಗುವ ಪ್ರಯತ್ನವೊಂದು ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು ಹೋಟೆಲ್ ಮಾಲೀಕರ ಸಂಘ,ರೋಟರಿ ಬೆಂಗಳೂರು ಸೌತ್ ಪರೇಡ್ ಮತ್ತು ಬನಶಂಕರಿ ಕೊರೊನಾ ವಾರಿಯರ್ಸ್ ಘಟಕ ಜೊತೆಗೂಡಿ ‘ಸಂಚಿಗೊಂದು’ ಹೆಸರಿನಲ್ಲಿ ವಿನೂತನ ಕಾರ್ಯವೊಂದನ್ನು ಆರಂಭಿಸಿವೆ.

ಹಣವಿಲ್ಲದೆ ಹೋಟೆಲ್‌ಗಳಿಗೆ ಬರುವ ಬಡವರಿಗೆ ಊಟ ಮತ್ತು ಕಾಫಿ-ಟೀಯನ್ನು ಉಚಿತವಾಗಿ ನೀಡುವ ‘ಸಂಚಿಗೊಂದು’ ಕಾರ್ಯಕ್ರಮಕ್ಕೆ ಚಿತ್ರಕಲಾ ಪರಿಷತ್ತಿನಲ್ಲಿಶುಕ್ರವಾರ ‌ಚಾಲನೆ ನೀಡಲಾಯಿತು.

‘ತುತ್ತಿಗೆ ಗತಿ ಇಲ್ಲದವರು ಹೋಟೆಲ್‌ಗೆ ಬಂದು ನಮ್ಮಂತೆಯೇ ಊಟ ಮಾಡಲಿ ಎಂಬ ಉದಾರ ಮನಸ್ಸಿನಿಂದ ಯೋಚನೆ ಮಾಡುವ ಜನರಿಗೆ ವೇದಿಕೆ ಇದಾಗಿದೆ.‌ಒಬ್ಬರಿಗೆ ಅಥವಾ ಇಬ್ಬರ ಊಟಕ್ಕೆ ಆಗುವಷ್ಟು ಊಟದ ಚೀಟಿಗಳನ್ನು ಪಡೆದು ‘ಸಂಚಿಗೆ’(ದುಡ್ಡಿಲ್ಲದೆ ಹಸಿದವರಿಗೆ ಅನ್ನ ಹಾಕುವ ದೇಣಿಗೆ ಸಂಗ್ರಹಿಸುವ ಹಣದ ಪೆಟ್ಟಿಗೆ) ಹಾಕಿದರೆ ಅದನ್ನು ಹಣವಿಲ್ಲದವರು ತೆಗೆದುಕೊಂಡು ಊಟ ಪಡೆಯುತ್ತಾರೆ. ಅಂದು ಹಸಿದವರು ಬಾರದಿದ್ದರೆ ಅದನ್ನು ಮರುದಿನ ಬಳಸಲಾಗುವುದು’ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ತಿಳಿಸಿದರು.

‘ಕೆಲ ದೇಶಗಳಲ್ಲಿ ‘ಒನ್ ಫಾರ್ ಮೀ, ಒನ್ ಫಾರ್ ದಿ ವಾಲ್’ ಎಂಬ ಹೆಸರಿನ ಕಾರ್ಯಕ್ರಮ ಜಾರಿಯಲ್ಲಿದೆ. ಶಿಕ್ಷಣ ತಜ್ಞ ಗುರುರಾಜ ಕರಜಗಿ ಅವರು ಹೇಳಿದ ಒಂದು ಕಥೆ ಈ ಯೋಜನೆಗೆ ಸ್ಪೂರ್ತಿ ಆಯಿತು‍. ನಗರದ 25 ಹೋಟೆಲ್‌ಗಳಲ್ಲಿ ಮೊದಲ ಹಂತದಲ್ಲಿ ಈ ಯೋಜನೆ ಜಾರಿಗೆ ಬರಲಿದೆ. ಜನರ ಪ್ರತಿಕ್ರಿಯೆ ಆಧರಿಸಿ ವಿಸ್ತರಿಸಲಾಗುವುದು’ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್. ಶಂಕರ್, ‘ಅನ್ನ ದಾಸೋಹ, ಅಕ್ಷರ ದಾಸೋಹದಲ್ಲಿ ಕರ್ನಾಟಕ ಸದಾ ಮಾದರಿ. ಹಸಿದವರಿಗೆ ಅನ್ನ ಹಾಕುವ ಮಹತ್ಕಾರ್ಯವನ್ನು ನಗರದಲ್ಲಿ ಆರಂಭಿಸಿರುವುದು ಶ್ಲಾಘನೀಯ’ ಎಂದರು.

‘ನಾನು ಹೇಳಿದ್ದ ಕಥೆಯಲ್ಲ, ಪಾಶ್ಚಿಮಾತ್ಯ ದೇಶವೊಂದರಲ್ಲಿ ಕಣ್ಣಾರೆ ಕಂಡದ್ದು. ಈ ವ್ಯವಸ್ಥೆ ನನ್ನ ಮನಸ್ಸಿನ ಮೇಲೆ ಅಪಾರ ಪರಿಣಾಮ ಬೀರಿತ್ತು’ ಎಂದು ಗುರುರಾಜ ಕರಜಗಿ ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT