ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ‘ಇನ್‌ಸೆಕ್ಟ್‌ ಕೆಫೆ’

Published 13 ಅಕ್ಟೋಬರ್ 2023, 16:03 IST
Last Updated 13 ಅಕ್ಟೋಬರ್ 2023, 16:03 IST
ಅಕ್ಷರ ಗಾತ್ರ

ಬೆಂಗಳೂರು: ನಿಸರ್ಗದ ಆಹಾರ ಸರಪಳಿಯಲ್ಲಿ ಪ್ರಮುಖ ಪಾತ್ರವಹಿಸುವ ದುಂಬಿ–ಕೀಟಗಳ ಸಂರಕ್ಷಣೆಗಾಗಿ ‘ಇನ್‌ಸೆಕ್ಟ್‌ ಕೆಫೆ’ ಎಂಬ ವಿಶಿಷ್ಟ ಕೀಟ ತಾಣವೊಂದನ್ನು ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಅನಾವರಣಗೊಳಿಸಲಾಗಿದೆ.

‌ವಿಭಿನ್ನ ಇಂಡಿಯಾ ಫೌಂಡೇಷನ್‌ನ ‘ಸಾಮಾಜಿಕ ಹೊಣೆಗಾರಿಕೆ ನಿಧಿ’(ಸಿಎಸ್‌ಆರ್‌) ಅಡಿಯಲ್ಲಿ, ತೋಟಗಾರಿಕಾ ಇಲಾಖೆ ಸಹಯೋಗದಲ್ಲಿ ಲಾಲ್‌ಬಾಗ್‌ನ ಬ್ಯಾಂಡ್‌ ಸ್ಟ್ಯಾಂಡ್‌ ಬಳಿ ಸ್ಥಾಪಿಸಿರುವ ‘ಇನ್‌ಸೆಕ್ಟ್‌ ಕೆಫೆ’ಯನ್ನು ತೋಟಗಾರಿಕೆ ಇಲಾಖೆ ನಿರ್ದೇಶಕ ಡಿ.ಎಸ್.ರಮೇಶ್‌ ಶುಕ್ರವಾರ ಉದ್ಘಾಟಿಸಿದರು.

ಮರದ ಫ್ರೇಮ್‌ಗಳಿಂದ ಸಣ್ಣ ಮನೆಯಾಕಾರದಲ್ಲಿ ‘ಕೆಫೆ’ ವಿನ್ಯಾಸಗೊಳಿಸಲಾಗಿದೆ. ಇದನ್ನು ಹಲವು ವಿಭಾಗಗಳಾಗಿ ವರ್ಗೀಕರಿಸಿ, ಪ್ರತಿ ವಿಭಾಗದಲ್ಲಿ ಸಣ್ಣ, ಮಧ್ಯಮ ಮರದ ತುಂಡುಗಳು, ಒಣ ಹುಲ್ಲು, ವಿವಿಧ ರೀತಿಯ ಸಸ್ಯಗಳ ಕಟ್ಟಿಗೆಗಳನ್ನು ಜೋಡಿಸಲಾಗಿದೆ. ಇದು ಎಲ್ಲಾ ಬಗೆಯ ಕೀಟ, ದುಂಬಿಗಳು ನೆಲೆಸಲು ಪೂರಕ ತಾಣವಾಗಿದೆ. ಕೀಟಗಳು ಇಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ ಮತ್ತು ಬೆಳವಣಿಗೆ ಹೊಂದುತ್ತವೆ.

ಮೂರು ಸಾವಿರಕ್ಕೂ ಹೆಚ್ಚು ಸಸ್ಯ ಪ್ರಭೇದಗಳಿರುವ ಲಾಲ್‌ಬಾಗ್‌ನಲ್ಲಿ ಕಾರ್ಪೆಂಟರ್ ಬೀ, ಬಿಂಬಲ್ ಬೀ ನಂತಹ ಪ್ರಮುಖ ಪ್ರಭೇದದ ಕೀಟಗಳಿವೆ. ಜೊತೆಗೆ, ಗೂಡು ಕಟ್ಟಿ ಜೇನು ಸಂಗ್ರಹಿಸುವ ದುಂಬಿಗಳೂ ಇವೆ. ಇವೆಲ್ಲ ಕಡಿಮೆ ಸಂಖ್ಯೆಯಲ್ಲಿವೆ. ಆದರೆ ಗೂಡು ಕಟ್ಟದೇ, ಒಣ ಮರವನ್ನು ಕೊರೆದು ತೂತು ಮಾಡಿ ಅಲ್ಲೇ ಬದುಕುವಂತಹ ದುಂಬಿಗಳು ಸಹಸ್ರಾರು ಸಂಖ್ಯೆಯಲ್ಲಿವೆ. ಇಂಥವುಗಳಿಗೆ ‘ಇನ್‌ಸೆಕ್ಟ್‌ ಕೆಫೆ’ ಉತ್ತಮ ಆಶ್ರಯ ತಾಣವಾಗುತ್ತದೆ ಎಂಬುದು ಇಲಾಖೆ ಅಧಿಕಾರಿಗಳ ಅಭಿಪ್ರಾಯ. 

ಸದ್ಯಕ್ಕೆ ಆರಂಭಿಕವಾಗಿ ಒಂದು ‘ಕೆಫೆ’ ಸ್ಥಾಪಿಸಲಾಗಿದೆ. ಮುಂದೆ ಇದೇ ರೀತಿ ಸಾರ್ವಜನಿಕ ಸಹಭಾಗಿತ್ವದಡಿ, ಲಾಲ್‌ಬಾಗ್‌, ಕಬ್ಬನ್‌ ಉದ್ಯಾನವನ, ನಂದಿ ಗಿರಿಧಾಮ, ಕೃಷ್ಣರಾಜೇಂದ್ರ ಗಿರಿಧಾಮ ಮತ್ತು ರಾಜ್ಯದಾದ್ಯಂತ ಎಲ್ಲಾ ಹೊಸ ಸಸ್ಯಶಾಸ್ತ್ರೀಯ ತೋಟಗಳಲ್ಲಿ 50 ಕ್ಕೂ ಹೆಚ್ಚು ‘ಇನ್‌ಸೆಕ್ಟ್‌ ಕೆಫೆ’ಗಳನ್ನು ಸ್ಥಾಪಿಸಲು ಚಿಂತನೆ ನಡೆಸಲಾಗಿದೆ ಎಂದು ತೋಟಗಾರಿಕೆ ಜಂಟಿ ನಿರ್ದೇಶಕ ಡಾ. ಎಂ.ಜಗದೀಶ್ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ವಿಭಿನ್ನ ಇಂಡಿಯಾ ಫೌಂಡೇಷನ್‌ನ ಕಾರ್ಯನಿರ್ವಾಹಕ ಅಧಿಕಾರಿ ಡೇವಿಡ್ ಕುಮಾರ್, ತೋಟಗಾರಿಕೆ ಇಲಾಖೆಯ ಅಧಿಕಾರಿಗಳಾದ ನಂದಾ, ಚೇತನ್, ಕೃಷ್ಣಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT