ಬೆಂಗಳೂರು: ‘ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗಾಗಿ ಮರು ಪರೀಕ್ಷೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದು, ಈ ಕುರಿತು ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) ಅಧಿಕೃತ ಆದೇಶ ಹೊರಡಿಸಬೇಕು’ ಎಂದು ಇನ್‌ಸೈಟ್ಸ್ ಐಎಎಸ್ ಸಂಸ್ಥಾಪಕ ಮತ್ತು ನಿರ್ದೇಶಕ ಜಿ.ಬಿ.ವಿನಯ್ ಕುಮಾರ್ ಆಗ್ರಹಿಸಿದರು.
‘ಕೆಎಎಸ್ ಮರು ಪರೀಕ್ಷೆಯ ದಿನಾಂಕವನ್ನು ನಿಗದಿತ ಸಮಯದಲ್ಲಿ ಘೋಷಿಸಬೇಕು. ಪೂರ್ವಭಾವಿ ಪರೀಕ್ಷೆ ನಡೆದ 15 ದಿನಗಳೊಳಗೆ ಫಲಿತಾಂಶ ಪ್ರಕಟಿಸಬೇಕು. ಕೆಪಿಎಸ್‌ಸಿಗೆ ಕಾಯಂ ಕಾರ್ಯದರ್ಶಿ ನೇಮಿಸಬೇಕು. ಪರೀಕ್ಷೆಗಳ ವಾರ್ಷಿಕ ವೇಳಾಪಟ್ಟಿಯನ್ನು ಕಾಲಕಾಲಕ್ಕೆ ಬಿಡುಗಡೆಗೊಳಿಸಬೇಕು. ಪಠ್ಯಕ್ರಮದ ಆಧಾರದ ಮೇಲೆ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಬೇಕು’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
‘ಪಿಎಸ್‌ಐ ಪರೀಕ್ಷೆಯ ಮಾದರಿಯಂತೆ ಅಭ್ಯರ್ಥಿಗಳು ಎಷ್ಟು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಎಂಬುದನ್ನು ಒಎಂಆರ್ ಶೀಟ್‌ನಲ್ಲಿ ಉಲ್ಲೇಖಿಸುವ ವ್ಯವಸ್ಥೆ ಜಾರಿಗೊಳಿಸಬೇಕು. ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್‌ಸಿ) ನಡೆಸುವ ಪರೀಕ್ಷೆಗಳಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕದ ವಿನಾಯಿತಿ ಇದೆ. ಇದೇ ವಿಧಾನವನ್ನು ಕೆಪಿಎಸ್‌ಸಿ ಪರೀಕ್ಷೆಗಳಲ್ಲೂ ಅನುಸರಿಸಬೇಕು’ ಎಂದರು.
‘ಕೆಪಿಎಸ್‌ಸಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಹೋಟಾ ಸಮಿತಿ ಶಿಫಾರಸುಗಳನ್ನು ಜಾರಿಗೊಳಿಸಬೇಕು. ಶಿಕ್ಷಣ ಮತ್ತು ವಿಷಯ ತಜ್ಞರನ್ನು ಕೆಪಿಎಸ್‌ಸಿಗೆ ಸದಸ್ಯರನ್ನಾಗಿ ನೇಮಿಸಿಕೊಳ್ಳಬೇಕು. ಕೆಪಿಎಸ್‌ಸಿಯಲ್ಲಿ ಅಧ್ಯಕ್ಷರು ಸೇರಿದಂತೆ 16 ಜನ ಸದಸ್ಯರಿದ್ದಾರೆ. ಇದನ್ನು ಯುಪಿಎಸ್‌ಸಿ ಮಾದರಿಯಂತೆ ಎಂಟು ಜನ ಸದಸ್ಯರಿಗೆ ಇಳಿಕೆ ಮಾಡಬೇಕು’ ಎಂದು ಸಲಹೆ ನೀಡಿದರು.
‘ಕೆಪಿಎಸ್‌ಸಿಯಲ್ಲಿ ಸುಧಾರಣೆ ಕ್ರಮ ಕೈಗೊಳ್ಳುವುದು ಸೇರಿದಂತೆ ನಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ವಿದ್ಯಾರ್ಥಿ ಚಳವಳಿ ರೂಪಿಸಿ ಬೀದರ್‌ನಿಂದ ಚಾಮರಾಜನಗರದವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಸಿದರು.
ಪಿಎಸ್‌ಐ ಪರೀಕ್ಷೆ ಮಾದರಿಯಂತೆ ಅಭ್ಯರ್ಥಿಗಳು ಎಷ್ಟು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಎಂದು ಒಎಂಆರ್ ಶೀಟ್‌ನಲ್ಲಿ ಉಲ್ಲೇಖಿಸುವ ವ್ಯವಸ್ಥೆ ಜಾರಿಗೊಳಿಸಬೇಕು.–ಜಿ.ಬಿ. ವಿನಯ್ ಕುಮಾರ್ ಇನ್‌ಸೈಟ್ ಸಂಸ್ಥೆಯ ಸಂಸ್ಥಾಪಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.