ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ಶುಲ್ಕದ ಭಾರ | ಉತ್ಪಾದನೆಯ ದಾರಿ, ಒಂದೂವರೆ ವರ್ಷದಲ್ಲಿ ಲಕ್ಷ ಉಳಿತಾಯ

ಮನೆಯ ಮೇಲೆ ಸೌರವಿದ್ಯುತ್‌ ಘಟಕ ಅಳವಡಿಕೆ
Last Updated 13 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ತಿಂಗಳಿಗೆ ₹9 ಸಾವಿರಕ್ಕಿಂತಲೂ ಹೆಚ್ಚು ವಿದ್ಯುತ್‌ ಶುಲ್ಕದ ಹೊರೆ ತಾಳಲಾಗದೇ ತಾವೇ ವಿದ್ಯುತ್‌ ಉತ್ಪಾದನೆಗೆ ತೊಡಗಿ, ಅದರಲ್ಲೇ ಲಾಭ ಗಳಿಸಲಾರಂಭಿಸಿದವರ ಕಥನವೊಂದು ಇಲ್ಲಿದೆ.

ಬ್ರೆಡ್‌ ಅಂಡ್ ಜಾಮ್ ಸ್ಟುಡಿಯೊ ಮಾಲೀಕ, ಡ್ರಮ್‌ ವಾದಕ ಪೃಥ್ವಿ ಮಾಂಗಿರಿ ಅವರು, ಬನ್ನೇರುಘಟ್ಟದ ಅರೆಕೆರೆ ಹತ್ತಿರವಿರುವ ತಮ್ಮ ಮನೆಯ ಮೇಲೆ ಸೌರವಿದ್ಯುತ್‌ ಘಟಕ ನಿರ್ಮಿಸಿಕೊಂಡು ಹೊಸ ಮಾದರಿ ಹಾಕಿಕೊಟ್ಟಿದ್ದಾರೆ.

‘ನನ್ನ ಡ್ರಮ್‌ ವಾದನ ಅಭ್ಯಾಸದಿಂದ ತೊಂದರೆಯಾಗುತ್ತಿದೆ ಎಂದು ನೆರೆ–ಹೊರೆಯವರು ಪದೇ ಪದೇ ತಕರಾರು ಎತ್ತುತ್ತಿದ್ದರು. ಪೊಲೀಸರಿಗೆ ದೂರು ಕೊಡುವ ಮಟ್ಟಕ್ಕೂ ಹೋಗಿದ್ದರು. ಕೋಣೆಯಿಂದ ಶಬ್ದ ಆಚೆ ಹೋಗದಿರುವ ವ್ಯವಸ್ಥೆ (ಸೌಂಡ್‌ ಪ್ರೂಫ್‌) ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಇದಕ್ಕಾಗಿ ಎಸಿ ಸೇರಿದಂತೆ ಇನ್ನಿತರ ವ್ಯವಸ್ಥೆಗೆ ಹೆಚ್ಚು ಖರ್ಚು ಮಾಡಬೇಕಾಯಿತು. ಮೊದಲು ತಿಂಗಳಿಗೆ ₹1,500ದಷ್ಟು ಬರುತ್ತಿದ್ದ ವಿದ್ಯುತ್ ಶುಲ್ಕ ಒಂದೆರಡು ತಿಂಗಳು ₹9000ದವರೆಗೆ ಬಂದಿತು’ ಎಂದು ಪೃಥ್ವಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ದುಬಾರಿ ಶುಲ್ಕದ ಸಮಸ್ಯೆ ತಪ್ಪಿಸಿಕೊಳ್ಳುವ ಉದ್ದೇಶದಿಂದ ಮನೆಯ ಮೇಲೆ ಸೌರವಿದ್ಯುತ್‌ ಘಟಕವನ್ನು ಅಳವಡಿಸಿಕೊಂಡೆವು’ ಎಂದು ಅವರು ಹೇಳಿದರು.

₹5 ಲಕ್ಷ ವೆಚ್ಚದಲ್ಲಿ ಘಟಕ: 5 ಕಿಲೊವ್ಯಾಟ್‌ ಸಾಮರ್ಥ್ಯದ, 15 ಸೌರಫಲಕಗಳನ್ನು ಅಳವಡಿಸಲಾಗಿರುವ ಈ ಘಟಕಕ್ಕೆ ₹5 ಲಕ್ಷ ವೆಚ್ಚವಾಗಿದೆ.

‘ಬೆಸ್ಕಾಂನಿಂದ ಪ್ರತ್ಯೇಕ ಮೀಟರ್‌ ಅಳವಡಿಸಲಾಗಿದೆ. ಮನೆಯ ಪಕ್ಕದ ಟ್ರಾನ್ಸ್‌ಫಾರ್ಮರ್‌ ಮೂಲಕ ಈ ವಿದ್ಯುತ್ ನೇರವಾಗಿ ಬೆಸ್ಕಾಂನ ಗ್ರಿಡ್‌ಗೆ ಹೋಗುತ್ತದೆ. ಪ್ರತಿ ಯುನಿಟ್‌ಗೆ ₹7ರಂತೆ ಬೆಸ್ಕಾಂ ಹಣ ನೀಡುತ್ತಿದೆ. ನಾವು ಬಳಸುವ ವಿದ್ಯುತ್‌ ವೆಚ್ಚವನ್ನು ಕಡಿತಗೊಳಿಸಿ ಉಳಿದ ಹಣವನ್ನು ನಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ’ ಎಂದು ಪೃಥ್ವಿ ಅವರ ತಾತ ರಾಜನ್ ಹೇಳಿದರು.

‘ನಮ್ಮ ವಿದ್ಯುತ್ ವೆಚ್ಚ, ಬೆಸ್ಕಾಂ ನೀಡುವ ಹಣ ಮತ್ತು ಬಡ್ಡಿ ಲೆಕ್ಕ ಎಲ್ಲ ಹಾಕಿದರೆ ಒಂದೂವರೆ ವರ್ಷಕ್ಕೆ ₹1 ಲಕ್ಷದವರೆಗೆ ನಮಗೆ ಲಾಭವಾಗಿದೆ. ಇನ್ನೂ 25 ವರ್ಷ ನಮಗೆ ಚಿಂತೆ ಇಲ್ಲ’ ಎಂದು ಅವರು ಹೇಳಿದರು.

ಸೌರವಿದ್ಯುತ್ ಘಟಕ: ಅಳವಡಿಕೆ ಪ್ರಕ್ರಿಯೆ ಹೇಗೆ?

* ನಿಮ್ಮ ಮನೆಯ ಆರ್.ಆರ್. ಸಂಖ್ಯೆ ನಮೂದಿಸಿ ಬೆಸ್ಕಾಂ ವೆಬ್‌ಸೈಟ್‌ನಲ್ಲಿ (https://bescom.karnataka.gov.in) ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು

* ಆರ್.ಆರ್. ಸಂಖ್ಯೆ ನಂತರ ಮೊಬೈಲ್‌ ಸಂಖ್ಯೆ ನಮೂದಿಸಿ, ಉಪವಿಭಾಗ ಆಯ್ಕೆ ಮಾಡಿ ಸೌರಘಟಕಕ್ಕೆ ಅರ್ಜಿ ಸಲ್ಲಿಸಬೇಕು

* ಬೆಸ್ಕಾಂ ಹಾಗೂ ಮನೆಯ ಮಾಲೀಕರ ಮಧ್ಯೆ ವಿದ್ಯುತ್‌ ಖರೀದಿ ಒಪ್ಪಂದ ನಡೆಯುತ್ತದೆ.

* ಗ್ರಿಡ್‌ಗೆ ಪೂರೈಕೆಯಾಗುವ ವಿದ್ಯುತ್‌ ಆಧಾರದ ಮೇಲೆ ಮನೆಯ ಮಾಲೀಕರಿಗೆ ಬೆಸ್ಕಾಂ ಹಣ ಪಾವತಿಸುತ್ತದೆ.

ಮಾಹಿತಿಗೆ–080–22340816.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT