ಭಾನುವಾರ, ನವೆಂಬರ್ 29, 2020
25 °C
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಳಕಳಿ

ಸುಂದರ ತಾಣವಾದ ಮೇಲ್ಸೇತುವೆ ಕೆಳಭಾಗದ ಖಾಲಿ ಜಾಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕಸದ ತಿಪ್ಪೆಯಾಗಿದ್ದ ಸುಬ್ಬಯ್ಯ ವೃತ್ತದಿಂದ ಲಾಲ್‌ಬಾಗ್ ಮತ್ತು ಡಬಲ್ ರಸ್ತೆಗೆ ಸಂಪರ್ಕ ಕಲ್ಪಿಸುವ ಮಿಷನ್ ರಸ್ತೆಯ ಮೇಲ್ಸೇತುವೆ ಕೆಳಗಿನ ಜಾಗ ಈಗ ಸುಂದರ ತಾಣವಾಗಿ ಮಾರ್ಪಟ್ಟಿದೆ. ಇದನ್ನು ಸರ್ಕಾರ ಅಥವಾ ಬಿಬಿಎಂಪಿ ಮಾಡಿದ್ದಲ್ಲ. ಸಾಮಾಜಿಕ ಕಳಕಳಿಯೊಂದಿಗೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಸ್ವಯಂ ಪ್ರೇರಣೆಯಿಂದ ಮಾಡಿರುವ ಕೆಲಸ.

ಬಹುತೇಕ ಮೇಲ್ಸೇತುವೆಗಳ ಕೆಳಗಿನ ಜಾಗಗಳು ಕಸದ ರಾಶಿಯಿಂದ ತುಂಬಿ ಹೋಗಿ ಮೂಗು ಮುಚ್ಚಿ ಓಡಾಡುವ ಸ್ಥಿತಿ ಇವೆ. ಅದೇ ರೀತಿ ಇದ್ದ ಮಿಷನ್ ರಸ್ತೆ ಮೇಲ್ಸೇತುವೆ ಕೆಳಭಾಗ ಈಗ ಹಸಿರಿನಿಂದ ಕಂಗೊಳಿಸುತ್ತಿದೆ.

ಈ ಜಾಗ ಕಸ ಸುರಿಯುವ ತಾಣವಾಗಿತ್ತು. ರೈಲಿಂಗ್‌ಗಳು ಮುರಿದಿದ್ದವು, ರಸ್ತೆ ವಿಭಜಕಗಳು ಹಾಳಾಗಿದ್ದವು. ಮೇಲ್ಸೇತುವೆ ಕೆಳಗೆ ಹಾಳಾಗಿದ್ದ ರಸ್ತೆ ವಿಭಜಕದ ಮೇಲೆಯೇ ಸವಾರರು ವಾಹನ ಚಾಲನೆ ಮಾಡುವ ಮೂಲಕ ಸಂಚಾರ ನಿಯಮ ಉಲ್ಲಂಘಿಸುತ್ತಿದ್ದರು.

‘ಇದೆಲ್ಲದಕ್ಕೆ ಕಡಿವಾಣ ಹಾಕಿ ಸುಂದರ ತಾಣವಾಗಿಸಲು ಸಂಕಲ್ಪ ಮಾಡಿದ ಸಂಸ್ಥೆ, ಮೊದಲಿಗೆ  ಕಸ ತೆರವುಗೊಳಿಸಿತು. ಬಳಿಕ ಹಳೆಯ ರೈಲಿಂಗ್‌ಗಳನ್ನು ಬದಲಿಸಿ ಹೊಸದಾಗಿ ಹಾಕಲಾಯಿತು. ಸಸಿಗಳನ್ನು ನೆಡುವ ಮೂಲಕ ಇಡೀ ಪ್ರದೇಶವನ್ನು ಹಸಿರುಮಯ ಮಾಡಲಾಯಿತು’ ಎಂದು ಇಂಡಿಯನ್ ಆಯಿಲ್‌ನ ರಾಜ್ಯದ ಮುಖ್ಯಸ್ಥ ಡಿ.ಎಲ್. ಪ್ರಮೋದ್ ತಿಳಿಸಿದ್ದಾರೆ.

‘ಮೇಲ್ಸೇತುವೆ ಕೆಳಗಿನ ಸರ್ವೀಸ್ ರಸ್ತೆಯಲ್ಲಿ ಪಾದಚಾರಿಗಳ ಸುರಕ್ಷತೆ ಲೆಕ್ಕಿಸದೆ ಸಂಚರಿಸುತ್ತಿದ್ದ ವಾಹನಗಳ ವೇಗಕ್ಕೆ ಕಡಿವಾಣ ಹಾಕಲು ಎರಡೂ ಕಡೆ ರಸ್ತೆ ಉಬ್ಬುಗಳನ್ನು ನಿರ್ಮಿಸಲಾಗಿದೆ. ಪಾದಚಾರಿಗಳು ಸುರಕ್ಷಿತವಾಗಿ ರಸ್ತೆ ದಾಟಲು ವಿಭಜಕಗಳ ನಡುವೆ ಜಾಗ ಕಲ್ಪಿಸಿ ಬೊಲಾರ್ಡ್‌ಗಳನ್ನು ಹಾಕಲಾಗಿದೆ. ಮೇಲ್ಸೇತುವೆ ಕಂಬಗಳಿಗೆ ಬಣ್ಣ ಬಳಿದು ಸಿಂಗರಿಸಲಾಗಿದೆ’ ಎಂದು ವಿವರಿಸಿದ್ದಾರೆ.

‘ಮೇಲ್ಸುತುವೆ ಕೆಳಗಿನ ಜಾಗ ಮಾತ್ರವಲ್ಲದೇ ಲಾಲ್‌ಬಾಗ್ ತನಕದ ರಸ್ತೆ ವಿಭಜಕವನ್ನು ಅಭಿವೃದ್ಧಿಪಡಿಸಲಾಗಿದೆ. ಬೆಂಗಳೂರು ನಗರವನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಬಿಬಿಎಂಪಿ ಮತ್ತು ಸ್ಥಳೀಯ ಪೊಲೀಸರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಕೊಡುಗೆ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು