ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದರಿಗೆ ರೆಮ್‌ಡಿಸಿವಿರ್ ನೀಡಿದ್ದು ಎಷ್ಟು ಸರಿ: ಡಿ.ಕೆ. ಶಿವಕುಮಾರ್ ಪ್ರಶ್ನೆ

Last Updated 1 ಮೇ 2021, 21:32 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್‌ ಚಿಕಿತ್ಸೆಗೆ ಅಗತ್ಯವಾದ ರೆಮ್‌ಡಿಸಿವಿರ್ ಚುಚ್ಚುಮದ್ದು ಪೂರೈಸುವಂತೆ ಗೋಗರೆದರೂ ಸಿಗುತ್ತಿಲ್ಲ. ಆದರೆ, ಬಿಜೆಪಿ ನಾಯಕರು, ಸಂಸದರಿಗೆ ಈ ಔಷಧವನ್ನು ಬಾಕ್ಸ್‌ಗಟ್ಟಲೇ ಕೊಟ್ಟು ಕಳುಹಿಸಲಾಗುತ್ತಿದೆ. ಇದು ಹೇಗೆ ಸಾಧ್ಯ. ಇದು ಸರಿಯೇ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಸಾಮಾಜಿಕ ಜಾಲತಾಣಕ್ಕೆ ವಾರಿಯರ್ಸ್‌ಗಳ ನೇಮಕ ಅಭಿಯಾನ ಮತ್ತು ಸೋಂಕಿತರ ನೆರವಿಗೆ ಆಂಬುಲೆನ್ಸ್ ಸೌಲಭ್ಯಕ್ಕೆ ಪಕ್ಷದ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಜೊತೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.

‘ರೆಮ್‌ಡಿಸಿವಿರ್ ಪೂರೈಸುವಂತೆ ಆಸ್ಪತ್ರೆಗಳು, ನಾವು ಕೇಳಿದಾಗ ಡ್ರಗ್ ಪರವಾನಗಿ ಇರುವವರಿಗೆ ಮಾತ್ರ ನೀಡಲಾಗುವುದು ಎಂದು ಸರ್ಕಾರ ಹೇಳಿತ್ತು. ಹಾಗಿದ್ದರೆ, ಬಿಜೆಪಿ ಸಂಸದರು (ಕಲಬುರ್ಗಿಯ ಉಮೇಶ ಜಾಧವ್‌) ಪೆಟ್ಟಿಗೆಗಟ್ಟಲೆ ಔಷಧಿ ಹೇಗೆ ತೆಗೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವರು, ಪ್ರಧಾನಿ ಉತ್ತರಿಸಬೇಕು’ ಎಂದು ಆಗ್ರಹಿಸಿದರು.

‘ಕೋವಿಡ್ ರೋಗಿಗಳು ಆಸ್ಪತ್ರೆಗೆ ತೆರಳಲು ಮತ್ತು ಮೃತದೇಹಗಳನ್ನು ಚಿತಾಗಾರಕ್ಕೆ ಕೊಂಡೊಯ್ಯಲು ಸುಮಾರು 10 ಆಂಬುಲೆನ್ಸ್‌ಗಳನ್ನು ಕೆಪಿಸಿಸಿಯಿಂದ ಆರಂಭಿಸುತ್ತಿದ್ದೇವೆ. ಜಿಲ್ಲಾ ಕೇಂದ್ರಗಳಲ್ಲೂ ಈ ಸೇವೆ ನೀಡುತ್ತೇವೆ’ ಎಂದರು.

‘ಎಐಸಿಸಿ ಸೂಚನೆಯಂತೆ ಪಕ್ಷದ ಸಾಮಾಜಿಕ ಜಾಲತಾಣಗಳಿಗೆ ವಾರಿಯರ್ಸ್‌ಗಳನ್ನು ನೇಮಿಸುತ್ತಿದ್ದೇವೆ. ಕಾಂಗ್ರೆಸ್ ಹಾಗೂ ಸಮಾಜದ ಬಗ್ಗೆ ಬದ್ಧತೆ ಇರುವ ಯಾರು ಬೇಕಾದರೂ ವಾರಿಯರ್ಸ್ ಆಗಿ ಸೇರಬಹುದು. ಇದಕ್ಕಾಗಿ 1800 1200 00044 ಸಂಖ್ಯೆಗೆ ಮಿಸ್ಡ್ ಕಾಲ್ ಕೊಟ್ಟೆ ಸಾಕು ಅಥವಾ 7574000525 ಸಂಖ್ಯೆಗೆ ವಾಟ್ಸ್‌ಆ್ಯಪ್ ಮಾಡಬಹುದು’ ಎಂದರು.

ಸಿದ್ದರಾಮಯ್ಯ ಮಾತನಾಡಿ, ‘ಕೊರೊನಾ ಸೋಂಕು ತಡೆಯಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬಿಜೆಪಿ ನಾಯಕರು ಸೋಂಕು ತಡೆಗಟ್ಟುವ ಪ್ರಾಮಾಣಿಕ ಪ್ರಯತ್ನ ಮಾಡಲಿ., ಇಲ್ಲವೇ ಅಧಿಕಾರ ಬಿಟ್ಟು ತೊಲಗಲಿ. ಸರ್ಕಾರದ ಅದಕ್ಷತೆ ಹಾಗೂ ದುರಾಡಳಿತಕ್ಕೆ ಅಮಾಯಕ ಜನರು ಬಲಿಯಾಗುವುದು ಬೇಡ’ ಎಂದು ಆಕ್ರೋಶ ಹೊರಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT