ಬುಧವಾರ, ಆಗಸ್ಟ್ 10, 2022
23 °C
ಬಿಬಿಎಂಪಿಯ ಪ್ರತಿ ಚುನಾವಣೆಗೂ ನ್ಯಾಯಾಲಯದ ಮಧ್ಯಪ್ರವೇಶ ಅನಿವಾರ್ಯವೇ?

PV Web Exclusive: ಸ್ಥಳೀಯ ಸರ್ಕಾರ– ಏಕೆ ಅನಾದರ?

ಪ್ರವೀಣ್ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಆಡಳಿತ ವಿಕೇಂದ್ರೀಕರಣಗೊಳಿಸುವ ಹಾಗೂ ಸ್ಥಳೀಯ ಸರ್ಕಾರಗಳನ್ನು ಬಲಪಡಿಸುವ ಉದ್ದೇಶದಿಂದ ಸಂವಿಧಾನಕ್ಕೆ 73ನೇ ಹಾಗೂ 74ನೇ ತಿದ್ದುಪಡಿಗಳನ್ನು ತರಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಕಾಲ ಕಾಲಕ್ಕೆ ಕ್ರಮಬದ್ಧವಾಗಿ ನಡೆಸಬೇಕೆಂಬುದು ಸಂವಿಧಾನದ 74ನೇ ತಿದ್ದುಪಡಿಯ ಪ್ರಮುಖ ಆಶಯಗಳಲ್ಲೊಂದು. ಆದರೆ, ಈ ತಿದ್ದುಪಡಿ ಜಾರಿಗೆ ಬಂದು 27 ವರ್ಷಗಳ ಬಳಿಕವೂ ಈ ಆಶಯ ಈಡೇರಿಲ್ಲ.

ಸಂವಿಧಾನದ 74ನೇ ತಿದ್ದುಪಡಿ ಜಾರಿಯಾದ ಬಳಿಕ ಬೆಂಗಳೂರು ಮಹಾನಗರ ಪಾಲಿಕೆ, ಈಗಿನ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ನಾಲ್ಕು ಚುನಾವಣೆಗಳು ನಡೆದಿವೆ. 2001ರ ಚುನಾವಣೆ ಹೊರತುಪಡಿಸಿದರೆ ಪ್ರತಿ ಚುನಾವಣೆಯಲ್ಲೂ ಒಂದಿಲ್ಲ ಒಂದು ತಕರಾರು ತಂದು ಸ್ಥಳೀಯ ಸರ್ಕಾರ ರಚನೆಯನ್ನು ಮುಂದೂಡುವ ಪ್ರಯತ್ನಗಳು ನಡೆದಿವೆ.

ಸಂವಿಧಾನ ತಿದ್ದುಪಡಿ ಬಳಿಕ ಬೆಂಗಳೂರು ಮಹಾನಗರ ಪಾಲಿಕೆಗೆ ನಡೆಯಬೇಕಿದ್ದ ಮೊದಲ ಚುನಾವಣೆಯನ್ನೇ ಮುಂದೂಡಲಾಯಿತು. ‘1995ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ಘೋಷಣೆಯಾಗಿತ್ತು. ನಾಮಪತ್ರ ಸಲ್ಲಿಸುವ ಪ್ರಕ್ರಿಯೆಯೂ ಆರಂಭವಾಗಿತ್ತು. ನಾನೂ ಸೇರಿದಂತೆ ಅನೇಕ ಅಭ್ಯರ್ಥಿಗಳು ತಮ್ಮ ತಮ್ಮ ಪಕ್ಷಗಳಿಂದ ಬಿ–ಫಾರ್ಮ್‌ ಕೂಡ ಪಡೆದಿದ್ದೆವು. ಇನ್ನೇನು ನಾಮಪತ್ರ ಸಲ್ಲಿಸಬೇಕು ಎನ್ನುವಾಗ ಚುನಾವಣೆ ಮುಂದೂಡಲಾಗಿತ್ತು’ ಎಂದು ಸ್ಮರಿಸುತ್ತಾರೆ ಬಿಬಿಎಂಪಿಯ ಹಿರಿಯ ಸದಸ್ಯ ಬಿ.ಎಸ್‌.ಸತ್ಯನಾರಾಯಣ.

‘1995ರಲ್ಲಿ ಚುನಾವಣೆ ಮುಂದೂಡಿದ್ದನ್ನು ಪ್ರಶ್ನಿಸಿ ಮಾಜಿ ಮೇಯರ್‌ ಜೆ.ಕುಪ್ಪುಸ್ವಾಮಿ ಅವರು ಹೈಕೋರ್ಟ್‌ ಮೊರೆ ಹೋಗಿದ್ದರು. ಆಗ ಹೈಕೋರ್ಟ್‌ ಮಹತ್ವದ ಆದೇಶ ನೀಡಿತ್ತು. ಸ್ಥಳೀಯ ನಗರಾಡಳಿತ ಸಂಸ್ಥೆಯ ಅಧಿಕಾರಾವಧಿ ಮುಗಿಯುವಷ್ಟರಲ್ಲಿ ಚುನಾವಣೆ ನಡೆಯದಿದ್ದರೆ ಆಡಳಿತಾಧಿಕಾರಿಯನ್ನು ನೇಮಿಸಲು 1976ರ ಕೆಎಂಸಿ ಕಾಯ್ದೆಯ ಸೆಕ್ಷನ್‌ 100 (i) (c) ಅವಕಾಶ ಕಲ್ಪಿಸುತ್ತಿತ್ತು. ಸಂವಿಧಾನದ 74ನೇ ತಿದ್ದುಪಡಿ ಬಳಿಕ ಈ ಸೆಕ್ಷನ್‌ ತನ್ನಿಂದ ತಾನೇ ರದ್ದಾಗುತ್ತದೆ ಎಂದು ಆದೇಶ ಮಾಡಿ ಆದಷ್ಟು ಬೇಗ ಚುನಾವಣೆ ನಡೆಸುವಂತೆ ಹೈಕೋರ್ಟ್‌ ಆದೇಶ ಮಾಡಿತ್ತು’ ಎಂದು ನೆನಪಿಸಿಕೊಳ್ಳುತ್ತಾರೆ ಬಿಬಿಎಂಪಿಯ ಹಿರಿಯ ಸದಸ್ಯ ಪದ್ಮನಾಭ ರೆಡ್ಡಿ.

2001ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ಚುನಾಯಿತ ಕೌನ್ಸಿಲ್‌ ಅವಧಿ ಮುಗಿಯುವ ಮುನ್ನವೇ ಚುನಾವಣೆ ನಡೆದಿದೆ. 2006ರಲ್ಲಿ ಈ ಚುನಾಯಿತ ಕೌನ್ಸಿಲ್‌ ಅವಧಿ ಮುಗಿಯುವಷ್ಟರಲ್ಲಿ ಸರ್ಕಾರ ಅದನ್ನು ವಿಸರ್ಜಿಸಿ ಆಡಳಿತಾಧಿಕಾರಿಯನ್ನು ನೇಮಿಸಿತು. 2007ರ ಜನವರಿಯಲ್ಲಿ ಬೆಂಗಳೂರಿನ ಏಳು ನಗರಸಭೆಗಳನ್ನು ಹಾಗೂ ಒಂದು ಪಟ್ಟಣ ಪಂಚಾಯಿತಿ ಹಾಗೂ 110 ಹಳ್ಳಿಗಳನ್ನು ಸೇರಿಸಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ರಚಿಸಲು ಅಧಿಸೂಚನೆ ಪ್ರಕಟವಾಯಿತು. 2007ರ ಏಪ್ರಿಲ್‌ನಲ್ಲಿ ಬಿಬಿಎಂಪಿ ರಚನೆಯಾದ ತಕ್ಷಣವೇ ಚುನಾವಣೆ ನಡೆಯಬೇಕಿತ್ತು. ಆದರೆ, 2010ರ ಮಾರ್ಚ್‌ವರೆಗೆ ಚುನಾವಣೆ ನಡೆಯಲೇ ಇಲ್ಲ. ಸುಮಾರು ನಾಲ್ಕು ವರ್ಷ ಚುನಾಯಿತ ಕೌನ್ಸಿಲ್‌ ಇರಲೇ ಇಲ್ಲ. ಆಗಲೂ ಮಾಜಿ ಮೇಯರ್‌ ಪಿ.ಆರ್‌.ರಮೇಶ್‌ ಅವರು ಹೈಕೋರ್ಟ್‌ ಮೊರೆ ಹೋದರು. ಚುನಾವಣೆ ನಡೆಸುವಂತೆ ನ್ಯಾಯಾಲಯ ಆದೇಶ ಮಾಡಿದ್ದರಿಂದಲೇ ಸರ್ಕಾರ ಚುನಾವಣೆ ನಡೆಸಿತು.

2015ರಲ್ಲೂ ಅವಧಿ ಮುಗಿಯಲು ಇನ್ನೇನು ಮೂರು ದಿನ ಇದೆ ಎನ್ನುವಾಗ ಸರ್ಕಾರ ಚುನಾಯಿತ ಕೌನ್ಸಿಲನ್ನು ವಿಸರ್ಜಿಸಿತು. ಬಿಬಿಎಂಪಿಯನ್ನು ಮೂರು ವಿಭಜನೆ ಮಾಡುವ ನೆಪ ಹೇಳಿ ಮತ್ತೆ ಆಡಳಿತಾಧಿಕಾರಿಯನ್ನು ನೇಮಿಸಲಾಯಿತು. ಆಗಲೂ ಸಿ.ಕೆ.ರಾಮಮೂರ್ತಿಯವರು ಹೈಕೋರ್ಟ್‌ ಮೊರೆ ಹೋಗಿದ್ದರು. ವಾರ್ಡ್‌ ಮರುವಿಂಗಡಣೆ ಆಗಿಲ್ಲ ಎಂಬ ನೆಪ ಹೇಳಿ ಕಾಲಹರಣ ಮಾಡಲು ಸರ್ಕಾರ ಮುಂದಾಯಿತು. ಆದರೆ, ಹೈಕೋರ್ಟ್‌ ಸೊಪ್ಪು ಹಾಕಲಿಲ್ಲ. ನ್ಯಾಯಾಲಯ ಆದೇಶ ಮಾಡಿದ್ದರಿಂದಲೇ 2015ರಲ್ಲಿ ಸರ್ಕಾರ ಚುನಾವಣೆ ನಡೆಸಲೇ ಬೇಕಾಯಿತು.

ಈಗಿನ ಚುನಾಯಿತ ಕೌನ್ಸಿಲ್‌ ಅವಧಿ 2020ರ ಸೆ 10ಕ್ಕೆ ಕೊನೆಗೊಳ್ಳುತ್ತದೆ. ಅವಧಿ ಪೂರ್ಣಗೊಳ್ಳಲು ಆರು ತಿಂಗಳು ಇರುವಾಗ, 2020ರ ಮಾರ್ಚ್‌ನಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಸರ್ಕಾರ ಬಿಬಿಎಂಪಿ ಮಸೂದೆಯನ್ನು ಮಂಡಿಸಿತು. ಮೇಯರ್‌ ಅವಧಿಯನ್ನು ಐದು ವರ್ಷಕ್ಕೆ ಹೆಚ್ಚಿಸುವುದು, ವಾರ್ಡ್ ಸಮಿತಿಗಳನ್ನು ಬಲಪಡಿಸುವುದು, ಏರಿಯಾ ಸಭಾಗಳನ್ನು ರಚಿಸುವುದು ಸೇರಿದಂತೆ ಅನೇಕ ಹೊಸ ಪ್ರಸ್ತಾವನೆಗಳನ್ನು ಹೊಂದಿದ್ದ ಈ ಮಸೂದೆಗೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳಿಂದ ಭಾರಿ ವಿರೋಧ ವ್ಯಕ್ತವಾಯಿತು. ಹಾಗಾಗಿ ಈ ಮಸೂದೆಯನ್ನು ಸಲಹಾ ಸಮಿತಿಯ ಪರಿಶೀಲನೆಗೆ ಒಪ್ಪಿಸಲಾಗಿದೆ. 

ಈ ಬಾರಿಯೂ ಸಮಯಕ್ಕೆ ಸರಿಯಾಗಿ ಚುನಾವಣೆ ನಡೆದಿಲ್ಲ. ಚುನಾವಣೆ ಮುಂದೂಡುವುದಕ್ಕೆ ಸರ್ಕಾರ ಯಾವುದೇ ಕಾರಣವನ್ನೂ ನೀಡಿಲ್ಲ. ಕೊರೊನಾ ಹಾವಳಿ ಇರುವುದರಿಂದ ಚುನಾವಣೆ ನಡೆಸಲಾಗುತ್ತಿಲ್ಲ ಎಂದೂ ಸರ್ಕಾರ ಹೇಳಿಲ್ಲ.  2020ರ ಮಾರ್ಚ್‌ ಒಳಗೆ ವಾರ್ಡ್‌ಗಳ ಮರುವಿಂಗಡಣೆ ಪ್ರಕ್ರಿಯೆ ಪೂರ್ಣಗೊಂಡು ವಾರ್ಡ್‌ವಾರು ಮತದಾರರ ಪಟ್ಟಿ ಸಿದ್ಧವಾಗಬೇಕಿತ್ತು. ಅಚ್ಚರಿಯೆಂದರೆ, ಈ ಬಾರಿ ರಾಜ್ಯ ಚುನಾವಣಾ ಆಯೋಗವೇ ಸರ್ಕಾರದ ವಿರುದ್ದ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದೆ. ಚುನಾವಣೆಗೆ ಸಹಕರಿಸದ ಬಗ್ಗೆ ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡ ಬಳಿಕವೇ ಸರ್ಕಾರ ವಾರ್ಡ್‌ ಮರುವಿಂಗಡಣೆ ನಡೆಸಿದೆ. ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಆರಂಭಿಸಿದೆ.

ವಾರ್ಡ್‌ಗಳ ಮರುವಿಂಗಡಣೆ ಕುರಿತು 2020 ಜೂನ್ 23ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಇದಾಗಿ ಎರಡೂವರೆ ತಿಂಗಳುಗಳ ಬಳಿಕ ಸರ್ಕಾರ ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು 198ರಿಂದ  225ಕ್ಕೆ ಹೆಚ್ಚಿಸುವ ಕುರಿತು ಚರ್ಚೆ ನಡೆಸಿದೆ. ಚುನಾಯಿತ ಕೌನ್ಸಿಲ್‌ ಅವಧಿ ಮುಗಿಯಲು ಬೆರಳೆಣಿಕೆಯಷ್ಟು ದಿನಗಳು ಬಾಕಿ ಇರುವಾಗ ಈ ಬೆಳವಣಿಗೆ ಸಹಜವಾಗಿಯೇ ಚುನಾವಣೆಯನ್ನು ಮತ್ತಷ್ಟು ಮುಂದೂಡುವ ಸಿದ್ಧತೆಯಂತೆ ತೋರುತ್ತಿದೆ.

ಬಿಬಿಎಂಪಿಗೆ ಹೊಸ ಚುನಾಯಿತ ಕೌನ್ಸಿಲ್‌ ರಚಿಸುವ ಪ್ರಕ್ರಿಯೆ ಇನ್ನೂ ಅನಿಶ್ಚಿತವಾಗಿಯೇ ಇದೆ. ಸ್ಥಳೀಯ ಸರ್ಕಾರದಲ್ಲಿ ಯಾವುದೇ ನಿರ್ವಾತ ಸೃಷ್ಟಿಯಾಗಬಾರದು ಎಂಬ  ಆಶಯಕ್ಕೆ ಈ ಬಾರಿಯೂ ಎಳ್ಳುನೀರು ಬಿಡುವ ಪ್ರಯತ್ನವನ್ನು ಸರ್ಕಾರ ನಡೆಸಿದೆ. ಇನ್ನೊಂದೆಡೆ, ಬೆಂಗಳೂರಿನಲ್ಲಿ ಕೊರೊನಾ ಸೋಂಕಿನ ನಾಗಾಲೋಟ ಮುಂದುವರಿದಿದೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಚುನಾಯಿತ ಸ್ಥಳೀಯ ಸರ್ಕಾರ ಅಸ್ತಿತ್ವದಲ್ಲಿದ್ದರೆ ಜನರ ಸಂಕಷ್ಟಗಳಿಗೆ ಸ್ಪಂದಿಸುವುದು ಸಹಜವಾಗಿಯೇ ಸುಲಭ. ಹಾಗಾಗಿ ಸರ್ಕಾರ ಕುಂಟುನೆಪಗಳನ್ನು ಹುಡುಕುತ್ತಾ ಚುನಾವಣೆಯನ್ನು ಮತ್ತಷ್ಟು ಮುಂದೂಡುವುದು ಸಮಂಜಸ ಅಲ್ಲ.

ಈ ಬಾರಿಯೂ ನ್ಯಾಯಾಲಯದ ಆದೇಶದ ಮೇರೆಗ ಬಿಬಿಎಂಪಿ ಚುನಾವಣೆ ನಡೆಸುವ ಪರಿಸ್ಥಿತಿ ಬರಬಾರದು. ರಾಜ್ಯ ಚುನಾವಣಾ ಆಯೋಗ ಮತ್ತು ಸರ್ಕಾರ ಸಮಾಲೋಚನೆ ನಡೆಸಿ ಆದಷ್ಟು ಬೇಗ ಚುನಾವಣೆ ನಡೆಸುವುದಕ್ಕೆ ಕ್ರಮಕೈಗೊಳ್ಳಬೇಕು. ನಗರ ಸ್ಥಳೀಯ ಸರ್ಕಾರವನ್ನು ಬಲಪಡಿಸುವ ಸಂವಿಧಾನದ 74ನೇ ತಿದ್ದುಪಡಿಯ ಆಶಯವನ್ನು ಹಾಗೂ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು