ಶನಿವಾರ, ಜುಲೈ 2, 2022
26 °C
ಟೆಕ್ಕಿಗೆ ₹10 ಲಕ್ಷ ಪರಿಹಾರಕ್ಕೆ ಆದೇಶ: ಕೆಲಸಕ್ಕೆ ಕೊಕ್‌

ಟೆಕ್ಕಿಗೆ ₹10 ಲಕ್ಷ ಪರಿಹಾರಕ್ಕೆ ಆದೇಶ: ಕೆಲಸಕ್ಕೆ ಕೊಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಂದರ್ಭಿಕ ಚಿತ್ರ

ಬೆಂಗಳೂರು: ‘ಕಂಪನಿ ಮತ್ತು ನೌಕರನ ಮಧ್ಯದ ಬಾಂಧವ್ಯ ಹದಗೆಟ್ಟಾಗ ನೌಕರನನ್ನು ಕೆಲಸದಿಂದ ತೆಗೆದುಹಾಕುವ ಕಂಪನಿಯ ನಿರ್ಧಾರ ಸೂಕ್ತವಾಗಿಯೇ ಇರುತ್ತದೆ’ ಎಂದಿರುವ ಹೈಕೋರ್ಟ್‌, ಉದ್ಯೋಗಿ ಟೆಕ್ಕಿಗೆ ₹ 10 ಲಕ್ಷ ಪರಿಹಾರ ನೀಡಿ ಕೆಲಸದಿಂದ ಬಿಡುಗಡೆಗೊಳಿಸುವಂತೆ ಅರ್ಜಿದಾರ ಕಂಪನಿಗೆ ಆದೇಶಿಸಿದೆ.

ಈ ಸಂಬಂಧ ‘ವಿಎಂ ವೇರ್‌ ಸಾಫ್ಟ್‌ವೇರ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪನಿ’ ಸಲ್ಲಿಸಿದ್ದ ಅರ್ಜಿ ವಿಲೇವಾರಿ ಮಾಡಿರುವ ನ್ಯಾಯಮೂರ್ತಿ ಕೆ.ಎಸ್.ಮುದಗಲ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರನಿಗೆ ಸಂಬಂಧಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅನುಸರಿಸಿದ ಮಾನದಂಡವನ್ನು ಟೆಕ್ಕಿಗೂ ಅನ್ವಯಿಸಿದೆ.  ‘ಈ ಆದೇಶ ತಲುಪಿದ 30 ದಿನಗಳಲ್ಲಿ ಟೆಕ್ಕಿಗೆ ₹ 10 ಲಕ್ಷ ಪರಿಹಾರ ನೀಡಿ ಕೆಲಸದಿಂದ ಬಿಡುಗಡೆಗೊಳಿಸಿ. ಸಕಾಲದಲ್ಲಿ ಪಾವತಿಸದಿದ್ದರೆ ವಾರ್ಷಿಕ 10ರ ಬಡ್ಡಿ ನೀಡಿ’ ಎಂದು ನಿರ್ದೇಶಿಸಿದೆ.

ಪ್ರಕರಣವೇನು?: ಅಮೆರಿಕದ ಕ್ಯಾಲಿಫೋರ್ನಿಯಾ ಮೂಲದ  ವಿ.ಎಂ ಸಾಫ್ಟ್‌ವೇರ್‌ ಕಂಪನಿ ಬೆಂಗಳೂರಿನಲ್ಲಿ ಶಾಖೆ ಹೊಂದಿದೆ. ಈ ಕಂಪನಿಯಲ್ಲಿ ಅಶೀಷ್‌ ಕುಮಾರ್ ನಾಥ್‌ ಎಂಬ ಟೆಕ್ಕಿ ಗುಣಮಟ್ಟ ಎಂಜಿನಿಯರಿಂಗ್ ಅಭಿವೃದ್ಧಿ ವಿಭಾಗದಲ್ಲಿ ಹಿರಿಯ ಸಾಫ್ಟ್‌ವೇರ್ ಎಂಜಿನಿಯರ್ ಆಗಿ 2015ರ ಏಪ್ರಿಲ್ 2ರಂದು ನೇಮಕಗೊಂಡಿದ್ದರು. ವಾರ್ಷಿಕ ₹ 24 ಲಕ್ಷಕ್ಕೂ ಹೆಚ್ಚಿನ ಸಂಬಳ ನಿಗದಿಪಡಿಸಲಾಗಿತ್ತು.

ಆರು ತಿಂಗಳ ಪ್ರೊಬೆಷನರಿ ಅವಧಿ ಮುಗಿದ ನಂತರ ಅಶೀಷ್‌ ಅವರನ್ನು ಕಾಯಂಗೊಳಿಸಲಾಗಿತ್ತು. ಆದರೆ, ನಂತರದ ದಿನಗಳಲ್ಲಿ ಅವರ ಕೆಲಸದ ಸಾಮರ್ಥ್ಯ ತೃಪ್ತಿದಾಯಕವಾಗಿಲ್ಲ ಎಂಬ ಕಾರಣಕ್ಕಾಗಿ ಸಾಮರ್ಥ್ಯ ಅಭಿವೃದ್ಧಿ ಶಿಬಿರಕ್ಕೆ ತೆರಳಿ ತರಬೇತಿ ಪಡೆಯುವಂತೆ ಕಂಪನಿ ಸೂಚಿಸಿತ್ತು.

‘ನನ್ನನ್ನು ಕೆಲಸದಿಂದ ತೆಗೆದು ಹಾಕುವ ಸಲುವಾಗಿಯೇ ತರಬೇತಿ ಶಿಬಿರಕ್ಕೆ ತೆರಳಲು ಸೂಚಿಸಲಾಗಿದೆ’ ಎಂದು ತಗಾದೆ ತೆಗೆದಿದ್ದ ಅಶೀಷ್‌ ತರಬೇತಿಯನ್ನು ನಿರಾಕರಿಸಿದ್ದರು. ಇದನ್ನು ಶಿಸ್ತುಉಲ್ಲಂಘನೆ ಎಂದು ಪರಿಗಣಿಸಿದ ಕಂಪನಿ 2015ರ ಡಿಸೆಂಬರ್ 28ರಂದು ಕೆಲಸದಿಂದ ತೆಗೆದುಹಾಕಿತ್ತು. ಇದನ್ನು ಪ್ರಶ್ನಿಸಿ ಅಶೀಷ್‌ ಕಾರ್ಮಿಕ ನ್ಯಾಯಾಲಯದ ಮೊರೆ ಹೋಗಿದ್ದರು.

2021ರ ಫೆಬ್ರುವರಿ 26ರಂದು ಆದೇಶ ನೀಡಿದ್ದ ಬೆಂಗಳೂರಿನ ಮೂರನೇ ಹೆಚ್ಚುವರಿ ಕಾರ್ಮಿಕ ನ್ಯಾಯಾಲಯ, ‘ಅಶೀಷ್ ಅವರನ್ನು ಪುನಃ ಕೆಲಸಕ್ಕೆ ಸೇರ್ಪಡೆ ಮಾಡಿಕೊಂಡು ಪೂರ್ಣ ವೇತನ ಮತ್ತು ಹಿಂಬಾಕಿ ನೀಡಬೇಕು’ ಎಂದು ಆದೇಶಿಸಿತ್ತು. ‘ಕಾರ್ಮಿಕ ನ್ಯಾಯಾಲಯದ ಆದೇಶ ರದ್ದುಗೊಳಿಸಬೇಕು‘ ಎಂದು ಕೋರಿದ ಕಂಪನಿ ಹೈಕೋರ್ಟ್‌ ಮೆಟ್ಟಿಲೇರಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠ, ಆದೇಶ ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು