ಸೋಮವಾರ, ಜುಲೈ 4, 2022
24 °C
ಗೃಹ ಇಲಾಖೆಗೆ ಪ್ರಸ್ತಾವ ಸಲ್ಲಿಸಿದ ಕಾರಾಗೃಹ ಇಲಾಖೆ

ಪರಪ್ಪನ ಅಗ್ರಹಾರ ಜೈಲಿನಲ್ಲಿ ಐಟಿಐ ಕಾಲೇಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕೈದಿಗಳಿಗೆ ವೃತ್ತಿಪರ ತರಬೇತಿ ನೀಡುವ ಉದ್ದೇಶದಿಂದ ಹೊಸದೊಂದು ಐಟಿಐ ಕಾಲೇಜು ಆರಂಭಿಸಲು ಚಿಂತನೆ ನಡೆದಿದ್ದು, ಈ ಸಂಬಂಧ ಕಾರಾಗೃಹ ಇಲಾಖೆ ಅಧಿಕಾರಿಗಳು ಗೃಹ ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದಾರೆ.

‘ಕೈದಿಗಳು, ಜೈಲಿಗೆ ಬಂದು ವರ್ಷಾನುಗಟ್ಟಲೇ ಶಿಕ್ಷೆ ಅನುಭವಿಸುತ್ತಾರೆ. ಶಿಕ್ಷೆ ಅವಧಿ ಮುಗಿಸಿ ಬಿಡುಗಡೆಯಾದ ನಂತರ ಅವರ ಭವಿಷ್ಯ ಸಹ ಉತ್ತಮವಾಗಿರಬೇಕು. ಹೀಗಾಗಿ, ಶಿಕ್ಷೆ ಅವಧಿಯಲ್ಲೇ ವೃತ್ತಿಪರ ತರಬೇತಿ ನೀಡಲು ಯೋಚಿಸಲಾಗಿದೆ’ ಎಂದು ಕಾರಾಗೃಹ ಅಧಿಕಾರಿಯೊಬ್ಬರು ಹೇಳಿದರು.

‘ಯೋಗ, ಟೈಲರಿಂಗ್, ಬೇಕರಿ ಉತ್ಪನ್ನಗಳ ತಯಾರಿಕೆ ಸೇರಿದಂತೆ ವಿವಿಧ ತರಬೇತಿಗಳನ್ನು ಈಗಾಗಲೇ ಕೈದಿಗಳಿಗೆ ನೀಡಲಾಗುತ್ತಿದೆ. ಆದರೆ, ಅವುಗಳೆಲ್ಲವೂ ತಾತ್ಕಾಲಿಕ ಮಾತ್ರ. ಕೈದಿ ಪರಿಪೂರ್ಣವಾಗಿ ವೃತ್ತಿಪರವಾಗುವಂತೆ ನೋಡಿಕೊಳ್ಳಲು ಹೊಸದೊಂದು ತರಬೇತಿ ಕಾಲೇಜು ಅಗತ್ಯವಿರುವುದಾಗಿ ಪ್ರಸ್ತಾವದಲ್ಲಿ ತಿಳಿಸಲಾಗಿದೆ’ ಎಂದೂ ವಿವರಿಸಿದರು.

‘ಜೈಲಿಗೆ ಬರುವ ಬಹುತೇಕರು, ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪೂರ್ಣಗೊಳಿಸಿರುತ್ತಾರೆ. ಅದಕ್ಕೂ ಮುನ್ನವೇ ಶಾಲೆ ಬಿಟ್ಟವರೂ ಇರುತ್ತಾರೆ. ಕೆಲವರು ಪದವಿ ಅರ್ಧಕ್ಕೆ ಮೊಟಕುಗೊಳಿಸಿರುತ್ತಾರೆ. ಇಂಥವರನ್ನು ಗಮನದಲ್ಲಿಟ್ಟುಕೊಂಡು ಹೊಸ ಕಾಲೇಜಿನ ರೂಪುರೇಷೆ ಸಿದ್ಧಪಡಿಸಲಾಗಿದೆ. ಕಾಲೇಜಿನಲ್ಲಿ 6 ತಿಂಗಳು ಹಾಗೂ ವರ್ಷದ ಕೋರ್ಸ್ ಇರಲಿದೆ. ಪ್ರಸ್ತಾವಕ್ಕೆ ಒಪ್ಪಿಗೆ ಸಿಕ್ಕ ಬಳಿಕ, ತಜ್ಞರ ಸಹಾಯದಿಂದ ಪಠ್ಯಕ್ರಮ ಸಿದ್ಧಪಡಿಸಲಾಗುವುದು’ ಎಂದೂ ಹೇಳಿದರು.

‘ರಾಜ್ಯದ ಹಲವೆಡೆ ಐಟಿಐ ಕಾಲೇಜುಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಿವೆ. ಅಂಥ ಕಾಲೇಜುಗಳ ಪೈಕಿ, ಒಂದು ಕಾಲೇಜನ್ನು ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಸ್ಥಳಾಂತರಿಸುವ ಬಗ್ಗೆಯೂ ಪ್ರಸ್ತಾವದಲ್ಲಿ ಉಲ್ಲೇಖಿಸಲಾಗಿದೆ.’

‘ಕಾಲೇಜು ಸ್ಥಾಪನೆ ಮಾಡಬೇಕೋ ಬೇಡವೇ ಎಂಬುದು ಗೃಹ ಇಲಾಖೆಗೆ ಬಿಟ್ಟ ವಿಷಯ. ಸದ್ಯ ಇಲಾಖೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದೂ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು