ಮಂಗಳವಾರ, ಜುಲೈ 27, 2021
21 °C
ನಾಗಮೋಹನದಾಸ್ ಸಮಿತಿ ವರದಿಯಲ್ಲಿ ಹೆಸರು ಉಲ್ಲೇಖ | ಸಮಜಾಯಿಷಿ ನೀಡಿದ ನಿವೃತ್ತ ಪ್ರಧಾನ ಎಂಜಿನಿಯರ್‌

ಕಾಮಗಾರಿ ಅಕ್ರಮ: ನಾನವನಲ್ಲ ಎಂದ ಸಿದ್ದೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಬಿಬಿಎಂಪಿಯ ಗಾಂಧಿನಗರ ವಿಭಾಗದಲ್ಲಿ 2008ರಿಂದ 2012ರ ನಡುವೆ ನಾನು ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಆಗಿರಲಿಲ್ಲ. ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್‌ ನೇತೃತ್ವದ ತನಿಖಾ ಸಮಿತಿಯ ವರದಿಯಲ್ಲಿ ಉಲ್ಲೇಖಿಸಿದಂತೆ ಈ ಅವಧಿಯಲ್ಲಿ ಈ ವಿಭಾಗದಲ್ಲಿ ಅನುಷ್ಠಾನಗೊಂಡ ಕಾಮಗಾರಿಗಳಲ್ಲಿ ನಡೆದಿರುವ ಅಕ್ರಮಗಳಿಗೂ ನನಗೂ ಸಂಬಂಧ ಇಲ್ಲ’ ಎಂದು ಬಿಬಿಎಂಪಿಯ ಪ್ರಧಾನ ಎಂಜಿನಿಯರ್‌ ಹುದ್ದೆಯಿಂದ ಇತ್ತೀಚೆಗೆ ನಿವೃತ್ತರಾಗಿರುವ ಕೆ.ಸಿದ್ದೇಗೌಡ ಸ್ಪಷ್ಟಪಡಿಸಿದ್ದಾರೆ.

ಕಾರಣ ಕೇಳಿ ನೀಡಿರುವ ನೋಟಿಸ್‌ ಸಂಬಂಧ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ರಾಕೇಶ್ ಸಿಂಗ್‌ ಅವರಿಗೆ ಪತ್ರ ಬರೆದಿರುವ ಕೆ.ಸಿದ್ದೇಗೌಡ ಅವರು, ತಮ್ಮ ವಿರುದ್ಧದ ಆರೋಪಗಳಿಗೆ ಸಮಜಾಯಿಷಿ ನೀಡಿದ್ದಾರೆ.

‘2008–12ರ ಅವಧಿಯಲ್ಲಿ ಆರ್‌.ಆರ್.ನಗರ, ಮಲ್ಲೇಶ್ವರ ಹಾಗೂ ಗಾಂಧಿನಗರ ವಿಭಾಗಗಳಲ್ಲಿ ಕಾಮಗಾರಿಗಳಲ್ಲಿ ಅಕ್ರಮ ಎಸಗಿದ ಆರೋಪ ಹೊತ್ತಿರುವ ಸಿದ್ದೇಗೌಡ ನಾನಲ್ಲ. ನನ್ನ ಹೆಸರು ಕೆ.ಸಿದ್ದೇಗೌಡ. ನಾನು ಬೊಮ್ಮನಹಳ್ಳಿಯಲ್ಲಿ ಮುಖ್ಯ ಎಂಜಿನಿಯರ್‌ ಆಗಿ ಕರ್ತವ್ಯ ನಿರ್ವಹಿಸಿದ್ದೆ. ಆಕಸ್ಮಿಕವಾಗಿ ಅನ್ಯ ಸಿದ್ದೇಗೌಡ ಅವರ ಹೆಸರಿನ ಮುಂದೆ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸ್ಥಳವನ್ನು ಉಲ್ಲೇಖಿಸುವಾಗ ಕಣ್ತಪ್ಪಿನಿಂದ ಮುಖ್ಯ ಎಂಜಿನಿಯರ್‌ ಬೊಮ್ಮನಹಳ್ಳಿ ಎಂದು ನಮೂದಾಗಿತ್ತು. ಈ ಬಗ್ಗೆ ಎಲ್ಲ ವಿವರಗಳನ್ನು ತನಿಖಾ ಸಮಿತಿಯ ಜಯನಗರದ ಕಚೇರಿಗೆ, ಬಿಬಿಎಂಪಿ ಆಯುಕ್ತರಿಗೆ, ಪ್ರಧಾನ ಎಂಜಿನಿಯರ್‌ಗೆ, ಪಶ್ಚಿಮವಲಯದ ಜಂಟಿ ಆಯುಕ್ತರಿಗೆ ಹಾಗೂ ಮುಖ್ಯ ಎಂಜಿನಿಯರ್‌ ಅವರಿಗೆ ಈಗಾಗಲೇ ಸಲ್ಲಿಸಿದ್ದೇನೆ’ ಎಂದು ಸಿದ್ದೇಗೌಡ ಪತ್ರದಲ್ಲಿ ತಿಳಿಸಿದ್ದಾರೆ.

‘ನಾನು 2004ರ ಅ.08 ರಿಂದ 2011ರ ಮಾ. 3ರವರೆಗೆ ಕೆಎಂಆರ್‌ಪಿ ಕಚೇರಿಯಲ್ಲಿ ಯೋಜನಾ ನಿರ್ದೇಶಕನಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ನನ್ನ ಗಮನದಲ್ಲಿದ್ದಂತೆ ಪಾಲಿಕೆಯಲ್ಲಿ ತನಿಖಾ ವರದಿಯ ಅನುಬಂಧದಲ್ಲಿ ಉಲ್ಲೇಖವಾಗಿರುವ ಹೆಸರು ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಜೋಗಿ ಸಿದ್ದೇಗೌಡ ಅವರದ್ದು. ಅವರು ಈ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದಾರೆ. ತಪ್ಪುಗ್ರಹಿಕೆಯಿಂದ ಆಕಸ್ಮಿಕವಾಗಿ ತನಿಖಾ ಸಮಿತಿಯ ವರದಿಯ ಅನುಬಂಧದಲ್ಲಿ ನನ್ನ ಹೆಸರು ನಮೂದಾಗಿದೆ’ ಎಂದೂ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈ ಪತ್ರವನ್ನು ಉಲ್ಲೇಖಿಸಿ ರಾಕೇಶ್ ಸಿಂಗ್‌ ಅವರು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರಿಗೆ ಪತ್ರ ಬರೆದಿದ್ದಾರೆ. ’ಕೆ.ಸಿದ್ದೇಗೌಡ ಅವರು ನೀಡಿರುವ ಸಮಜಾಯಿಷಿಯಲ್ಲಿರುವ ಅಂಶಗಳನ್ನು ಪರಿಶೀಲಿಸಬೇಕು. ತನಿಖಾ ಸಮಿತಿಯ ತನಿಖಾ ವರದಿಯಲ್ಲಿ ಇವರ ಹೆಸರು ಸೇರಿದೆಯೋ ಇಲ್ಲವೋ ಎಂಬುದನ್ನು ಸ್ಪಷ್ಟ ಅಭಿಪ್ರಾಯದೊಂದಿಗೆ ಮೂರು ದಿನಗಳ ಒಳಗೆ ಸಲ್ಲಿಸಬೇಕು' ಎಂದೂ ಸೂಚಿಸಿದ್ದಾರೆ.

ಗಾಂಧಿನಗರ ಉಪವಿಭಾಗದಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಆಗಿದ್ದ ಸಿದ್ದೇಗೌಡ ಅವರ ಮೇಲೆ ಕಾಮಗಾರಿಗಳ ಟೆಂಡರ್‌ ಕರೆಯುವಾಗ ಅಕ್ರಮ ನಡೆಸಿದ ಗುರುತರ ಆರೋಪವಿದೆ. ಗಾಂಧಿನಗರ, ಆರ್‌.ಆರ್‌.ನಗರ ಹಾಗೂ ಮಲ್ಲೇಶ್ವರ ಉಪವಿಭಾಗಗಳಲ್ಲಿ ಅನುಷ್ಠಾನವಾಗಿದ್ದ ಕಾಮಗಾರಿಗಳಲ್ಲಿ ಅಕ್ರಮ ನಡೆದಿರುವುದು ನಾಗಮೋಹನದಾಸ್‌ ನೇತೃತ್ವದ ತನಿಖಾ ಸಮಿತಿ ವಿಚಾರಣೆಯಲ್ಲಿ ಸಾಬೀತಾಗಿತ್ತು. ಸಿದ್ದೇಗೌಡ ಅವರನ್ನು ತಪ್ಪಿತಸ್ಥರೆಂದು ಗುರುತಿಸಿದ್ದ ಸಮಿತಿಯು ಅವರಿಗೆ ಹಿಂಬಡ್ತಿ ನೀಡುವಂತೆಯೂ ಶಿಫಾರಸು ಮಾಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು