ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಡ ನಿರ್ಮಾಣಕ್ಕೆ 10 ಎಂಎಲ್‌ಡಿ ಸಂಸ್ಕರಿತ ನೀರು: ರಾಮ್‌ಪ್ರಸಾತ್‌ ಮನೋಹರ್‌

Published 19 ಏಪ್ರಿಲ್ 2024, 15:14 IST
Last Updated 19 ಏಪ್ರಿಲ್ 2024, 15:14 IST
ಅಕ್ಷರ ಗಾತ್ರ

ಬೆಂಗಳೂರು: ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ 10 ಎಂಎಲ್‌ಡಿ ಸಂಸ್ಕರಿಸಿದ ನೀರು ಸರಬರಾಜು ಮಾಡಲು ಜಲಮಂಡಳಿ ಸಿದ್ಧವಿದೆ ಎಂದು ಅಧ್ಯಕ್ಷ ಡಾ. ವಿ ರಾಮ್‌ಪ್ರಸಾತ್‌ ಮನೋಹರ್‌ ಹೇಳಿದರು.

ಕ್ರೆಡೈ ಹಾಗೂ ಬೆಂಗಳೂರು ಅಪಾರ್ಟ್‌ಮೆಂಟ್‌ ಅಸೋಸಿಯೇಷನ್‌ (ಬಿಎಎಫ್‌) ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಜಲಮಂಡಳಿ 10 ಎಂಎಲ್‌ಡಿ ಸಂಸ್ಕರಿಸಿದ ನೀರು ಸರಬರಾಜು ವ್ಯವಸ್ಥೆ ಹೊಂದಿದ್ದು, ಬಿಎಎಫ್‌ ತನ್ನಲ್ಲಿರುವ ಸಂಸ್ಕರಿಸಿದ ನೀರಿನ ಲಭ್ಯತೆ ಬಗ್ಗೆ ಮಾಹಿತಿ ನೀಡಬೇಕು. ಕಟ್ಟಡ ಕಾಮಗಾರಿಗಳಿಗೆ ಬೇಕಾಗಿರುವ ನೀರಿನ ಬೇಡಿಕೆಯನ್ನು ಕ್ರೆಡೈ ಸಲ್ಲಿಸಬೇಕು ಎಂದು ರಾಮ್‌ಪ್ರಸಾತ್‌ ಸೂಚಿಸಿದರು.

‘ಕಟ್ಟಡ ಕಾಮಗಾರಿಗಳಿಗೆ ಸಂಸ್ಕರಿಸಿದ ನೀರು ನೀಡುವ ಉದ್ದೇಶ ಬಹಳ ಉತ್ತಮವಾಗಿದೆ. ನಮಗೆ ನೀಡುತ್ತಿರುವ ನೀರಿನ ಬೆಲೆ ಬಹಳ ಕಡಿಮೆಯಿದೆ. ನಾವು ಉತ್ತಮ ಗುಣಮಟ್ಟದ ನೀರಿಗೆ ಇನ್ನೂ ಹೆಚ್ಚಿನ ದರ ನೀಡಲು ಸಿದ್ಧರಿದ್ದೇವೆ. ಆದರೆ, ನೀರು ಸಾಗಣೆ ಹಾಗೂ ಸಂಗ್ರಹದ್ದೇ ಸಮಸ್ಯೆ. ಕೆಲವು ಸಂದರ್ಭದಲ್ಲಿ ನೀರಿನಲ್ಲಿ ಕ್ಲೋರಿನ್‌ನಂತಹ ರಾಸಾಯನಿಕಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದೆ. ಹೆಚ್ಚು ಬೇಡಿಕೆ ಇರುವ ಕಡೆಗಳಲ್ಲಿ ಪೈಪ್‌ಲೈನ್‌ ಮೂಲಕ ಸಂಸ್ಕರಿಸಿದ ನೀರು ಸರಬರಾಜು ಮಾಡಬೇಕು’ ಎಂದು ಕ್ರೆಡೈ ಬೆಂಗಳೂರಿನ ಅಧ್ಯಕ್ಷ ರಾಮ್‌ ಮೈಸೂರು ಮನವಿ ಮಾಡಿದರು.

‘ಕ್ರೆಡೈ ಹಾಗೂ ಬಿಎಎಫ್‌ ಮಧ್ಯೆ ಸಂಸ್ಕರಿಸಿದ ನೀರು ಸಾಗಿಸುವ ‘ಫೆಸಿಲಿಟೇಟರ್‌’ ಆಗಿ ಜಲಮಂಡಳಿ ಕಾರ್ಯನಿರ್ವಹಿಸಲಿರುವುದು ಬಹಳ ಸಂತಸದ ಸಂಗತಿ. ನಮ್ಮಲ್ಲಿ ಲಭ್ಯವಿರುವ ಹೆಚ್ಚುವರಿ ನೀರು ಮಾರಾಟ ಮಾಡಲು ಅವಕಾಶ ನೀಡಿರುವುದು ಉತ್ತಮ ಬೆಳವಣಿಗೆ’ ಎಂದು ಬಿಎಎಫ್‌ ಅಧ್ಯಕ್ಷ ವಿಕ್ರಮ್‌ ರಾಯ್‌ ಹೇಳಿದರು.

‘ಸಂಸ್ಕರಿಸಿದ ನೀರಿನ ಗುಣಮಟ್ಟ ಖಾತರಿಗಾಗಿ ‘ಥರ್ಡ್‌ ಪಾರ್ಟಿ’ ಪ್ರಯೋಗಾಲಯದ ಮೂಲಕ ಪ್ರಮಾಣ ಪತ್ರ ನೀಡಲಾಗುವುದು. ಹೊಸ ತಂತ್ರಜ್ಞಾನ ಅಳವಡಿಸಿ ಸಂಸ್ಕರಿಸಿದ ನೀರಿನ ಗುಣಮಟ್ಟವನ್ನೂ ಉತ್ತಮಗೊಳಿಸಲಾಗುವುದು’ ಜಲಮಂಡಳಿ ಅಧ್ಯಕ್ಷರು ತಿಳಿಸಿದರು.

‘ದೊಡ್ಡ ಯೋಜನೆಗಳಿಗೆ ಅಧಿಕ ಪ್ರಮಾಣದ ಸಂಸ್ಕರಿತ ನೀರು ಅಗತ್ಯವಿದ್ದು, ಅವರು ಬೇಡಿಕೆ ಸಲ್ಲಿಸಿದರೆ ಒಂದರಿಂದ ಎರಡು ಕಿ.ಮೀ ಒಳಗಿನ ಅಂತರದಲ್ಲಿರುವ ಎಸ್‌ಟಿಪಿಗಳಿಂದ ಪೈಪ್‌ಲೈನ್‌ ಅಳವಡಿಸಲು ಚಿಂತಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT