ಮಂಗಳವಾರ, ಜುಲೈ 5, 2022
27 °C
ಸಂಚಾರ ದಟ್ಟಣೆ ‘ಜಾಲ’ದಲ್ಲಿ ಸಿಲುಕುವುದನ್ನು ತಪ್ಪಿಸಲಿದೆ ಗ್ರೇಡ್ ಸೆಪರೇಟರ್ * ಪಾದಚಾರಿಗಳ ಸಮಸ್ಯೆಗೆ ಮುಕ್ತಿ

ಸಿಗ್ನಲ್‌ರಹಿತ ಜಂಕ್ಷನ್ ಆಗಲಿದೆ ಜಾಲಹಳ್ಳಿ ಕ್ರಾಸ್

ವಿಜಯಕುಮಾರ್ ಎಸ್.ಕೆ. Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಾಲಹಳ್ಳಿ ಕ್ರಾಸ್‌ನಲ್ಲಿ ಪ್ರಯಾಣಿಕರು ಸಂಚಾರ ದಟ್ಟಣೆ ‘ಜಾಲ’ದಲ್ಲಿ ಸಿಲುಕಿ ಪಡಿಪಾಟಲು ಎದುರಿಸುವುದನ್ನು ತಪ್ಪಿಸಲು, ಗ್ರೇಡ್‌ ಸೆಪರೇಟರ್‌ (ಅಂಡರ್ ಪಾಸ್‌) ನಿರ್ಮಿಸಲು ಬಿಬಿಎಂಪಿ ಮುಂದಾಗಿದೆ. ₹57.22 ಕೋಟಿ ಮೊತ್ತದ ಈ ಯೋಜನೆಯ ಕಾಮಗಾರಿ ಸದ್ಯದಲ್ಲೇ ಆರಂಭವಾಗಲಿದೆ.

ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಪಿಜಿಬಿ ಎಂಜಿನಿಯರಿಂಗ್‌ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಗುತ್ತಿಗೆಯನ್ನೂ ನೀಡಲಾಗಿದೆ. 2023ರ ಮೇ 31ರ ವೇಳೆಗೆ ಕಾಮಗಾರಿ ಮುಗಿಸಬೇಕು ಎಂಬ ಷರತ್ತು ವಿಧಿಸಿ ಗುತ್ತಿಗೆದಾರರಿಗೆ ಕಾಮಗಾರಿಗೆ ಅನುಮತಿ ಪತ್ರವನ್ನೂ ಬಿಬಿಎಂಪಿ ನೀಡಿದೆ.

ಸಿಗ್ನಲ್‌ರಹಿತ ಜಂಕ್ಷನ್‌: ಸದಾ ಸಂಚಾರ ದಟ್ಟಣೆ ಸಮಸ್ಯೆ ಎದುರಿಸುವ ಜಾಲಹಳ್ಳಿ ಕ್ರಾಸ್, ಕಾಮಗಾರಿ ಪೂರ್ಣಗೊಂಡ ಬಳಿಕ ಸಿಗ್ನಲ್ ರಹಿತ ಜಂಕ್ಷನ್ ಆಗಲಿದೆ. ಬಿಬಿಎಂಪಿ ರೂಪಿಸಿರುವ ಯೋಜನೆ ಪ್ರಕಾರ, ಪೀಣ್ಯ ರಸ್ತೆ ಮತ್ತು ಅಯ್ಯಪ್ಪಸ್ವಾಮಿ ದೇವಸ್ಥಾನ ರಸ್ತೆ
ಗಳಲ್ಲಿ (ಸುಬ್ರತೊ ಮುಖರ್ಜಿ ರಸ್ತೆ) ಅಂಡರ್ ಪಾಸ್ ನಿರ್ಮಾಣವಾಗಲಿದೆ. ಎರಡೂ ಕಡೆಯ ವಾಹನಗಳು ಅಂಡರ್ ಪಾಸ್‌ ಮೂಲಕ ನೇರವಾಗಿ ಹಾದುಹೋಗಬಹುದು. ತುಮಕೂರು ಕಡೆಗೆ ಅಥವಾ ಗೊರಗುಂಟೆಪಾಳ್ಯದ ಕಡೆಗೆ ಹೋಗಬೇಕಿರುವ ವಾಹನಗಳು ಅಂಡರ್ ಪಾಸ್ ಪ್ರವೇಶಿಸದೇ ಮೇಲ್ಭಾಗದಲ್ಲಿ ಚಲಿಸಲಿವೆ.

ನೀರು ನಿಲ್ಲುವುದಿಲ್ಲ: ಅಂಡರ್ ಪಾಸ್‌ಗಳಲ್ಲಿ ಮಳೆ ಬಂದಾಗ ನೀರು ತುಂಬಿಕೊಳ್ಳುವುದು ಸಾಮಾನ್ಯ ಸಮಸ್ಯೆ ಎಂಬಂತಾಗಿದೆ. ಆದರೆ, ಜಾಲಹಳ್ಳಿಯ ಕೆಳಸೇತುವೆಯಲ್ಲಿ ನೀರು ನಿಲ್ಲಲು ಅವಕಾಶವೇ ಇಲ್ಲ. ಇಳಿಜಾರಿನ ಕಡೆಗೆ ಒಳಚರಂಡಿ ಇರುವ ಕಾರಣ ನೀರು ಸರಾಗವಾಗಿ ಹರಿದು ಹೋಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ಪಾದಚಾರಿಗಳಿಗೆ ಸ್ಕೈವಾಕ್‌: ಈ ಜಂಕ್ಷನ್‌ನಲ್ಲಿ ಪಾದಚಾರಿಗಳು ರಸ್ತೆ ದಾಟಲು ಹರಸಾಹಸಪಡಬೇಕಾದ ಪರಿಸ್ಥಿತಿ ಇದೆ. ಅಂಡರ್‌ ಪಾಸ್ ನಿರ್ಮಾಣದ ಜೊತೆಗೆ ಪಾದಚಾರಿಗಳ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲು ಯೋಜನೆ ರೂಪಿಸಲಾಗಿದೆ.

ಅಯ್ಯಪ್ಪಸ್ವಾಮಿ ದೇವಸ್ಥಾನ ರಸ್ತೆ ಕಡೆಯಿಂದ ಪೀಣ್ಯ ರಸ್ತೆ ಕಡೆಗೆ ಕೇಬಲ್ ಡಕ್ಟ್‌ ಮಾದರಿಯ ಪಾದಚಾರಿ ಮಾರ್ಗವೂ ನಿರ್ಮಾಣವಾಗಲಿದೆ. ಪಾದಚಾರಿ ಒಂದುಕಡೆ ಹತ್ತಿದರೆ ಯಾವ ಕಡೆಗೆ ಬೇಕಾದರೂ ಇಳಿಯಬಹುದು. ಈ ರೀತಿಯ ವ್ಯವಸ್ಥೆಯನ್ನು ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಶೀಘ್ರವೇ ಕಾಮಗಾರಿ ಆರಂಭ

ಗ್ರೇಡ್ ಸೆಪರೇಟರ್ ನಿರ್ಮಾಣ ಕಾಮಗಾರಿಯನ್ನು ಶೀಘ್ರವೇ ಆರಂಭಿಸಲಾಗುವುದು ಎಂದು ಶಾಸಕ ಮುನಿರತ್ನ ಹೇಳಿದರು.

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಅವರನ್ನು ಆಹ್ವಾನಿಸಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲಾಗುವುದು ಎಂದರು.

ಕಾಮಗಾರಿಯನ್ನು ತ್ವರಿತವಾಗಿ ಮುಗಿಸಲು ಗುತ್ತಿಗೆದಾರರಿಗೆ ತಿಳಿಸಲಾಗಿದೆ. ಕಾಮಗಾರಿ ಮುಗಿದರೆ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಯಾಗಲಿದೆ ಎಂದು ತಿಳಿಸಿದರು.

ವಾಹನ ಸಂಚಾರ ಬಂದ್ ಇಲ್ಲ

ಕಾಮಗಾರಿ ನಡೆಯುವ ಸಂದರ್ಭದಲ್ಲಿ ರಸ್ತೆಯಲ್ಲಿ ವಾಹನಗಳ ಸಂಚಾರ ಬಂದ್ ಮಾಡುವುದಿಲ್ಲ ಎಂದು ಮುನಿರತ್ನ ತಿಳಿಸಿದರು.

ನಮ್ಮ ಮೆಟ್ರೊ ರೈಲು ಮಾರ್ಗಕ್ಕೆ ಸುರಂಗ ಕೊರೆಯುವ ಮಾದರಿಯಲ್ಲಿ ಅಂಡರ್‌ಪಾಸ್ ನಿರ್ಮಾಣಕ್ಕೆ ಸುರಂಗ ಕೊರೆಯಲಾಗುತ್ತದೆ. ಹೀಗಾಗಿ ವಾಹನಗಳ ಸಂಚಾರಕ್ಕೆ ಕಾಮಗಾರಿ ಅಡ್ಡಿಯಾಗದು ಎಂದರು.

ಅಂಕಿ ಅಂಶ

* ₹57.22 ಕೋಟಿ – ಕಾಮಗಾರಿಯ ಅಂದಾಜು ಮೊತ್ತ

* 24 ತಿಂಗಳು – ಕಾಮಗಾರಿ ಪೂರ್ಣಗೊಳಿಸಲು ವಿಧಿಸಿರುವ ಗಡುವು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು