ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಟ್ಲರ್ ಪ್ರಜ್ಞೆಯಲ್ಲಿ ಮುಳುಗಿವೆ ಎಡ, ಬಲ ಪಂಥ- ಪ್ರೊ.ಎಸ್.ಜಿ. ಸಿದ್ಧರಾಮಯ್ಯ

ಭೂಮ್ತಾಯಿ’ ಪುಸ್ತಕ ಬಿಡುಗಡೆ
Last Updated 13 ಮಾರ್ಚ್ 2022, 15:40 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಸ್ತುತ ರಾಜಕಾರಣದಲ್ಲಿ ಪ್ರಾಮಾಣಿಕತೆ ಮರೀಚಿಕೆ ಆಗಿದೆ. ಎಡ ಮತ್ತು ಬಲ ಪಂಥಗಳು ಹಿಟ್ಲರ್ ಪ್ರಜ್ಞೆಯಲ್ಲಿ ಮುಳುಗಿದ್ದು, ಜಗತ್ತನ್ನು ಯುದ್ಧಕೋರತನ ಮೂಲಕ ನಾಶ ಮಾಡಲು ಹವಣಿಸುತ್ತಿವೆ’ ಎಂದು ಸಾಹಿತಿ ಪ್ರೊ.ಎಸ್.ಜಿ. ಸಿದ್ಧರಾಮಯ್ಯ ಬೇಸರ ವ್ಯಕ್ತಪಡಿಸಿದರು.

ಸಾಹಿತ್ಯ ಸಂಗಮ ಟ್ರಸ್ಟ್ ಹಾಗೂ ಜಾಣಗೆರೆ ಪತ್ರಿಕೆ ಪ್ರಕಾಶನ ಜಂಟಿಯಾಗಿ ನಗರದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಜಾಣಗೆರೆ ವೆಂಕಟರಾಮಯ್ಯ ಅವರ ‘ಭೂಮ್ತಾಯಿ’ ಪುಸ್ತಕವನ್ನು ಬಿಡುಗಡೆಮಾಡಿ, ಮಾತನಾಡಿದರು. ‘ಇಡೀ ದೇಶ ಸುಳ್ಳಿನ ಭ್ರಮೆಯೊಳಗೆ ಕೊಚ್ಚಿಹೋಗುತ್ತಿದೆ. ಸುಳ್ಳಿನ ಸರಕನ್ನು ಖರೀದಿಸಿದ ಪ್ರಜೆಗಳು ಬಲಿಪಶುಗಳಾಗಿದ್ದಾರೆ. ಎಲ್ಲ ರಾಜಕಾರಣಿಗಳಿಗೆ ಭ್ರಷ್ಟಾಚಾರ, ಭಂಜಕತ್ವ, ದುರಾಸೆಗಳು ಸಂಪತ್ತಾಗಿವೆ. ಇಂದಿನ ಯುವಪಡೆ ಮನಸ್ಥಿತಿ ನೋಡಿದರೆ ದೇಶವನ್ನು ಎಲ್ಲಿಗೆ ಕೊಂಡೊಯ್ಯುತ್ತಾರೆ ಎಂಬ ಆತಂಕ ಕಾಡುತ್ತಿದೆ’ ಎಂದು ಹೇಳಿದರು.

‘ಅಧಿಕಾರ ದಾಹಕ್ಕಾಗಿ ಹಣ, ಹೆಂಡ ಮತ್ತು ಜಾತಿಯ ವಿಷಬೀಜ ಬಿತ್ತುತ್ತ ಪ್ರಾಮಾಣಿಕತೆ ಮಾರಿಕೊಂಡ ರಾಜಕಾರಣಿಗಳು ಇರುವವರೆಗೂ ಪ್ರಜಾಪ್ರಭುತ್ವಕ್ಕೆ ನ್ಯಾಯ ಸಿಗುವುದಿಲ್ಲ. ಕೋಮು ವೈರಾಣುವನ್ನು ಕೊರೊನಾ ವೈರಾಣುವಿನ ಹಾಗೆ ಬಿತ್ತಲಾಗುತ್ತಿದೆ. ಕೋಮುದ್ವೇಷದಲ್ಲಿ ದೇಶವೇ ಹೊತ್ತಿ ಉರಿಯುತ್ತಿರುವ ಅರಿವು ನಮಗಿದ್ದರೂ, ಸಾಹಿತ್ಯ, ಕಲೆ, ಮಾಧ್ಯಮಗಳು ಸೇರಿ ಯಾವುದೇ ವಲಯಗಳಲ್ಲಿ ಕ್ರಿಯಾಶೀಲಗೊಳಿಸಲು ಸಾಧ್ಯವಾಗುತ್ತಿಲ್ಲ’ ಎಂದರು.

ಚಿಂತಕ ಪ್ರೊ.ಕೆ.ಈ. ರಾಧಾಕೃಷ್ಣ, ‘ಸಾಹಿತ್ಯ ವಲಯವು ರಾಜಕಾರಣದಂತೆ ಕೆಡಬಾರದು. ಅದು ಹೊಸ ದಿಕ್ಕಿನಲ್ಲಿ ಸಾಗಬೇಕು. ಸಾಹಿತ್ಯಲೋಕ ಜವಾಬ್ದಾರಿಯಿಂದ ವರ್ತಿಸಬೇಕು. ಎಡ–ಬಲ ಪಂಥಗಳ ನಡುವೆ ಕಚ್ಚಾಟ ಸರಿಯಲ್ಲ. ಸಾಹಿತ್ಯವು ಸಮಾಜದಲ್ಲಿ ಶಾಂತಿ, ಸಹಭಾಳ್ವೆ ಮೂಡಿಸುವ ಕೆಲಸ ಮಾಡಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT