ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಆರ್. ಮಾರುಕಟ್ಟೆ: ಸ್ವಚ್ಛತೆ ಮರೀಚಿಕೆ, ಈಡೇರದ ಬೇಡಿಕೆ

ಸಂಚಾರ ದಟ್ಟಣೆ * ಮೂಲಸೌಲಭ್ಯ ಕೇಳಿದರೆ ಇಲ್ಲ ಉತ್ತರ
Last Updated 29 ಆಗಸ್ಟ್ 2019, 19:40 IST
ಅಕ್ಷರ ಗಾತ್ರ

ಬೆಂಗಳೂರು: ಮಳೆ ಬಂದರೆ ಕೆಸರು, ಬಿಸಿಲು ಇದ್ದರೆ ದೂಳು. ಎಲ್ಲಿ ನೋಡಿದರಲ್ಲಿ ಕಸದ ರಾಶಿ. ನೈಸರ್ಗಿಕ ಕರೆ ಬಂದರೆ ಹೋಗಲು ಶೌಚಾಲಯವಿಲ್ಲ. ಬಾಯಾರಿಕೆಯಾದರೆ ಕುಡಿಯಲು ನೀರಿಲ್ಲ. ಆದರೆ, ಬಿಬಿಎಂಪಿಗೆ ಶುಲ್ಕ ಕಟ್ಟುವುದು ತಪ್ಪಲ್ಲ, ಸೌಲಭ್ಯ ಮಾತ್ರ ಕೇಳುವ ಹಾಗಿಲ್ಲ!

ನಗರದ ಹೃದಯಭಾಗದಲ್ಲಿರುವ ಕೆ.ಆರ್. ಮಾರ್ಕೆಟ್‌ನ ದುಸ್ಥಿತಿ ಇದು. ಈ ಪ್ರದೇಶದ ಅಭಿವೃದ್ಧಿಗಾಗಿ ನೀಡುವ ಹಣ ಕಟ್ಟಡಕ್ಕೆ ಬಣ್ಣ ಹಚ್ಚಲಷ್ಟೇ ವಿನಿಯೋಗವಾಗಿದೆ. ಆದರೆ, ಶಾಶ್ವತ ಸೌಲಭ್ಯ ಕಲ್ಪಿಸುವ ಕೆಲಸವಾಗುತ್ತಿಲ್ಲ. ಸೌಲಭ್ಯ ಕೇಳಿದರೆ ಜಾಗ ಖಾಲಿ ಮಾಡಿ ಎಂದು ಹೇಳುತ್ತಾರೆ. ಆದರೆ, ಪರ್ಯಾಯ ವ್ಯವಸ್ಥೆ ಕಲ್ಪಿಸುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ ಇಲ್ಲಿನ ವರ್ತಕರು.

ಸ್ವಚ್ಛತೆ ಮರೀಚಿಕೆ: ಇಲ್ಲಿನ ನ್ಯೂ ಕಲಾಸಿಪಾಳ್ಯ (ಎನ್‌ಕೆಪಿ) ಮಾರುಕಟ್ಟೆ ಒಳಗೆ ಮತ್ತು ಅದರ ಸುತ್ತ–ಮುತ್ತ ಸ್ವಚ್ಛತೆ ಎನ್ನುವುದು ಮರೀಚಿಕೆಯಾಗಿದೆ. ಈ ಕಟ್ಟಡದಲ್ಲಿ ಎ, ಬಿ, ಸಿ ಮತ್ತು ಡಿ ಬ್ಲಾಕ್‌ಗಳಿದ್ದು, ನಾಲ್ಕು ಪ್ರವೇಶ ದ್ವಾರಗಳಿವೆ. ಮಳೆ ಬಂದರೆ ಈ ನಾಲ್ಕು ಗೇಟ್‌ಗಳಲ್ಲಿ ಮೊಳಕಾಲುದ್ದ ನೀರು ನಿಲ್ಲುತ್ತದೆ. ಒಳಗಿದ್ದವರು ಹೊರಗೆ, ಹೊರಗಿದ್ದವರು ಒಳಗೆ ಬರಲು ಸಾಧ್ಯವಾಗುವುದೇ ಇಲ್ಲ ಎನ್ನುತ್ತಾರೆ ವರ್ತಕರು.

ದಿನ ಬೆಳಿಗ್ಗೆ ಒಂದು ಲಾರಿಯಲ್ಲಿ ತರಕಾರಿ ತ್ಯಾಜ್ಯವನ್ನು ಒಯ್ಯಲಾಗುತ್ತದೆ. ಆದರೆ, ಲಾರಿ ತುಂಬಿ ಉಳಿದ ತರಕಾರಿಯನ್ನು ಇಲ್ಲಿಯೇ ಎಸೆದು ಹೋಗಲಾಗುತ್ತದೆ. ಮರುದಿನದವರೆಗೆ ಕಸ ಅಲ್ಲಿಯೇ ಬಿದ್ದಿರುತ್ತದೆ. ಸಾಕಷ್ಟು ಜಾನುವಾರು ಇಲ್ಲಿ ಓಡಾಡುತ್ತಿದ್ದು, ಅವುಗಳ ಮಾಲೀಕರು ಯಾರು ಎಂದು ಯಾರಿಗೂ ಗೊತ್ತಿಲ್ಲ. ತರಕಾರಿ ಸಾಗಿಸುವ ವಾಹನಗಳು, ಅಡ್ಡಡ್ಡ ಬರುವ ಹಸುಗಳು, ಎಲ್ಲೆಂದರಲ್ಲಿ ಕಾಣುವ ಕಸದ ರಾಶಿಯ ಪರಿಣಾಮ ಈ ಪ್ರದೇಶದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ನಿರಂತರವಾಗಿರುತ್ತದೆ.

ಮಾರುಕಟ್ಟೆಯ ಒಳಗೆ ಮತ್ತು ಸುತ್ತಮುತ್ತ ಉತ್ತಮ ಹೋಟೆಲ್‌ಗಳಿಲ್ಲ. ವರ್ತಕರು ಮನೆಯಿಂದ ತಂದರೆ, ಕೂಲಿಕಾರರು ಅಕ್ಕ–ಪಕ್ಕದ ಹೋಟೆಲ್‌ಗಳಿಗೆ ಹೋಗುತ್ತಾರೆ. ಬೇರೆ ಹೋಟೆಲ್‌ಗಳಿಗೆ ಹೋಲಿಸಿದರೆ, ಇಲ್ಲಿ ದರ ಕಡಿಮೆ ಎನ್ನುವುದೂ ಇದಕ್ಕೆ ಕಾರಣ. ಆದರೆ, ಮಾರುಕಟ್ಟೆಯಲ್ಲಿ ಬಿಸಾಡಿದ ತರಕಾರಿಗಳನ್ನೇ ಆರಿಸಿಕೊಂಡು ಕೆಲವರು ಈ ಹೋಟೆಲ್‌ಗಳಿಗೆ ಮಾರುತ್ತಾರೆ. ಅದೇ ತರಕಾರಿಯಿಂದ ತಯಾರಾದ ಆಹಾರವನ್ನೇ ತಿನ್ನುವ ಪರಿಸ್ಥಿತಿಯಿದೆ ಎಂದು ಹಮಾಲಿಗಳು ಅಳಲು ತೋಡಿಕೊಳ್ಳುತ್ತಾರೆ.

ಪ್ರಜಾವಾಣಿ ‘ಜನಸ್ಪಂದನ’ ನಾಳೆ
‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳ ಆಶ್ರಯದಲ್ಲಿ ಜನಸ್ಪಂದನ ಕಾರ್ಯಕ್ರಮ (ಸಿಟಿಜನ್‌ ಫಾರ್‌ ಚೇಂಜ್‌) ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ವಿಲ್ಸನ್‌ ಗಾರ್ಡನ್‌ ವಿನಾಯಕನಗರದ ಉಲುಚುಕಮ್ಮೆ ಬ್ರಾಹ್ಮಣ ಮಹಾಸಭಾದಲ್ಲಿ ಇದೇ 31ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರ ವರೆಗೆ ನಡೆಯಲಿದೆ.

ಕ್ಷೇತ್ರದ ಜನರು ತಮ್ಮ ದೂರುಗಳನ್ನು ನೇರವಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಹೇಳಿಕೊಂಡು ಸ್ಥಳದಲ್ಲೇ ಪರಿಹಾರ ಪಡೆಯಬಹುದು.

ಕ್ಷೇತ್ರದ ಶಾಸಕ ಉದಯ ಗರುಡಾಚಾರ್‌, ವಾರ್ಡ್‌ಗಳ ಪಾಲಿಕೆ ಸದಸ್ಯರು, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ, ಬೆಸ್ಕಾಂ, ಜಲಮಂಡಳಿ ಹಾಗೂ ಪೊಲೀಸ್‌ ಇಲಾಖೆಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು 31ರಂದು ಬೆಳಿಗ್ಗೆ 9ರಿಂದ ಸ್ಥಳದಲ್ಲೇ ಹೆಸರು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ ರವಿ ಎಂ. (9739997938) ಅವರನ್ನು ಸಂಪರ್ಕಿಸಬಹುದು.

**
ಎಪಿಎಂಸಿಯಿಂದ ಸಿಗದ ಸ್ಪಂದನೆ
ಮಾರುಕಟ್ಟೆ ಪ್ರದೇಶದ ಸುತ್ತಮುತ್ತ ಸಂಚಾರ ದಟ್ಟಣೆ ಇರುತ್ತದೆ. ಮಾರುಕಟ್ಟೆಯನ್ನು ಹುಸ್ಕೂರಿಗೆ ಸ್ಥಳಾಂತರಿಸಬೇಕು ಎಂಬ ಬೇಡಿಕೆ ಇದೆ. ಆದರೆ, ಎಪಿಎಂಸಿ ಸರಿಯಾಗಿ ಸ್ಪಂದಿಸುತ್ತಿಲ್ಲ. ಸ್ಥಳಾಂತರವಾದರೆ ನಗರದೊಳಗಿನ ಸಂಚಾರ ದಟ್ಟಣೆ ಸಮಸ್ಯೆ ಸಾಕಷ್ಟುಕಡಿಮೆಯಾಗುತ್ತದೆ.
-ಬಿ.ಎಸ್. ಶ್ರೀಧರ್‌,ತರಕಾರಿ ವರ್ತಕ

**
ಹೊಸ ಮಳಿಗೆಗೆ ಬಾಡಿಗೆ ವ್ಯರ್ಥ
ಎನ್‌ಕೆಪಿಯಲ್ಲಿ ಹೊಸ ಕಟ್ಟಡ ಕಟ್ಟಿದ್ದು, ಮೊದಲ ಮಹಡಿಯಲ್ಲಿ ಮಳಿಗೆಗಳನ್ನು ನೀಡಲಾಗಿದೆ. ಆದರೆ, ತರಕಾರಿ ಮೂಟೆಗಳನ್ನು ಹೊತ್ತುಕೊಂಡು ಮೇಲೆ ಹೋಗಲು ಆಗುತ್ತಿಲ್ಲ. ಹಾಗಾಗಿ, ಆ ಮಳಿಗೆಗಳನ್ನು ಬಳಸುತ್ತಿಲ್ಲ. ಸುಮ್ಮನೆ ಬಾಡಿಗೆ ಕಟ್ಟಬೇಕಾಗಿದೆ.
-ರವಿರಾಜ್‌,ತರಕಾರಿ ವ್ಯಾಪಾರಿ

**
ವಾಹನ ನಿಲುಗಡೆಗೆ ವ್ಯವಸ್ಥೆಯಿಲ್ಲ
ಮಾರುಕಟ್ಟೆ ಪ್ರದೇಶ ಮತ್ತು ಸುತ್ತಮುತ್ತ ವಾಹನ ನಿಲುಗಡೆಗೆ ವ್ಯವಸ್ಥೆಯೇ ಇಲ್ಲ. ಫುಟ್‌ಪಾತ್‌ನಲ್ಲಿಯೇ ವಾಹನಗಳನ್ನು ನಿಲ್ಲಿಸಬೇಕು. ಮಳೆ ಬಂದರೆ ನೀರು ಹರಿದು ಹೋಗುವ ವ್ಯವಸ್ಥೆಯನ್ನೂ ಮಾಡಿಲ್ಲ. ಅರ್ಧ ತಾಸಿನ ಕೆಲಸಕ್ಕೆ ಎರಡು ಗಂಟೆ ಸಮಯ ವ್ಯರ್ಥವಾಗುತ್ತದೆ.
-ಸಿ.ಟಿ. ವೆಂಕಟೇಶ,ಗ್ರಾಹಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT