ಬೆಂಗಳೂರು: ‘ಜಯನಗರ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ಹೊಸದಾಗಿ ನಿರ್ಮಿಸಿರುವ ಒಂದನೇ ಬ್ಲಾಕ್‌ನ ತಳಮಹಡಿಯಲ್ಲಿದ್ದ ಅಂಗಡಿ ಮಳಿಗೆಗಳನ್ನು ತೆರವುಗೊಳಿಸಿ ಆ ಜಾಗದಲ್ಲಿ ವಾಹನಗಳ ನಿಲುಗಡೆ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅವಕಾಶ ಕಲ್ಪಿಸಿದೆ.
ಈ ಸಂಬಂಧ ಆರ್.ಆರ್.ಹಿರೇಮಠ್ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು ನ್ಯಾಯಾಲಯದ ಆದೇಶ ಪಾಲನೆ ಮಾಡಿರುವ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರ ಪ್ರಮಾಣ ಪತ್ರವನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.
ಕ್ಷಮೆ: ‘ಕೋರ್ಟ್ ಆದೇಶದ ಬಗ್ಗೆ ನನಗೆ ಅಪಾರ ಗೌರವವಿದೆ. ನ್ಯಾಯಾಲಯದ ಆದೇಶಗಳನ್ನು ನಾನು ಸದಾ ಪಾಲಿಸಿಕೊಂಡು ಬಂದಿದ್ದೇನೆ. ಈ ನ್ಯಾಯಾಲಯ 2020ರ ಫೆಬ್ರುವರಿ 4ರಂದು ಹೊರಡಿಸಿರುವ ಆದೇಶ ಉಲ್ಲಂಘನೆ ಮಾಡಿರುವುದಕ್ಕೆ ಬೇಷರತ್ ಕ್ಷಮೆ ಕೋರುತ್ತೇನೆ’ ಎಂದು ತುಷಾರ್ ಗಿರಿನಾಥ್ ಪ್ರಮಾಣ ಪತ್ರದಲ್ಲಿ ವಿವರಿಸಿದ್ದಾರೆ.
‘ನ್ಯಾಯಾಲಯಕ್ಕೆ ನೀಡಿದ್ದ ವಾಗ್ದಾನದಂತೆ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್‌ನ ಒಂದನೇ ಬ್ಲಾಕ್‌ನ ತಳಮಹಡಿಯಲ್ಲಿದ್ದ ಮಳಿಗೆಗಳನ್ನು ಈಗ ತೆರವುಗೊಳಿಸಲಾಗಿದೆ. ಅಲ್ಲಿದ್ದ ಅಂಗಡಿಗಳ ಮಾಲೀಕರನ್ನು ಸ್ಥಳಾಂತರಗೊಳಿಸಲಾಗಿದೆ. ಆ ಜಾಗವನ್ನು ವಾಹನಗಳ ನಿಲುಗಡೆಗೆ ಕಾಯ್ದಿರಿಸಲಾಗಿದೆ. ಆದ್ದರಿಂದ, ನನ್ನ ವಿರುದ್ಧದ ನ್ಯಾಯಾಂಗ ನಿಂದನೆ ಕ್ರಮ ಕೈಬಿಡಬೇಕು’ ಎಂದು ಕೋರಿದ್ದರು.
ಇದನ್ನು ಮಾನ್ಯ ಮಾಡಿರುವ ನ್ಯಾಯಪೀಠ ನ್ಯಾಯಾಂಗ ನಿಂದನೆ ಅರ್ಜಿ ವಿಲೇವಾರಿ ಮಾಡಿತು. ಅರ್ಜಿದಾರರ ಪರ ಹೈಕೋರ್ಟ್ ವಕೀಲ ಜಿ.ಆರ್.ಮೋಹನ್ ವಾದ ಮಂಡಿಸಿದ್ದರು.
ಪ್ರಕರಣವೇನು?: ‘ಶಾಪಿಂಗ್ ಕಾಂಪ್ಲೆಕ್ಸ್‌ನ ಬ್ಲಾಕ್-1ರ ಮರು ನಿರ್ಮಾಣದ ವೇಳೆ ಪಾರ್ಕಿಂಗ್ ಜಾಗಕ್ಕಾಗಿ ಮೀಸಲಿದ್ದ ಮೇಲಿನ ನೆಲಮಹಡಿಯಲ್ಲಿ ಮಳಿಗೆಗಳ ಕಾರ್ಯ ನಿರ್ವಹಣೆಗೆ ಬಿಬಿಎಂಪಿ ಅನುಮತಿ ನೀಡಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ವೇಳೆ ಪ್ರಮಾಣ ಪತ್ರ ಸಲ್ಲಿಸಿದ್ದ ಬಿಬಿಎಂಪಿ, ‘ಕಾಂಪ್ಲೆಕ್ಸ್‌ನ ಬ್ಲಾಕ್-1ರ ಮರು ನಿರ್ಮಾಣದ ಹಿನ್ನೆಲೆಯಲ್ಲಿ ತಾತ್ಕಾಲಿಕ ಅನುಮತಿ ಕಲ್ಪಿಸಲಾಗಿದೆ. ಬ್ಲಾಕ್-2, 3 ಮತ್ತು 4 ಅನ್ನು ನಿರ್ಮಿಸಿದ ನಂತರ ಮೇಲಿನ ನೆಲಮಹಡಿ ಜಾಗವನ್ನು ಪಾರ್ಕಿಂಗ್‌ಗೆ ಬಳಸಲಾಗುವುದು‘ ಎಂದು ತಿಳಿಸಿತ್ತು.
ಇದನ್ನು ದಾಖಲಿಸಿಕೊಂಡಿದ್ದ ಹೈಕೋರ್ಟ್, ‘ಶಾಪಿಂಗ್ ಕಾಂಪ್ಲೆಕ್ಸ್ ಬ್ಲಾಕ್‌ಗಳ ಮರು ನಿರ್ಮಾಣದ ನಂತರ ಮೇಲಿನ ನೆಲಮಹಡಿಯಲ್ಲಿ ನಿರ್ಮಿಸಿರುವ ಮಳಿಗೆಗಳನ್ನು ತೆರವುಗೊಳಿಸಬೇಕು‘ ಎಂದು 2020ರಲ್ಲಿ ನಿರ್ದೇಶಿಸಿತ್ತು. ‘ಈ ಆದೇಶ ಹೊರಬಿದ್ದು ಮೂರು ವರ್ಷ ಕಳೆದರೂ ಅಕ್ರಮ ಮಳಿಗೆಗಳನ್ನು ತೆರವುಗೊಳಿಸುವಲ್ಲಿ ಬಿಬಿಎಂಪಿ ವಿಫಲವಾಗಿದೆ‘ ಎಂದು ಆರೋಪಿಸಿ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.