ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೌರಿಂಗ್‌ ಆಸ್ಪತ್ರೆಯಲ್ಲಿ ಅವ್ಯವಸ್ಥೆಯ ದರ್ಶನ- ಹೈಕೋರ್ಟ್‌ ನ್ಯಾಯಮೂರ್ತಿ ಭೇಟಿ

ಆಸ್ಪತ್ರೆಯ ಕುರಿತು ಕಾನೂನು ಸೇವಾ ಪ್ರಾಧಿಕಾರಕ್ಕೆ ದೂರು
Last Updated 8 ಅಕ್ಟೋಬರ್ 2022, 20:51 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಬೌರಿಂಗ್‌ ಆಸ್ಪತ್ರೆಗೆ ಹೈಕೋರ್ಟ್ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಶನಿವಾರ ದಿಢೀರ್‌ ಭೇಟಿ ನೀಡಿ, ಪರಿಶೀಲಿಸಿದರು.

ನ್ಯಾಯಮೂರ್ತಿಗೆ ಆಸ್ಪತ್ರೆ ಅವ್ಯವಸ್ಥೆಯ ದರ್ಶನವಾಯಿತು. ಅವ್ಯವಸ್ಥೆ ಕಂಡು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

‘ಚರ್ಮರೋಗ ವಿಭಾಗ’ಕ್ಕೆ ಭೇಟಿ ನೀಡಿದ ಅವರು, ವಿಭಾಗದ ಬಹುತೇಕ ವೈದ್ಯರು ರಜೆಯಲ್ಲಿರುವುದನ್ನು ಕಂಡು ಗರಂ ಆದರು.

ಆರು ಮಂದಿ ವೈದ್ಯರ ಪೈಕಿ ಐವರು ರಜೆಯಲ್ಲಿದ್ದಾರೆ. ಒಬ್ಬರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ಧಾರೆ ಎಂಬ ಮಾಹಿತಿ ತಿಳಿದು, ‘ಹೆಚ್ಚು ರೋಗಿಗಳು ಬಂದರೆ ಚಿಕಿತ್ಸೆ ನೀಡುವುದಾರರೂ ಹೇಗೆ’ ಎಂದು ಪ್ರಶ್ನಿಸಿದರು.

‘ಹಾಸಿಗೆಗಳೂ ಶುಚಿಯಾಗಿಲ್ಲ. ಸ್ವಚ್ಛತೆ ಮಾಡಿ ಎಷ್ಟು ದಿನ ಕಳೆಯಿತು?’ ಎಂದು ತರಾಟೆಗೆ ತೆಗೆದುಕೊಂಡರು.

ಔಷಧ ಕೇಂದ್ರಕ್ಕೆ ಭೇಟಿ ನೀಡಿದ ನ್ಯಾಯಮೂರ್ತಿ, ಅಲ್ಲಿಯೂ ಅವ್ಯವಸ್ಥೆ ಕಂಡು ಆಕ್ರೋಶ ಹೊರಹಾಕಿದರು. ಸ್ಥಳದಲ್ಲಿದ್ದ ದೂಳು ಹಾಗೂ ಕಸ ಕಂಡು ‘ನಿಮಗೆ ಆಗದಿದ್ದರೆ ನನಗೆ ಪೊರಕೆ ಕೊಡಿ. ನಾನೇ ಶುಚಿ ಮಾಡುತ್ತೇನೆ’ ಎಂದು ಎಚ್ಚರಿಸಿದರು. ಶಸ್ತ್ರಚಿಕಿತ್ಸಾ ಕೊಠಡಿ ಹಾಗೂ ರಕ್ತನಿಧಿ ಘಟಕ ಸಹ ಪರಿಶೀಲಿಸಿದರು.

‘ಸರ್ಕಾರವು ಪ್ರತಿ ವರ್ಷ ಆಸ್ಪತ್ರೆಗಳ ಸುಧಾರಣೆ ಅನುದಾನ ನೀಡುತ್ತಿದೆ. ಸಿಬ್ಬಂದಿಯನ್ನು ನೇಮಿಸುತ್ತಿದೆ. ಆದರೆ, ಆಸ್ಪತ್ರೆ ವ್ಯವಸ್ಥೆಯಲ್ಲಿ ಸುಧಾರಣೆ ಕಾಣಿಸುತ್ತಿಲ್ಲ. ಸರ್ಕಾರಿ ಆಸ್ಪತ್ರೆ
ಗಳಲ್ಲಿ ಸ್ವಚ್ಛತೆ ಹಾಗೂ ಉತ್ತಮ ಚಿಕಿತ್ಸೆ ಲಭಿಸಿದರೆ ಮಾತ್ರ ರೋಗಿಗಳು ಬರುತ್ತಾರೆ. ಬಡವರಿಗೂ ಅನುಕೂಲ ಆಗಲಿದೆ. ಇಲ್ಲದಿದ್ದರೆ ಖಾಸಗಿ ಆಸ್ಪತ್ರೆಗೆ ತೆರಳುತ್ತಾರೆ’ ಎಂದು ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.

ಶಸ್ತ್ರಚಿಕಿತ್ಸಾ ವಿಭಾಗದ ವೈದ್ಯ ಕೆಂಪರಾಜು ಅವರಿಂದ ಕರ್ತವ್ಯನಿರತ ವೈದ್ಯರು, ಆಸ್ಪತ್ರೆಯಲ್ಲಿ ಸಿಬ್ಬಂದಿಯ ಮಾಹಿತಿ ಪಡೆದುಕೊಂಡರು.

‘ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ದೂರುಗಳು ಬಂದಿದ್ದು, ಪರಿಶೀಲನೆ ನಡೆಸಿದ್ದೇನೆ. ಸ್ವಚ್ಛತೆ ಕೊರತೆ ಇದ್ದು, ಸರ್ಕಾರಕ್ಕೆ ವರದಿ ನೀಡಲಾಗುವುದು’ ಎಂದು ವೀರಪ್ಪ ತಿಳಿಸಿದರು.

‘ಇದು 750 ಹಾಸಿಗೆಯ ಆಸ್ಪತ್ರೆಯಾಗಿದ್ದು, ಹಲವು ವೈದ್ಯರು ರಜೆಯಲ್ಲಿ ಇದ್ದಾರೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ರಾಜ್ಯ ಸರ್ಕಾರವು ಹೆಚ್ಚು ಕಾಳಜಿ ವಹಿಸಬೇಕು. ವೈದ್ಯರು ಹಾಗೂ ಸಿಬ್ಬಂದಿಯ ಮಾಹಿತಿ ಕೇಳಿದ್ದೇನೆ. ಔಷಧವನ್ನು ಬಳಕೆ ಮಾಡಬೇಕು ಎಂದು ಸೂಚಿಸಿದ್ದೇನೆ. ಆಸ್ಪತ್ರೆ ಮುಖ್ಯಸ್ಥರು ಯಾರು ಎಂಬುದೇ ತಿಳಿದಿಲ್ಲ. ಮುಖ್ಯಸ್ಥರು ಬೆಳಿಗ್ಗೆಯಿಂದ ಸಂಜೆಯ ತನಕ ಕರ್ತವ್ಯ ನಿರ್ವಹಣೆಮಾಡಬೇಕು’ ಎಂದು ತಾಕೀತು ಮಾಡಿದರು.

‘ವ್ಯತ್ಯಾಸ ಸರಿಪಡಿಸುತ್ತೇವೆ’

‘ಬೌರಿಂಗ್‌ ಆಸ್ಪತ್ರೆಯಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿವೆ. ಅದನ್ನು ಸರಿ ಪಡಿಸಿಕೊಳ್ಳುತ್ತೇವೆ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

ನ್ಯಾಯಾಧೀಶರ ಆಸ್ಪತ್ರೆ ಭೇಟಿ ಕುರಿತು ಪ್ರತಿಕ್ರಿಯಿಸಿದ ಅವರು, ‘ಬೌರಿಂಗ್ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ಲಭಿಸುತ್ತಿದೆ. 500 ಹಾಸಿಗೆಗಳ ಹೊಸ ಕಟ್ಟಡ ನಿರ್ಮಾಣ ಮಾಡುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT