ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುರಕ್ಷ 75 ಮಿಷನ್ 2023’ನಲ್ಲಿ ಜಂಕ್ಷನ್‌ ಅಭಿವೃದ್ಧಿ

Last Updated 27 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಜಂಕ್ಷನ್‌ಗಳನ್ನು ಪಾದಚಾರಿಗಳಿಗೆ ಸುರಕ್ಷಿತವಾಗಿರಿಸಲು ಬಿಬಿಎಂಪಿ ರೂಪಿಸಿರುವ ‘ಸುರಕ್ಷ 75 ಮಿಷನ್ 2023’ ಯೋಜನೆಯ ಕಾಫಿ ಟೇಬಲ್‌ ಪುಸ್ತಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿದರು.

ರೇಸ್‌ಕೋರ್ಸ್ ರಸ್ತೆಗೆ ‘ರೆಬಲ್ ಸ್ಟಾರ್ ಡಾ. ಎಂ.ಎಚ್. ಅಂಬರೀಶ್ ರಸ್ತೆ’ ಎಂದು ಹೆಸರಿಸಿದ ಕಾರ್ಯಕ್ರಮದಲ್ಲಿ ಯೋಜನೆಯ ವಿವರಗಳನ್ನು ಬಿಡುಗಡೆ ಮಾಡಲಾಯಿತು.

ಬೆಂಗಳೂರಿನ 75 ಜಂಕ್ಷನ್‌ಗಳನ್ನು ಮರುವಿನ್ಯಾಸಗೊಳಿಸುವ ಯೋಜನೆ ಇದಾಗಿದೆ. ಎಲ್ಲ ರಸ್ತೆ ಬಳಕೆದಾರರಿಗೆ, ವಿಶೇಷವಾಗಿ ಪಾದಚಾರಿಗಳು ಮತ್ತು ಸೈಕ್ಲಿಸ್ಟ್‌ಗಳು ಸೇರಿದಂತೆ ರಸ್ತೆ ಅಪಘಾತಗಳಿಂದ ಸುರಕ್ಷಿತಗೊಳಿಸುವ ಉದ್ದೇಶ ಈ ಯೋಜನೆಯದ್ದಾಗಿದೆ.

ಹೆಚ್ಚು ಅಪಘಾತಗಳಾಗುವ ಜಂಕ್ಷನ್‌ಗಳನ್ನು ಸುರಕ್ಷಿತವಾಗಿರಿಸುವ ಗುರಿಯನ್ನು ಹೊಂದಿರುವ ‘ಸುರಕ್ಷ 75 ಮಿಷನ್ 2023’ ಬಿಬಿಎಂಪಿ, ಬೆಂಗಳೂರು ಟ್ರಾಫಿಕ್ ಪೊಲೀಸ್, ವಿಶ್ವ ಸಂಪನ್ಮೂಲ ಸಂಸ್ಥೆ ಭಾರತ (ಡಬ್ಲ್ಯೂಆರ್‌ಐ) ಸಹಯೋಗದೊಂದಿಗೆ, ಬ್ಲೂಮ್‌ಬರ್ಗ್‌ ಫಿಲಾಂತ್ರೊಪಿಸ್‌ ಜಾಗತಿಕ ರಸ್ತೆ ಸುರಕ್ಷತೆಗಾಗಿ ಲೋಕೋಪಕಾರಿ ಉಪಕ್ರಮ (ಬಿಜಿಆರ್‌ಎಸ್‌) ಅಡಿಯಲ್ಲಿ ಈ ಯೋಜನೆಯನ್ನು ಆರಂಭಿಸಲಾಗುತ್ತಿದೆ.

ಬಿಬಿಎಂಪಿಯು ಕಳೆದ ಎರಡು ವರ್ಷಗಳಲ್ಲಿ ಟೌನ್‌ಹಾಲ್ ಜಂಕ್ಷನ್, ಮೌರ್ಯ ಜಂಕ್ಷನ್ ಮತ್ತು ಬಾಳೇಕುಂದ್ರಿ ವೃತ್ತ ಸೇರಿದಂತೆ ಹಲವಾರು ಜಂಕ್ಷನ್‌ಗಳನ್ನು ಪಾದಚಾರಿ ಪ್ರವೇಶ ಮತ್ತು ಸ್ಪಷ್ಟವಾದ ವಾಕ್‌ವೇಗಳನ್ನು ನಿರ್ಮಿಸುವ ಮೂಲಕ ಸುಧಾರಿಸಿದೆ. ಇದೇ ರೀತಿಯ ಅಭಿವೃದ್ಧಿ ಎಂಟೂ ವಲಯದಲ್ಲಿ ಆಯ್ದ 75 ಜಂಕ್ಷನ್‌ಗಳಲ್ಲಿ ‘ಸುರಕ್ಷಿತ’ ಅಭಿವೃದ್ಧಿಯಾಗಲಿದೆ ಎಂದು ಬಿಬಿಎಂಪಿ ಹೇಳಿದೆ.

ಸುರಕ್ಷಿತ, ಪರಿಣಾಮಕಾರಿ, ಅಂತರ್ಗತ ಮತ್ತು ಸಾರ್ವತ್ರಿಕವಾಗಿ ಪ್ರವೇಶಿಸಬಹುದಾದ ಜನ-ಸ್ನೇಹಿ ಮತ್ತು ಸಮಗ್ರ ಛೇದಕ ರೂಪಾಂತರಗಳನ್ನು ರಚಿಸಲಾಗುತ್ತದೆ. ‘ಸುರಕ್ಷ 75 ಮಿಷನ್ 2023’ ಅಡಿಯಲ್ಲಿ ಬಿಬಿಎಂಪಿಯ ಟ್ರಾಫಿಕ್ ಎಂಜಿನಿಯರಿಂಗ್ ಸೆಲ್ ಜೊತೆಗೆ ಡಬ್ಲ್ಯೂಆರ್‌ಐ ‘ಜ್ಞಾನ ಪಾಲುದಾರರಾಗಿ’ ರಸ್ತೆ ಸುರಕ್ಷತಾ ಕೋಶವನ್ನು ಸ್ಥಾಪಿಸುತ್ತದೆ. ಸುರಕ್ಷಿತ ಜಂಕ್ಷನ್ ಮಾರ್ಗಸೂಚಿ ಮತ್ತು ಸಂವಾದಾತ್ಮಕ ನಕ್ಷೆಯೊಂದಿಗೆ ನೈಜ-ಸಮಯದ ಮೇಲ್ವಿಚಾರಣೆಯ ಡ್ಯಾಶ್‌ಬೋರ್ಡ್ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಯೋಜನೆಯನ್ನು ವಿವರಿಸಲಾಗಿದೆ.

ನಗರದಾದ್ಯಂತ 75 ಜಂಕ್ಷನ್‌ಗಳನ್ನು ಬಿಬಿಎಂಪಿ ಮತ್ತು ಬೆಂಗಳೂರು ಸಂಚಾರ ಪೊಲೀಸರು ನಾಲ್ಕು ವರ್ಷಗಳಲ್ಲಿ ಅಪಘಾತಗಳಿಂದ ವಿಶ್ಲೇಷಿಸಿದ ಪಾದಚಾರಿಗಳ ಸಾವಿನ ಆಧಾರ, ಸಂಚಾರ ದಟ್ಟಣೆ ಮೇಲೆ ಗುರುತಿಸಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

ಸುರಕ್ಷ 75 ಜಂಕ್ಷನ್‌ಗಳು

ಪೂರ್ವ ವಲಯ: ಶಾಸಕರ ಭವನ ವೃತ್ತ, ಬಸವೇಶ್ವರ ವೃತ್ತ, ರಾಜಭವನ ವೃತ್ತ, ಮಿನ್ಸ್ಕ್‌ ಸ್ಕ್ವೇರ್‌, ಎಸ್‌ಜೆಪಿ ರಸ್ತೆ, ಶಿವಾನಂದ, ವಿಂಡ್ಸರ್‌ ಮ್ಯಾನರ್‌, ಅನಿಲ್‌ ಕುಂಬ್ಳೆ ವೃತ್ತ, ಟ್ರಿನಿಟಿ ವೃತ್ತ, ಹೊಸೂರು ರಸ್ತೆ, ದೊಮ್ಮಲೂರು– ಎಚ್‌ಎಎಲ್‌ ಹಳೆ ವಿಮಾನ ರಸ್ತೆ, ಕಾರ್ಪೊರೇಷನ್‌ ಬಸ್‌ ನಿಲ್ದಾಣ, ಹೆಣ್ಣೂರು ವೃತ್ತ.

ದಕ್ಷಿಣ ವಲಯ: ಮಾಗಡಿ ರಸ್ತೆ ಟೋಲ್‌ಗೇಟ್‌, ಬಿಎಚ್‌ಇಎಲ್‌– ಮೈಸೂರು ರಸ್ತೆ, ಕೆ.ಆರ್‌. ಮಾರುಕಟ್ಟೆ, ಮಕ್ಕಳ ಕೂಟ ವೃತ್ತ, ಬನಶಂಕರಿ ದೇವಸ್ಥಾನ, ಕಿಮ್ಕೊ, ಸುಭಾಷ್‌ ಚಂದ್ರಬೋಸ್‌ ವೃತ್ತ, ದೇವೇಗೌಡ ಪೆಟ್ರೋಲ್‌ ಬಂಕ್‌, ಫೋರಂ ಮಾಲ್‌, ಲಾಲ್‌ಬಾಗ್‌ ರಸ್ತೆ–ಹೊಸೂರು ರಸ್ತೆ.

ಪೂರ್ವ ವಲಯ: ಕಾರ್ಡ್‌ ರಸ್ತೆ–ಬಸವೇಶ್ವರನಗರ, ಮೈಸೂರು ಸ್ಯಾಂಡಲ್‌ ಸೋಪ್‌ ಫ್ಯಾಕ್ಟರಿ, ಯಶವಂತಪುರ, ಆನಂದರಾವ್‌ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ವಿ‌ಜಯನಗರ ಬಸ್‌ ನಿಲ್ದಾಣ, ನಾಯಂಡಹಳ್ಳಿ, ಕಂಠೀರವ ಸ್ಟುಡಿಯೊ, ಬಳ್ಳಾರಿ ರಸ್ತೆ– ಚೌಡಯ್ಯ ರಸ್ತೆ, ಕೆ.ಜಿ. ಸರ್ಕಲ್‌, ವಾಟಾಳ್‌ ನಾಗರಾಜ್‌ ರಸ್ತೆ– ರಾಜಾಜಿನಗರ ರಸ್ತೆ.

ಮಹದೇವಪುರ ವಲಯ: ಬೆನ್ನಿಗಾನಹಳ್ಳಿ– ಕೆ.ಆರ್‌. ಪುರ, ಸುಬ್ರಮಣ್ಯ ಸ್ವಾಮಿ ದೇವಸ್ಥಾನ, ವರ್ತೂರು ಕೋಡಿ, ಹೊರ ವರ್ತುಲ ರಸ್ತೆ – ಎಂಬಸ್ಸು ಟೆಕ್‌ ವಿಲೇಜ್‌, ಸರ್ಜಾಪುರ ಸಿಗ್ನಲ್‌– ಇಬ್ಬಲೂರು ಕೆರೆ, ಬಿ. ಚನ್ನಸಂದ್ರ ಸೇತುವೆ, ಟಿನ್‌ ಫ್ಯಾಕ್ಟರಿ, ಕುಂದಲಹಳ್ಳಿ, ದೊಡ್ಡನೆಕ್ಕುಂದಿ, ಕೆ.ಆರ್‌.ಪುರ, ಮಹದೇವಪುರ, ಮಾರತ್ತಹಳ್ಳಿ.

ಯಲಹಂಕ ವಲಯ: ಹೆಬ್ಬಾಳ, ಯಲಹಂಕ ನ್ಯೂ ಟೌನ್‌, ಯಲಹಂಕ ಸಂಚಾರ ಪೊಲೀಸ್‌ ಠಾಣೆ, ಎನ್‌ಇಎಸ್‌ ಬಸ್‌ ನಿಲ್ದಾಣ, ಯಲಹಂಕ ರಸ್ತೆ– ವಿದ್ಯಾರಣ್ಯಪುರ ಮುಖ್ಯರಸ್ತೆ, ಹಾಸ್ಟಲ್‌ ಬಸ್‌ ನಿಲ್ದಾಣ, ಬಳ್ಳಾರಿ– ಪಾಲನಹಳ್ಳಿ ರಸ್ತೆ, ಬಳ್ಳಾರಿ– ಕೋಗಿಲು ಮುಖ್ಯರಸ್ತೆ.

ರಾಜರಾಜೇಶ್ವರಿನಗರ ವಲಯ: ಜಯಣ್ಣ ವೃತ್ತ– ಕೆಂಚೇನಹಳ್ಳಿ, ಗೊರಗುಂಟೆಪಾಳ್ಯ, ಶ್ರೀಗಂಧಕಾವಲ್‌, ನೈಸ್‌ ರಸ್ತೆ– ಕೆಂಗೇರಿ ರಸ್ತೆ, ಸುಮನಹಳ್ಳಿ, ಬಿಇಎಲ್‌ ವೃತ್ತ, ಕೆಂಗೇರಿ ಬಸ್‌ ಟರ್ಮಿನಲ್‌.

ಬೊಮ್ಮನಹಳ್ಳಿ ವಲಯ: ಎಚ್‌.ಎಸ್‌.ಆರ್‌ ಲೇಔಟ್‌ 27ನೇ ಮುಖ್ಯರಸ್ತೆ, ಸಾರಕ್ಕಿ, ಬನ್ನೇರುಘಟ್ಟ ರಸ್ತೆ– ಬಿಡಿಎ 80 ಅಡಿ ರಸ್ತೆ, ಬನ್ನೇರುಘಟ್ಟ ರಸ್ತೆ– ಅರೆಕೆರೆ ರಸ್ತೆ, ಗಾರೆಬಾವಿಪಾಳ್ಯ ದೇವಸ್ಥಾನ, ಹೊಂಗಸಂದ್ರ ಎಂಎಸ್‌, ಕೂಡ್ಲು ಗೇಟ್‌ ಸಿಟಿ ಬಸ್‌ ನಿಲ್ದಾಣ, ಮಣಿಪಾಲ್‌ ಕೌಂಟ್‌– ಹೊಸೂರು ರಸ್ತೆ.

ದಾಸರಹಳ್ಳಿ ವಲಯ: ನಾಗಸಂದ್ರ ಎಂಎಸ್‌, 8ನೇ ಮೈಲಿ ವೃತ್ತ, ದಾಸರಹಳ್ಳಿ ಎಂಎಸ್‌, ಜಾಲಹಳ್ಳಿ ಕ್ರಾಸ್‌ ರಸ್ತೆ– ತುಮಕೂರು ರಸ್ತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT