ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ನಿ, ಮಕ್ಕಳಿಬ್ಬರನ್ನು ಕೊಂದು ಟೆಕಿ ಆತ್ಮಹತ್ಯೆ

* ಕಾಡುಗೋಡಿ ಠಾಣೆ ವ್ಯಾಪ್ತಿಯಲ್ಲಿ ಘಟನೆ * ಕಾರಣ ನಿಗೂಢ
Published 4 ಆಗಸ್ಟ್ 2023, 0:12 IST
Last Updated 4 ಆಗಸ್ಟ್ 2023, 0:12 IST
ಅಕ್ಷರ ಗಾತ್ರ

ಬೆಂಗಳೂರು: ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಉಸಿರುಗಟ್ಟಿಸಿ ಕೊಂದು ಸಾಫ್ಟ್‌ವೇರ್ ಎಂಜಿನಿಯರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಕಾಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೀರಾರ್ಜುನ್ ವಿಜಯ್ (31), ಪತ್ನಿ ಹೇಮಾವತಿ (29), ಮಕ್ಕಳಾದ ಎಂಟು ತಿಂಗಳ ಸೃಷ್ಠಿ ಸುನಯನಾ, ಎರಡು ವರ್ಷದ ಮೋಕ್ಷಾ ಮೇಘನಯನಾ ಮೃತರು.

‘ಆಂಧ್ರಪ್ರದೇಶದ ವಿಜಯ್, ನಗರದ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದರು. 6 ವರ್ಷಗಳ ಹಿಂದೆಯಷ್ಟೇ ಹೇಮಾವತಿ ಅವರನ್ನು ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ಸೀಗೆಹಳ್ಳಿಯ ಸಾಯಿ ಗಾರ್ಡನ್‌ ಅಪಾರ್ಟ್‌ಮೆಂಟ್ ಸಮುಚ್ಚಯದ ಫ್ಲ್ಯಾಟ್‌ನಲ್ಲಿ ಕುಟುಂಬ ನೆಲೆಸಿತ್ತು’ ಎಂದು ಪೊಲೀಸರು ಹೇಳಿದರು.

‘ಫ್ಲ್ಯಾಟ್‌ನಿಂದ ಗುರುವಾರ ದುರ್ವಾಸನೆ ಬರುತ್ತಿತ್ತು. ಅನುಮಾನಗೊಂಡ ಸ್ಥಳೀಯರು ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹೋಗಿ ಫ್ಲ್ಯಾಟ್‌ ಬಾಗಿಲು ಮೀಟಿ ತೆರೆಯಲಾಯಿತು. ಪತ್ನಿ ಹಾಗೂ ಮಕ್ಕಳ ಮೃತದೇಹಗಳು ನೆಲದ ಮೇಲಿದ್ದವು. ವಿಜಯ್‌ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿತ್ತು. ಟಿ.ವಿ ಸಹ ಆನ್ ಇತ್ತು’ ಎಂದು ತಿಳಿಸಿದರು.

ಹೊರಗೆ ಬಾರದ ದಂಪತಿ: ‘ಜುಲೈ 31ರಂದು ರಾತ್ರಿ ಪತ್ನಿ ಹಾಗೂ ಮಕ್ಕಳನ್ನು ವಿಜಯ್ ಕೊಲೆ ಮಾಡಿದ್ದಾರೆ. ನಂತರ, ತಾವೂ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆಗಸ್ಟ್ 1ರ ಬೆಳಿಗ್ಗೆಯಿಂದ ದಂಪತಿ ಹಾಗೂ ಮಕ್ಕಳು ಹೊರಗೆ ಬಂದಿರಲಿಲ್ಲ. ಇದರಿಂದ ಸ್ಥಳೀಯರಲ್ಲಿ ಅನುಮಾನ ಮೂಡಿತ್ತು’ ಎಂದು ಪೊಲೀಸರು ಹೇಳಿದರು.

‘ಊರಿಗೆ ಹೋಗಿರಬಹುದೆಂದು ಸ್ಥಳೀಯರು ಅಂದುಕೊಂಡಿದ್ದರು. ಆದರೆ, ದುರ್ವಾಸನೆ ಬಂದಿದ್ದರಿಂದ ಮನೆಯಲ್ಲೇ ಮೃತಪಟ್ಟಿರುವ ಅನುಮಾನ ಉಂಟಾಗಿತ್ತು’ ಎಂದು ತಿಳಿಸಿದರು.

ಸಮವಸ್ತ್ರದಿಂದ ಕುತ್ತಿಗೆ ಬಿಗಿದು ಮಗು ಕೊಲೆ: ‘ಎಂಟು ತಿಂಗಳ ಮಗುವನ್ನು ಕುತ್ತಿಗೆಗೆ ಸಮವಸ್ತ್ರದಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಹೇಮಾವತಿ ಹಾಗೂ ಮೋಕ್ಷಾ ಮೇಘನಯನಾ ಅವರನ್ನು ಕುತ್ತಿಗೆ ಹಿಸುಕಿ ಕೊಂದಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

‘ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಭೇಟಿ ನೀಡಿ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಸ್ಥಳದಲ್ಲಿ ಯಾವುದೇ ಮರಣಪತ್ರ ಸಿಕ್ಕಿಲ್ಲ. ಹೀಗಾಗಿ, ನಾಲ್ವರ ಸಾವಿಗೆ ಕಾರಣವೇನು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ಆಂಧ್ರಪ್ರದೇಶದಲ್ಲಿರುವ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ. ಅವರು ನಗರಕ್ಕೆ ಬಂದ ನಂತರ ಹೇಳಿಕೆ ಪಡೆಯಲಾಗುವುದು’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT