ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ನಾಪತ್ತೆ ಪ್ರಕರಣಗಳು ಹೆಚ್ಚಳ: ಕೈಲಾಶ್‌ ಸತ್ಯಾರ್ಥಿ

ಡಾ.ಎಂ.ಎಸ್‌. ರಾಮಯ್ಯ ಸ್ಮಾರಕ ಉಪನ್ಯಾಸದಲ್ಲಿ ಕೈಲಾಶ್‌ ಸತ್ಯಾರ್ಥಿ ಕಳವಳ
Published 5 ಜೂನ್ 2023, 19:58 IST
Last Updated 5 ಜೂನ್ 2023, 19:58 IST
ಅಕ್ಷರ ಗಾತ್ರ

ಬೆಂಗಳೂರು: ‘ಜಾತಿ ವ್ಯವಸ್ಥೆ ತೊಲಗಿಸಲು ಸಾಕಷ್ಟು ಹೋರಾಟಗಳು ನಡೆದರೂ ಜಾತಿ ವ್ಯವಸ್ಥೆ ಇನ್ನೂ ಮುಂದುವರಿದಿದೆ. ಸಮಾಜ ಸುಧಾರಣೆಗಾಗಿ ನ್ಯಾಯಪರ ಹಾಗೂ ಜಾತಿ ವ್ಯವಸ್ಥೆ ವಿರುದ್ಧ ಕೆಲಸಗಳು ನಡೆಯಬೇಕಿದೆ’ ಎಂದು ಮಕ್ಕಳ ಹಕ್ಕುಗಳ ಹೋರಾಟಗಾರ, ನೊಬೆಲ್‌ ಪ್ರಶಸ್ತಿ ಪುರಸ್ಕೃತ ಕೈಲಾಶ್‌ ಸತ್ಯಾರ್ಥಿ ಕರೆ ನೀಡಿದರು.

ನಗರದ ರಾಮಯ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಆರ್‌ಐಟಿ)ಯಲ್ಲಿ ಸೋಮವಾರ ಆಯೋಜಿಸಿದ್ದ ಡಾ.ಎಂ.ಎಸ್‌. ರಾಮಯ್ಯ ಸ್ಮಾರಕ ಉಪನ್ಯಾಸದಲ್ಲಿ ಅವರು ಮಾತನಾಡಿದರು.

‘ನಾನು ಚಿಕ್ಕವಯಸ್ಸಿನಲ್ಲೇ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟಕ್ಕೆ ಇಳಿದೆ. ಸಾಕಷ್ಟು ಆಂದೋಲನ ನಡೆಸಿದ್ದೇನೆ. ಆದರೂ, ಈ ವ್ಯವಸ್ಥೆ ಬದಲಾಗಿಲ್ಲ. ಜಾತಿ ಮತಬಿಟ್ಟು ನಾವೆಲ್ಲರೂ ಒಂದೇ ಕುಟುಂಬದಂತೆ ಬದುಕಬೇಕು’ ಎಂದು ಕರೆ ನೀಡಿದರು.

‘ದೇಶದಲ್ಲಿ ಮಕ್ಕಳ ನಾಪತ್ತೆ ಪ್ರಕರಣಗಳು ಹೆಚ್ಚುತ್ತಿವೆ. ಮಾನವ ಕಳ್ಳ ಸಾಗಾಣಿಕೆಯೂ ನಡೆಯುತ್ತಿದೆ. ಪ್ರತಿಬಾರಿ ಅಧಿಕಾರಿಗಳು ದಾಳಿ ನಡೆಸಿದಾಗಲೂ ಅಮಾಯಕ ಹಾಗೂ ಬಡ ಮಕ್ಕಳು ಪತ್ತೆಯಾಗುತ್ತಿದ್ದಾರೆ. ಮಕ್ಕಳನ್ನು ಬಾಲ ಕಾರ್ಮಿಕ ಪದ್ಧತಿಗೆ ತಳ್ಳಲಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ರಾಜಕಾರಣಿಗಳು ಚುನಾವಣೆ ವೇಳೆ ತಂತ್ರ ನಡೆಸುತ್ತಾರೆ. ಮತಕ್ಕಾಗಿ ದಲಿತರ ಮನೆಯಲ್ಲೂ ಊಟ ಮಾಡುತ್ತಿದ್ದಾರೆ. ಅವರ ಹಿಂದಿನ ಮರ್ಮವನ್ನು ದೇಶದ ಜನರು ಅರ್ಥೈಸಿಕೊಳ್ಳಬೇಕು’ ಎಂದು ಮನವಿ ಮಾಡಿದರು.

ದುರಂತವೆಂದರೆ ಮಕ್ಕಳನ್ನು ಅಶ್ಲೀಲ ಚಿತ್ರಗಳ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುತ್ತಿದೆ. ಇದರ ವಿರುದ್ಧ ಯುವ ಸಮೂಹ ಸಂಘಟಿತವಾಗಿ ಹೋರಾಟ ನಡೆಸಬೇಕು. ಎಲ್ಲರೂ ಮಕ್ಕಳ ಕಲ್ಯಾಣಕ್ಕೆ ಕೆಲಸ ಮಾಡಬೇಕು.
- ಕೈಲಾಶ್‌ ಸತ್ಯಾರ್ಥಿ, ಮಕ್ಕಳ ಹಕ್ಕುಗಳ ಹೋರಾಟಗಾರ

‘ರಾಷ್ಟ್ರದಲ್ಲಿ ಹಿಂದುಳಿದ ಸಮಾಜದ ಸ್ಥಿತಿ ಶೋಚನೀಯವಾಗಿದೆ. ಅವರಿಗೆ ಸೌಲಭ್ಯಗಳೂ ತಲುಪುತ್ತಿಲ್ಲ. ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆ ತರುವ ಕೆಲಸಗಳು ನಡೆಯಬೇಕು’ ಎಂದು ಹೇಳಿದರು.

ಗೋಕುಲ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಆರ್‌. ಜಯರಾಮ್‌ ಮಾತನಾಡಿ, ‘ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಉತ್ತಮವಾಗಿದೆ. ಕೊರೊನಾ ಸಾಂಕ್ರಾಮಿಕ ಕಾಯಿಲೆ ನಿಯಂತ್ರಣಕ್ಕೆ ಭಾರತದಲ್ಲೇ ಲಸಿಕೆ ಕಂಡು ಹಿಡಿಯಲಾಯಿತು. ಪ್ರತಿಯೊಬ್ಬರಿಗೂ ದೇಶದ ಮೇಲೆ ನಂಬಿಕೆ, ವಿಶ್ವಾಸ ಇರಬೇಕು’ ಎಂದು ಹೇಳಿದರು.

ಬೆಂಗಳೂರಿನ ರಾಮಯ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಸೋಮವಾರ ನಡೆದ ಡಾ.ಎಂ.ಎಸ್‌. ರಾಮಯ್ಯ ಸ್ಮಾರಕ ಉಪನ್ಯಾಸದಲ್ಲಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಬೆಂಗಳೂರಿನ ರಾಮಯ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಸೋಮವಾರ ನಡೆದ ಡಾ.ಎಂ.ಎಸ್‌. ರಾಮಯ್ಯ ಸ್ಮಾರಕ ಉಪನ್ಯಾಸದಲ್ಲಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಸಂಸ್ಥೆಯ ಉಪಾಧ್ಯಕ್ಷ ಎಂ.ಆರ್.ಸೀತಾರಾಂ, ಕಾರ್ಯದರ್ಶಿ ಎಂ.ಆರ್.ರಾಮಯ್ಯ, ಮುಖ್ಯ ಕಾರ್ಯನಿರ್ವಾಹಕ ಬಿ.ಎಸ್.ರಾಮಪ್ರಸಾದ್, ಆರ್‌ಐಟಿ ಪ್ರಾಂಶುಪಾಲರಾದ ಡಾ.ಎನ್.ಆರ್.ವಿ. ನಾಯ್ಡು ಇದ್ದರು.

Quote - ಭಾರತವು ಜಾಗತಿಕ ಮಟ್ಟದಲ್ಲಿ ಜನಪ್ರಿಯವಾಗಿದೆ. ರಾಷ್ಟ್ರದ ಮೇಲೆ ಪ್ರತಿಯೊಬ್ಬರೂ ಪ್ರೀತಿ ಬೆಳೆಸಿಕೊಳ್ಳಬೇಕು. ಆಗ ಮತ್ತಷ್ಟು ಶ್ರೇಷ್ಠವಾಗಲಿದೆ.
- ಎಂ.ಆರ್‌.ಜಯರಾಮ್‌, ಅಧ್ಯಕ್ಷ ಗೋಕುಲ ಎಜುಕೇಷನ್‌ ಫೌಂಡೇಷನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT