ಮಂಗಳವಾರ, ನವೆಂಬರ್ 12, 2019
26 °C
ಪಡಿತರ ಚೀಟಿ, ವೃದ್ಧಾಪ್ಯ ವೇತನ ಕೊಡಿಸುವ ಆಮಿಷ l ₹ 30 ಲಕ್ಷ ಮೌಲ್ಯದ ಚಿನ್ನಾಭರಣ ವಶ

ವೃದ್ಧೆಯರಿಗೆ ವಂಚನೆ: ‘ಚೌಟ್ರಿ ಮಂಜ’ ಬಂಧನ

Published:
Updated:
Prajavani

ಬೆಂಗಳೂರು: ಒಂಟಿ ವೃದ್ಧೆಯರಿಗೆ ರೇಷನ್‌ ಕಾರ್ಡ್‌, ವೃದ್ಧಾಪ್ಯ ವೇತನ ಮಾಡಿ ಕೊಡುವುದಾಗಿ ನಂಬಿಸಿ, ಅವರ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ ಕುಖ್ಯಾತ ಕಳ್ಳ ‘ಚೌಟ್ರಿ ಮಂಜ’ ಎಂಬಾತನನ್ನು ಬಂಧಿಸಿರುವ ಬಾಗಲಗುಂಟೆ ಠಾಣೆ ಪೊಲೀಸರು, ಆರೋಪಿಯಿಂದ ₹ 30 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಹುರುಳಿ ಚಿಕ್ಕನಹಳ್ಳಿ ನಿವಾಸಿಯಾದ ಮಂಜೇಶ್‌ (36) ಅಲಿಯಾಸ್‌ ಚೌಟ್ರಿ ಮಂಜ ಬಂಧಿತ ಆರೋಪಿ. ಕಳವು ಮಾಡಿದ್ದ 880 ಗ್ರಾಂ ಚಿನ್ನಾಭರಣವನ್ನು ಆತನಿಂದ ವಶಪಡಿಸಿಕೊಳ್ಳಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದರು.

ಚಿನ್ನಾಭರಣ ಕಳವು ಪ್ರಕರಣದಲ್ಲಿ ಸಿಕ್ಕಿಬಿದ್ದು ಈ ಹಿಂದೆ ಮೈಸೂರಿನಲ್ಲಿ ಜೈಲು ಸೇರಿದ್ದ ಮಂಜೇಶ್‌, ಕಳೆದ ಫೆಬ್ರುವರಿಯಲ್ಲಿ ಬಿಡುಗಡೆಯಾಗಿ ಮತ್ತೆ ಕಳ್ಳತನಕ್ಕೆ ಇಳಿದಿದ್ದ. ನಗರಕ್ಕೆ ಬಂದಿದ್ದ ಆರೋಪಿ ಸ್ಕೂಟರ್‌ನಲ್ಲಿ ಓಡಾಡುತ್ತ ಒಂಟಿ ವೃದ್ಧೆಯರನ್ನು ಪರಿಚಯಿಸಿಕೊಂಡು, ಅವರಿಗೆ ರೇಷನ್‌ ಕಾರ್ಡ್, ವೃದ್ಧಾಪ್ಯ ವೇತನ ಮಾಡಿಸಿಕೊಡುವುದಾಗಿ ನಂಬಿಸುತ್ತಿದ್ದ.

ಪರಿಚಿತರಾದ ವೃದ್ಧೆಯರ ಮನೆಗೆ ಹೋಗುತ್ತಿದ್ದ ಆರೋಪಿ, ‘ಚಿನ್ನಾಭರಣ ಧರಿಸಿದ್ದರೆ ಉಚಿತವಾಗಿ ರೇಷನ್‌ ಕಾರ್ಡ್‌ ಕೊಡುವುದಿಲ್ಲ’ ಎಂದು ಅವುಗಳನ್ನು ಬಿಚ್ಚಿಸಿ ಅವರ ಮನೆಯಲ್ಲೇ ಇಡಿಸುತ್ತಿದ್ದ.

ಬಳಿಕ ಮನೆಗೆ ಬೀಗ ಹಾಕಿಸದೆ, ರೇಷನ್‌ ಕಾರ್ಡ್‌ ಮಾಡಿಸುವ ಸ್ಥಳಕ್ಕೆಂದು ತನ್ನ ಸ್ಕೂಟರ್‌ನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದ. ಸ್ವಲ್ಪ ದೂರ ಹೋದ ನಂತರ, ‘ರೇಷನ್‌ ಕಾರ್ಡ್‌ ಮಾಡುವ ಜಾಗದಲ್ಲಿ ತುಂಬಾ ಜನ ಜನ ಇದ್ದಾರೆ. ಇಲ್ಲಿಯೇ ಕುಳಿತಿರಿ’ ಎಂದು ಅವರಿಗೆ ಹೇಳಿ, ಮರಳಿ ಆ ವೃದ್ಧೆಯರ ಮನೆಗೆ ಬಂದು ಚಿನ್ನಾಭರಣಗಳನ್ನು ದೋಚಿ ಪರಾರಿಯಾಗುತ್ತಿದ್ದ.

ರೇಷನ್‌ ಕಾರ್ಡ್‌ ಮಾಡಿ ಕೊಡಿಸುವ ಭರವಸೆ ನೀಡಿ ಸೆ. 14ರಂದು ಬೆಳಿಗ್ಗೆ ಮಲ್ಲಸಂದ್ರ ಪೈಪ್‌ಲೇನ್‌ ನಿವಾಸಿ ಚನ್ನಮ್ಮ (72) ಅವರನ್ನು ಆರೋಪಿ ನಂಬಿಸಿದ್ದ. ಆಭರಣಗಳನ್ನು ದೋಚಿದ್ದ. ಈ ಕುರಿತು ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

‘ಮಂಜೇಶನ ಬಂಧನದಿಂದ ಆರ್‌.ಟಿ. ನಗರ, ಅಮೃತಹಳ್ಳಿ, ಸೋಲದೇವನಹಳ್ಳಿ, ಬಾಗಲಗುಂಟೆ, ಹಾಸನ ಜಿಲ್ಲೆಯ ಬೇಲೂರು, ಹೊಳೆನರಸೀಪುರ, ರಾಮನಗರ ಗ್ರಾಮೀಣ, ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು ಮತ್ತಿತರ ಕಡೆಗಳಲ್ಲಿ ನಡೆದಿದ್ದ ಐದು ಮನೆ ಕಳವು ಮತ್ತು ಒಂಬತ್ತು ವಂಚನೆ ಪ್ರಕರಣಗಳು ಪತ್ತೆಯಾಗಿವೆ’ ಎಂದೂ ಪೊಲೀಸರು ಹೇಳಿದರು.

ಮದ್ಯ, ವೇಶ್ಯೆಯರ ಸಂಗಕ್ಕಾಗಿ ಕಳುವು

‘ತನ್ನ ಹದಿನೇಳರ ಹರೆಯದಲ್ಲೇ ಕಳ್ಳತನಕ್ಕೆ ಇಳಿದಿದ್ದ ಮಂಜೇಶ, ಮೊದಲಿಗೆ ಮದುವೆ ಕಾರ್ಯಕ್ರಮ ನಡೆಯುವ ಕಲ್ಯಾಣ ಮಂಟಪಗಳಿಗೆ ವಧು–ವರನ ಸಂಬಂಧಿಕನಂತೆ ತೆರಳಿ ಚಿನ್ನಾಭರಣ ಕಳವು ಮಾಡುತ್ತಿದ್ದ. ಆ ಕಾರಣಕ್ಕೆ ಆತನಿಗೆ ‘ಚೌಟ್ರಿ ಮಂಜ’ ಎಂಬ ಹೆಸರು ಬಂದಿತ್ತು.

ಅವಿವಾಹಿತನಾಗಿರುವ ಆರೋಪಿ, ಮೋಜು, ಕುಡಿತ, ವೇಶ್ಯೆಯರ ಸಹವಾಸಕ್ಕಾಗಿ ಹಣ ಹೊಂದಿಸಲು ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ.

ಮೈಸೂರು, ಮಂಗಳೂರಿನಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದು, ಜೈಲುವಾಸ ಅನುಭವಿಸಿದ್ದರೂ ಮತ್ತೆ ಹಳೆ ಚಾಳಿ ಮುಂದುವರಿಸಿದ್ದ. ಈತ 100ಕ್ಕೂ ಹೆಚ್ಚು ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ’ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್‌ ತಿಳಿಸಿದರು.

ಪ್ರತಿಕ್ರಿಯಿಸಿ (+)