ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಸಂಚಾರಕ್ಕೆ ಮುಕ್ತಗೊಳ್ಳದ ಕಾಮರಾಜ್‌ ರಸ್ತೆ

Published 3 ಜೂನ್ 2024, 16:11 IST
Last Updated 3 ಜೂನ್ 2024, 16:11 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ಗುಲಾಬಿ ಮಾರ್ಗದ ಕಾಮಗಾರಿ ಸಂಬಂಧ ಐದು ವರ್ಷಗಳ ಹಿಂದೆ ಮುಚ್ಚಲಾಗಿದ್ದ ಕಾಮರಾಜ್‌ ರಸ್ತೆ ಸಂಚಾರಕ್ಕೆ ತೆರೆಯಲು ಇನ್ನೂ ಕಾಲಕೂಡಿ ಬಂದಿಲ್ಲ. ಸಂಚಾರಕ್ಕೆ ಮುಕ್ತಗೊಳಿಸಲು ಪದೇ ಪದೇ ಗಡುವು ನಿಗದಿ ಮಾಡಿ, ನಂತರ ಮುಂದೂಡುವುದೇ ನಡೆಯುತ್ತಿದೆ. 

ನಾಗವಾರ–ಕಾಳೇನ ಅಗ್ರಹಾರ ಮೆಟ್ರೊ ಮಾರ್ಗದಲ್ಲಿ ಕಾವೇರಿ ಎಂಪೊರಿಯಂ ಜಂಕ್ಷನ್‌ನಿಂದ ಕಬ್ಬನ್ ರಸ್ತೆ ಜಂಕ್ಷನ್‌ವರೆಗೆ ಅಂತರ್‌ಬದಲಾವಣೆಯ (ಇಂಟರ್‌ಚೇಂಜ್‌) ಎಂ.ಜಿ. ರಸ್ತೆ ಮೆಟ್ರೊ ಭೂಗತ ನಿಲ್ದಾಣ ನಿರ್ಮಿಸಲು ಕಾಮರಾಜ್‌ ರಸ್ತೆಯನ್ನು 2019ರಲ್ಲಿ ಬಿಎಂಆರ್‌ಸಿಎಲ್‌ ವತಿಯಿಂದ ಮುಚ್ಚಲಾಗಿತ್ತು.

ಭೂಮಿ ಹಸ್ತಾಂತರ, ಮರಗಳ ತೆರವು ಪ್ರಕ್ರಿಯೆ ವಿಳಂಬ, ಕೋವಿಡ್‌ ಬಿಕ್ಕಟ್ಟು ಸೇರಿ ವಿವಿಧ ಕಾರಣಗಳಿಂದ ಕಾಮಗಾರಿ ತುಂಬಾ ನಿಧಾನವಾಗಿ ಸಾಗಿತ್ತು. ಬ್ರಿಗೇಡ್ ರಸ್ತೆ, ಕಮರ್ಷಿಯಲ್ ಸ್ಟ್ರೀಟ್ ಮತ್ತು ಇತರ ಸ್ಥಳಗಳನ್ನು ತಲುಪಲು ವಾಹನ ಸವಾರರು ಸುತ್ತು ಹಾಕಿಕೊಂಡು ಬರುವಂತಾಗಿತ್ತು.

2024ರ ಆರಂಭದಲ್ಲಿ ಈ ರಸ್ತೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ವರ್ಷದ ಹಿಂದೆ ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದರು. ಆದರೆ ಕಾಮಗಾರಿ ಮುಗಿಯದ ಕಾರಣ ಸಂಚಾರ ಆರಂಭಗೊಳ್ಳಲಿಲ್ಲ. ‘ಈಗ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದೆ. ಕಾಮರಾಜ್‌ ರಸ್ತೆಯ ಒಂದು ಬದಿಯಿಂದ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ಯಾವುದೇ ಸಮಸ್ಯೆ ಇಲ್ಲ. ಏಪ್ರಿಲ್‌ ಅಂತ್ಯದ ಒಳಗೆ ರಸ್ತೆಯ ಒಂದು ಬದಿಯಿಂದ ವಾಹನ ಸಂಚಾರ ಆರಂಭವಾಗಲಿದೆ. ಯಂತ್ರೋಪಕರಣಗಳ ಸಾಗಾಟಕ್ಕಾಗಿ ಇನ್ನೊಂದು ಬದಿಯ ರಸ್ತೆ ಬಳಕೆಯಾಗಲಿದೆ’ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಆನಂತರ ಮಾಹಿತಿ ನೀಡಿದ್ದರು. ಈಗ ಏಪ್ರಿಲ್‌ ಬದಲು ಮೇ ತಿಂಗಳಿಗೆ ಮುಂದೂಡಲಾಗಿತ್ತು. ಮೇ ತಿಂಗಳಲ್ಲೂ ರಸ್ತೆ ಸಂಚಾರಕ್ಕೆ ತೆರೆದುಕೊಂಡಿಲ್ಲ. 

‘ಕಾಮಗಾರಿ ಮುಕ್ತಾಯಗೊಂಡಿದ್ದು, ಒಂದು ಬದಿಯಲ್ಲಿ ವಾಹನ ಸಂಚಾರ ಮಾಡಲು ಎಲ್ಲ ತಯಾರಿಗಳಾಗಿವೆ. ಜೂನ್‌ ಅಂತ್ಯದ ಒಳಗೆ ರಸ್ತೆ ಸಂಚಾರ ಆರಂಭಗೊಳ್ಳಲಿದೆ’ ಎಂದು ಬಿಎಂಆರ್‌ಸಿಎಲ್‌ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT