ಬೆಂಗಳೂರು: ನಮ್ಮ ಮೆಟ್ರೊ ಗುಲಾಬಿ ಮಾರ್ಗದ ಕಾಮಗಾರಿಗಾಗಿ ಮುಚ್ಚಿದ್ದ ಕಾಮರಾಜ್ ರಸ್ತೆ ಆರೂವರೆ ವರ್ಷಗಳ ಬಳಿಕ ಪೂರ್ಣ ಪ್ರಮಾಣದಲ್ಲಿ ಸಂಚಾರಕ್ಕೆ ತೆರೆದುಕೊಳ್ಳಲು ಸಿದ್ಧಗೊಂಡಿದೆ. 2026ರ ಜನವರಿ ಮೊದಲ ವಾರದಲ್ಲಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಲಿದೆ.

ಎಂ.ಜಿ. ರಸ್ತೆಯಿಂದ ಕಬ್ಬನ್ ರಸ್ತೆ ಜಂಕ್ಷನ್ ಕಡೆಗೆ ಸಾಗುವ ಒಂದು ಬದಿ ರಸ್ತೆಯಲ್ಲಿ ವಾಹನ ಸಂಚಾರ 2024ರ ಜೂನ್ನಲ್ಲಿ ಆರಂಭವಾಗಿತ್ತು. ಮೆಟ್ರೊ ನಿಲ್ದಾಣ ಮತ್ತು ಸುರಂಗ ಮಾರ್ಗದ ಕಾಮಗಾರಿ ನಡೆಸಿರುವ ಯಂತ್ರಗಳು ಇನ್ನಿತರ ಸಾಮಗ್ರಿಗಳನ್ನು ಸಾಗಾಟ ಮಾಡಲು ಆರು ತಿಂಗಳು ಬೇಕಿದ್ದು, ಅದಕ್ಕಾಗಿ ಕಬ್ಬನ್ ರಸ್ತೆ ಜಂಕ್ಷನ್ ಕಡೆಯಿಂದ ಎಂ.ಜಿ. ರಸ್ತೆ ಕಡೆಗೆ ಸಾಗುವ ರಸ್ತೆಯನ್ನು ವಾಹನ ಸಂಚಾರಕ್ಕೆ 2024ರ ಡಿಸೆಂಬರ್ ನಂತರ ತೆರೆಯಲಾಗುವುದು ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದರು. ಇದೀಗ ಒಂದು ವರ್ಷ ತಡವಾಗಿ ತೆರೆದುಕೊಳ್ಳುತ್ತಿದೆ.

ನಾಗವಾರ–ಕಾಳೇನ ಅಗ್ರಹಾರ ಮೆಟ್ರೊ ಮಾರ್ಗದಲ್ಲಿ ಕಾವೇರಿ ಎಂಪೋರಿಯಂ ಜಂಕ್ಷನ್ನಿಂದ ಕಬ್ಬನ್ ರಸ್ತೆ ಜಂಕ್ಷನ್ವರೆಗೆ ಅಂತರ್ಬದಲಾವಣೆಯ (ಇಂಟರ್ಚೇಂಜ್) ಎಂ.ಜಿ. ರಸ್ತೆ ಮೆಟ್ರೊ ಭೂಗತ ನಿಲ್ದಾಣ ನಿರ್ಮಿಸಲು ಕಾಮರಾಜ್ ರಸ್ತೆಯನ್ನು 2019ರಲ್ಲಿ ಬಿಎಂಆರ್ಸಿಎಲ್ ಮುಚ್ಚಿತ್ತು. ಆದರೆ, ಜಮೀನು ಹಸ್ತಾಂತರ, ಮರಗಳ ತೆರವು ಪ್ರಕ್ರಿಯೆ ವಿಳಂಬವಾಗಿದ್ದರಿಂದ ಕಾಮಗಾರಿ ವೇಗ ಪಡೆದುಕೊಂಡಿರಲಿಲ್ಲ. ಈ ಮಧ್ಯೆ ಕೋವಿಡ್ ಬಿಕ್ಕಟ್ಟು ಕಾಡಿದ್ದರಿಂದ ಕಾಮಗಾರಿ ಇನ್ನಷ್ಟು ನಿಧಾನವಾಗಿತ್ತು. 2022ರ ನಂತರ ಕಾಮಗಾರಿಗೆ ವೇಗ ನೀಡಲಾಗಿತ್ತು.

ಕಾಮರಾಜ್ ರಸ್ತೆ ಮುಚ್ಚಿದ್ದರಿಂದ, ಈ ರಸ್ತೆ ಮೂಲಕ ಬ್ರಿಗೇಡ್ ರಸ್ತೆ, ಕಮರ್ಷಿಯಲ್ ಸ್ಟ್ರೀಟ್ ಮತ್ತು ಇತರ ಸ್ಥಳಗಳನ್ನು ತಲುಪಲು ವಾಹನ ಸವಾರರು ಸುತ್ತು ಹಾಕಿಕೊಂಡು ಬರುವಂತಾಗಿತ್ತು. 2024ರಲ್ಲಿ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದ್ದಾಗ ಕಾಮರಾಜ್ ರಸ್ತೆಯ ಒಂದು ಬದಿಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.

ಎಂ.ಜಿ. ರಸ್ತೆಯ ಮೆಯೋಹಾಲ್ ಜಂಕ್ಷನ್ ಕಡೆಯಿಂದ ಬರುವ ವಾಹನಗಳು ಕಾವೇರಿ ಎಂಪೋರಿಯಂ ಜಂಕ್ಷನ್ನಲ್ಲಿ ಬಲ ತಿರುವು ಪಡೆದು ಕಾಮರಾಜ್ ರಸ್ತೆಯಲ್ಲಿ ಸಂಚರಿಸಿ ಕಬ್ಬನ್ ರಸ್ತೆ ಜಂಕ್ಷನ್ನಲ್ಲಿ ನೇರವಾಗಿ ಸಾಗಿ ಕಮರ್ಷಿಯಲ್ ಸ್ಟ್ರೀಟ್ ಕಡೆಗೆ ತೆರಳುವವರಿಗೆ ಅನುಕೂಲವಾಯಿತು. ಕಬ್ಬನ್ ರಸ್ತೆಯ ಜಂಕ್ಷನ್ನಲ್ಲಿ ಎಡ ತಿರುವು ಪಡೆದು ಬಿಆರ್ವಿ ಕಡೆಗೆ ಹಾಗೂ ಬಲ ತಿರುವು ಪಡೆದು ಮಣಿಪಾಲ್ ಸೆಂಟರ್ ಕಡೆಗೂ ವಾಹನ ಸಂಚಾರ ಸುಗಮವಾಯಿತು. ಆದರೆ ಆ ಕಡೆಯಿಂದ ಎಂ.ಜಿ. ರಸ್ತೆ, ಚರ್ಚ್ ಸ್ಟ್ರೀಟ್ ಕಡೆಗೆ ಬರುವವರು ಎಂದಿನಂತೆ ಸುತ್ತು ಹಾಕಿ ಬರುವುದು ಮುಂದುವರಿದಿತ್ತು.

ನಮ್ಮ ಮೆಟ್ರೊ ಗುಲಾಬಿ ಮಾರ್ಗ ಮತ್ತು ನೇರಳೆ ಮಾರ್ಗ ಸಂಪರ್ಕಿಸುವ ಇಂಟರ್ಚೇಂಜ್ ನಿಲ್ದಾಣದ ಸಿವಿಲ್ ಕಾಮಗಾರಿ ಪೂರ್ಣಗೊಂಡಿದೆ. ಕಾಮರಾಜ್ ರಸ್ತೆಯಲ್ಲಿ ಈಗಾಗಲೇ ಒಂದು ಪಥದಲ್ಲಿ ವಾಹನ ಸಂಚಾರ ಇದೆ. ಇನ್ನೊಂದು ಪಥವನ್ನು ವಾಹನ ಸಂಚಾರಕ್ಕೆ 15 ದಿನಗಳಲ್ಲಿ ಬಿಟ್ಟುಕೊಡಲಾಗುವುದು ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ನಾಲ್ಕನೇ ಇಂಟರ್ಚೇಂಜ್

ಎಂ.ಜಿ. ರಸ್ತೆಯಲ್ಲಿ ನಿರ್ಮಾಣ ಗೊಳ್ಳುತ್ತಿರುವ ಇಂಟರ್ಚೇಂಜ್ ನಿಲ್ದಾಣವು ನಮ್ಮ ಮೆಟ್ರೊ ಜಾಲದ ನಾಲ್ಕನೇ ಇಂಟರ್ಚೇಂಜ್ ನಿಲ್ದಾಣವಾಗಲಿದೆ.

ನೇರಳೆ ಮತ್ತು ಹಸಿರು ಮಾರ್ಗಗಳು ಸಂಧಿಸುವ ಮೆಜೆಸ್ಟಿಕ್ ಇಂಟರ್ಚೇಂಜ್ ನಿಲ್ದಾಣ ಒಂದೇ ಸುಮಾರು 10 ವರ್ಷಗಳಿಂದ ಇತ್ತು. ಕಳೆದ ಆಗಸ್ಟ್ನಲ್ಲಿ ಹಳದಿ ಮಾರ್ಗದಲ್ಲಿ ಮೆಟ್ರೊ ಸಂಚಾರ ಆರಂಭಗೊಂಡಾಗ ಹಳದಿ ಮಾರ್ಗವು ಹಸಿರು ಮಾರ್ಗವನ್ನು ಸಂಪರ್ಕಿಸುವ ಆರ್.ವಿ. ರಸ್ತೆಯ ಇಂಟರ್ಚೇಂಜ್ ನಿಲ್ದಾಣವು ಎರಡನೇಯದ್ದಾಯಿತು. ಗುಲಾಬಿ ಮಾರ್ಗದಲ್ಲಿ ಎತ್ತರಿಸಿದ ಮಾರ್ಗದಲ್ಲಿ 2026ರಲ್ಲಿ ಮೆಟ್ರೊ ಸಂಚಾರ ಆರಂಭಗೊಳ್ಳಲಿದೆ.

ಹಳದಿ ಮತ್ತು ಗುಲಾಬಿ ಮಾರ್ಗವನ್ನು ಸಂಪರ್ಕಿಸುವ ಜಯದೇವ ಆಸ್ಪತ್ರೆ ನಿಲ್ದಾಣವು ಆಗ ಮೂರನೇ ಇಂಟರ್ಚೇಂಜ್ ಆಗಿ ಕಾರ್ಯನಿರ್ವಹಿಸಲಿದೆ. ಗುಲಾಬಿ ಮಾರ್ಗದ ಸುರಂಗ ಮಾರ್ಗದಲ್ಲಿ 2027ರಲ್ಲಿ ಸಂಚಾರ ಆರಂಭಗೊಳ್ಳಲಿದ್ದು, ಎಂ.ಜಿ. ರಸ್ತೆ ಆಗ ನಾಲ್ಕನೇ ಇಂಟರ್ಚೇಂಜ್ ಆಗಲಿದೆ.

50 ಮೀಟರ್ ಅಂತರ

ಕಾಮರಾಜ್ ರಸ್ತೆ ಮೆಟ್ರೊ ನಿಲ್ದಾಣವು ನಾಲ್ಕು ಪ್ರವೇಶ–ನಿರ್ಗಮನ ದ್ವಾರಗಳನ್ನು ಹೊಂದಿರುತ್ತದೆ. ಈಗಾಗಲೇ ನೇರಳೆ ಮಾರ್ಗದಲ್ಲಿ ಇರುವ ಎಂ.ಜಿ. ರಸ್ತೆಯ ಮೆಟ್ರೊ ನಿಲ್ದಾಣಕ್ಕೆ ಹೊಸ ನಿಲ್ದಾಣದ ಒಂದು ದ್ವಾರ ಸಂಪರ್ಕಿಸಲಿದೆ.

ಎಂ.ಜಿ. ರಸ್ತೆಯಲ್ಲಿ ನೇರಳೆ ಮಾರ್ಗದ ಮೆಟ್ರೊ ನಿಲ್ದಾಣಕ್ಕೂ ಗುಲಾಬಿ ಮಾರ್ಗದ ನಿಲ್ದಾಣಕ್ಕೂ 50 ಮೀಟರ್ ಅಂತರ ಇದೆ. ಆದರೂ ಪ್ರಯಾಣಿಕರು ಮಾರ್ಗ ಬದಲಾಯಿಸಲು ಸುಲಭವಾಗುವಂತೆ ಯೋಜನೆ ರೂಪಿಸಲಾಗಿದೆ. ನೇರಳೆ ಮತ್ತು ಗುಲಾಬಿ ನಿಲ್ದಾಣಗಳ ನಡುವಿನ ಓಡಾಟಕ್ಕೆ ಪ್ರಯಾಣಿಕರು ಗೇಟ್ ದಾಟಿ ಹೋಗದಂತೆ ಸಂಯೋಜನೆ ಮಾಡಲಾಗಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.