ಆನ್‌ಲೈನ್ ತರಗತಿ: ಸದ್ಯ ನಿರಾತಂಕ

ಬೆಂಗಳೂರು: ಎಲ್ಲ ಮಕ್ಕಳಿಗೂ ಆನ್‌ಲೈನ್ ತರಗತಿಯನ್ನು ನಿಗದಿಯಂತೆ ನಡೆಸಲು ಖಾಸಗಿ ಶಾಲೆಗಳು ಸಮ್ಮತಿ ನೀಡಿವೆ. ಕೋವಿಡ್ ಬಿಕ್ಕಟ್ಟಿನಿಂದ ಎದುರಿಸುತ್ತಿರುವ ಸಮಸ್ಯೆಗಳನ್ನು ಸರ್ಕಾರದ ಮುಂದಿಟ್ಟ ಖಾಸಗಿ ಶಾಲಾ ಆಡಳಿತ ಮಂಡಳಿಗಳು, ಮುಂದಿನ 15 ದಿನಗಳಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಹೇಳಿವೆ.
ಶುಲ್ಕ ಪಾವತಿಸದ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ನಡೆಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಪದಾಧಿಕಾರಿಗಳೊಂದಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ. ಅನ್ಬುಕುಮಾರ್ ಶುಕ್ರವಾರ ಸಭೆ ನಡೆಸಿದರು.
‘ಖಾಸಗಿ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳ ಸಂಪೂರ್ಣ ಅರಿವು ಸರ್ಕಾರಕ್ಕೆ ಇದೆ. ಸಭೆಯ ಮಾತುಕತೆಯ ವಿವರವನ್ನು ಸಚಿವರ ಮುಂದೆ ಇಡಲಾಗುವುದು’ ಎಂದು ಆಯುಕ್ತರು ಭರವಸೆ ನೀಡಿದರು ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.
‘ಖಾಸಗಿ ಅನುದಾನರಹಿತ ಸಂಸ್ಥೆಗಳ ಬೋಧಕ–ಬೋಧಕೇತರ ಸಿಬ್ಬಂದಿ ಸಂಬಳವಿಲ್ಲದೆ, ಕೆಲಸವಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ, ಶಾಲಾ ಪ್ರವೇಶ ಶುಲ್ಕದ ಒಂದು ಕಂತನ್ನು ಮಾತ್ರ ಪಾವತಿಸಿ ಮತ್ತು ಒಂದು ಕಂತನ್ನೂ ಕಟ್ಟದಿರುವ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸುವುದಿಲ್ಲ ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ ಎಂಬುದಾಗಿ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದರಿಂದ ಬಹಳಷ್ಟು ಪೋಷಕರು ಶುಲ್ಕ ಪಾವತಿಸುತ್ತಿಲ್ಲ’ ಎಂದು ಖಾಸಗಿ ಶಾಲೆಗಳ ಪದಾಧಿಕಾರಿಗಳು ಅಳಲು ತೋಡಿಕೊಂಡರು.
‘ಶುಲ್ಕ ಪಾವತಿಸುವಂತೆ ನ್ಯಾಯಾಲಯವೂ ಆದೇಶ ನೀಡಿದೆ. ಆದರೂ ಬಹುತೇಕ ಪೋಷಕರು ಇದನ್ನು ಪಾಲಿಸುತ್ತಿಲ್ಲ. 2019-20ರ ಸಾಲಿನ ₹137.5 ಕೋಟಿ ಹಾಗೂ 2020–21ನೇ ಸಾಲಿನಲ್ಲಿ ಹೆಚ್ಚುವರಿಯಾಗಿ ₹600 ಕೋಟಿ ಆರ್‌ಟಿಇ ಬಾಕಿ ಸರ್ಕಾರದಿಂದ ಬರಬೇಕು. ಈ ಹಣವೂ ಬಿಡುಗಡೆಯಾಗದೆ ಸಮಸ್ಯೆಯಾಗಿದೆ’ ಎಂದರು.
‘ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಆಹಾರ ಕಿಟ್ ಹಾಗೂ ಗೌರವಧನ ನೀಡಬೇಕು ಮತ್ತು ವಿಶೇಷ ಪ್ಯಾಕೇಜ್ ಘೋಷಿಸಬೇಕು’ ಎಂದು ಮನವಿ ಮಾಡಿದರು.
‘ಒಂದು ಕಂತು ಪಾವತಿಸದ ಮಕ್ಕಳನ್ನೂ ಅನುತ್ತೀರ್ಣಗೊಳಿಸಬಾರದು ಎಂದು ಸಚಿವರು ಹೇಳಿಲ್ಲ. ಮಾಧ್ಯಮಗಳಲ್ಲಿ ಈ ಬಗ್ಗೆ ಬಂದಿರುವ ವರದಿಯಲ್ಲಿ ಸತ್ಯಾಂಶವಿಲ್ಲ ಎಂದು ಆಯುಕ್ತರು ಸ್ಪಷ್ಟಪಡಿಸಿದರು. ಎಲ್ಲ ಸಮಸ್ಯೆಗಳನ್ನು ಆಲಿಸಿ, ಸಚಿವರ ಮುಂದೆ ಪ್ರಸ್ತಾಪಿಸುವುದಾಗಿ ಹೇಳಿದರು’ ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಹದಿನೈದು ದಿನಗಳವರೆಗೆ ಕಾದು ನೋಡುತ್ತೇವೆ. ಭರವಸೆ ಈಡೇರದಿದ್ದರೆ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.