ಗುರುವಾರ , ಜೂನ್ 30, 2022
27 °C
ಬಿಎಂಟಿಸಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಸೂಚನೆ

ಬಸ್ ನಿಲ್ದಾಣದಲ್ಲಿ ಕನ್ನಡದ ಕವಿ-,ಕಾವ್ಯ ಪರಿಚಯಿಸಿ: ಟಿ.ಎಸ್. ನಾಗಾಭರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಬಸ್ ನಿಲ್ದಾಣಗಳಲ್ಲಿ ಕನ್ನಡದ ಕವಿಗಳು ಮತ್ತು ಕಾವ್ಯ ಗಳನ್ನು ಪರಿಚಯಿಸಬೇಕು. ಸಾರಿಗೆ ವಾಹನಗಳಲ್ಲಿ ಅಚ್ಚ ಕನ್ನಡದಲ್ಲಿ ಮಾತನಾಡುವ ನಿರ್ವಾಹಕರನ್ನು ಗುರುತಿಸಿ, ಅಭಿನಂದಿಸಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅವರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (ಬಿಎಂಟಿಸಿ) ಸೂಚಿಸಿದರು. ‌

ಪ್ರಾಧಿಕಾರ ಹಮ್ಮಿಕೊಂಡಿದ್ದ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬಿಎಂಟಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದ ನಾಗಾಭರಣ ಅವರು, ‘ಚಾಲಕರು ಮತ್ತು ನಿರ್ವಾಹಕರ ಎದೆಬಿಲ್ಲೆ ಮತ್ತು ಭುಜಬಿಲ್ಲೆ ಕನ್ನಡದಲ್ಲಿರಬೇಕು. ಸೇವಾ ಸಿಂಧು ಕೇಂದ್ರಗಳಲ್ಲಿ ಅಂಧರು ಮತ್ತು ಅಂಗವಿಕಲರ ಪಾಸ್‌ಗಳಿಗೆ ನೀಡುವ ಅರ್ಜಿ ನಮೂನೆಗಳು ಕನ್ನಡದಲ್ಲಿರುವಂತೆ ಕ್ರಮವಹಿಸಬೇಕು. ಬಸ್‌ಗಳು ಸಂಚರಿಸುವಾಗ ಡಿಜಿಟಲ್ ಫಲಕಗಳಲ್ಲಿ ಕನ್ನಡಪರ ಘೋಷಣೆ ಗಳನ್ನು ಹಾಕಬೇಕು’ ಎಂದರು.

ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕಿ ಜಿ.ಸತ್ಯವತಿ, ‘ಸಂಸ್ಥೆ ಹೊರಡಿಸುವ ಜಾಹೀರಾತುಗಳಲ್ಲಿ ಪ್ರಧಾನವಾಗಿ ಕನ್ನಡ ಬಳಸಲು ಕ್ರಮ ವಹಿಸಲಾಗುತ್ತಿದೆ. ವಿದ್ಯುನ್ಮಾನ ಫಲಕ ಗಳಲ್ಲಿ ಪ್ರಕಟವಾಗುವ ಮಾಹಿತಿಗಳೂ ಕನ್ನಡದಲ್ಲಿರುವಂತೆ ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ. ಸೆಪ್ಟೆಂಬರ್ ಒಳಗೆ ಸಂಸ್ಥೆಯ ತಂತ್ರಾಂಶ ದಲ್ಲಿ ಕನ್ನಡ ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದರು.

‘ಪ್ರಾಧಿಕಾರವು ಕನ್ನಡದ 2 ಸಾವಿರ ಉಕ್ತಿಗಳನ್ನು ನೀಡಿದರೆ ಬಸ್‌ಗಳು ಸಂಚರಿಸುವಾಗ ಡಿಜಿಟಲ್ ಫಲಕಗಳಲ್ಲಿ ಪ್ರಕಟಿಸಲಾಗುವುದು’ ಎಂದು ತಿಳಿಸಿದರು.

ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ಲ, ಬಿಎಂಟಿಸಿಯ ಮಾಹಿತಿ ಮತ್ತು ತಂತ್ರಜ್ಞಾನದ ನಿರ್ದೇಶಕ ಸೂರ್ಯಕಾಂತ್ ಸೇನ್, ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ವ.ಚ. ಚನ್ನೇಗೌಡ ಹಾಗೂ ಅಧಿಕಾರಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು