ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕನ್ನಡದ ಅಂತರರಾಷ್ಟ್ರೀಯ ಕವಿ ಶಿವಪ್ರಕಾಶ್: ಸಾಹಿತಿ ಎಸ್‌.ಜಿ.ಸಿದ್ದರಾಮಯ್ಯ

Published : 2 ಸೆಪ್ಟೆಂಬರ್ 2024, 16:20 IST
Last Updated : 2 ಸೆಪ್ಟೆಂಬರ್ 2024, 16:20 IST
ಫಾಲೋ ಮಾಡಿ
Comments

ಬೆಂಗಳೂರು: ‘ಚರಿತ್ರೆ, ಪುರಾಣವನ್ನು ಮುರಿದು ಕಟ್ಟುವ ಪ್ರಕ್ರಿಯೆಯಲ್ಲಿ ಪಂಪ, ರನ್ನ, ಕುವೆಂಪು ಅವರ ಸಾಲಿಗೆ ಕವಿ ಎಚ್‌.ಎಸ್‌.ಶಿವಪ್ರಕಾಶ್ ಕೂಡ ಸೇರುತ್ತಾರೆ. ಟಿಪ್ಪು ಸುಲ್ತಾನ್, ಮಂಟೇಸ್ವಾಮಿ ಸೇರಿದಂತೆ ಅವರ ಹಲವು ಕೃತಿಗಳಲ್ಲೂ ಇದನ್ನು ಕಾಣಬಹುದು’ ಎಂದು ಸಾಹಿತಿ ಎಸ್‌.ಜಿ.ಸಿದ್ಧರಾಮಯ್ಯ ಅಭಿಪ್ರಾಯಪಟ್ಟರು.

ಸಿರಿವರ ಕಲ್ಚರಲ್ ಅಕಾಡೆಮಿ ಮತ್ತು ಅನನ್ಯ ಕ್ರಿಯೇಶನ್ಸ್‌ ಸಹಯೋಗದಲ್ಲಿ ಸೋಮವಾರ ನಡೆದ ‘ಮಂಟೇಸ್ವಾಮಿ ಕಥಾ ಪ್ರಸಂಗ’ ಪ್ರದರ್ಶನದ ಕಾರ್ಯಕ್ರಮದಲ್ಲಿ ಕವಿ ಎಚ್‌.ಎಸ್‌.ಶಿವಪ್ರಕಾಶ್ ಅವರನ್ನು ಸನ್ಮಾನಿಸಿ ಮಾತನಾಡಿದರು.

‘ಶಿವಪ್ರಕಾಶ್ ಅವರು ಜಗತ್ತನ್ನು ಸುತ್ತುತ್ತಾ, ಹೊರ ದೇಶದ ವಿಶ್ವವಿದ್ಯಾಲಯಗಳಲ್ಲಿ ಕನ್ನಡದ ಪ್ರಜ್ಞೆಯನ್ನು ಪಸರಿಸಿದ್ದಾರೆ. ಹಾಗಾಗಿ ಅವರು ಕನ್ನಡದ ಅಂತರರಾಷ್ಟ್ರೀಯ ಕವಿ’ ಎಂದರು.

ಸಂಗೀತ ನಿರ್ದೇಶಕ ಹಂಸಲೇಖ ಮಾತನಾಡಿ, ‘ಮಂಟೇಸ್ವಾಮಿ ಕಥಾ ಪ್ರಸಂಗವನ್ನು ಶಿವಪ್ರಕಾಶ್ ಅವರು ಸರಳವಾಗಿ ಬರೆದಿದ್ದಾರೆ. 12 ಶತಮಾನದಲ್ಲಿ ಬಸವಣ್ಣನವರು ಕಾಯಕವೇ ಕೈಲಾಸ ಎಂದರು. ಅಂದು ಸನಾತನಿಗಳು ಪೂಜೆಯೇ ಕಾಯಕ ಎಂದರು. ಮಂಟೇಸ್ವಾಮಿ, ಕಾಯಕ ಮತ್ತು ಪೂಜೆ ಎರಡನ್ನೂ ಒಳಗೊಂಡ ಸುಂದರವಾದ ಸೂತ್ರವನ್ನು ಕೊಟ್ಟಿದ್ದಾರೆ’ ಎಂದು ‍ಪ್ರತಿಪಾದಿಸಿದರು.

‘ಬಸವಣ್ಣನವರಿಗೆ ಜನಿವಾರ ಹಾಕಿ, ಸನಾತನ ಧರ್ಮಕ್ಕೆ ಸೇರಿಸುವ ಪಿತೂರಿಯಾಗಿ ‘ವಚನ ದರ್ಶನ’ ಬಂದಿದೆ.‌ ಹಿಂದಿನಿಂದಲೂ ವೈದೀಕ ಪರಂಪರೆ ಹೀಗೆ ದಾಳಿ ಮಾಡುತ್ತಾ ಬಂದಿದೆ. ಕಬ್ಬಿಣ ನಮ್ಮ ಚಿನ್ನ, ಕೌಶಲ ನಮ್ಮ ಬಲ, ಕಪ್ಪು ನಮ್ಮ ಗುರುತು, ಕಾಯಕ ನಮ್ಮ ವಿಳಾಸ ಎಂದು ಮಂಟೇಸ್ವಾಮಿ ಹೇಳುತ್ತಾರೆ. ನಾವು ಕಾಯಕ ಮಾಡುತ್ತಾ, ಇಂಥ ದಾಳಿಗಳನ್ನು ಎದುರಿಸಬೇಕು. ಈ ಕಾರ್ಯಕ್ರಮವೇ ‘ವಚನ ದರ್ಶನ’ದ ಖಂಡನಾ ಸಭೆಯಾಗಲಿ. ತಂಬೂರಿ ಮೀಟೋಣ, ವಚನ ದರ್ಶನವನ್ನು ಸುಡೋಣ’ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿವಪ್ರಕಾಶ್, ‘ಮೊದಲ ಬಾರಿಗೆ ಈ ನಾಟಕ ಪ್ರದರ್ಶನವಾದಾಗ ಇಷ್ಟೊಂದು ಜನಪ್ರಿಯವಾಗುತ್ತದೆ ಎಂದುಕೊಂಡಿರಲಿಲ್ಲ. ಈಗಾಗಲೇ 700 ಪ್ರದರ್ಶನಗಳನ್ನು ಕಂಡಿದೆ. ಇದು ನನ್ನ ಹಿರಿಮೆ, ಗರಿಮೆಯನ್ನು ಹೆಚ್ಚಿಸಿದೆ. ಅದಕ್ಕಾಗಿ ಕೃತಜ್ಞತೆಗಳನ್ನು ಸಲ್ಲಿಸುವೆ’ ಎಂದರು.

ಗಾಯಕಿ ಲತಾ ಹಂಸಲೇಖಾ ಮತ್ತು ಕುಟುಂಬದವರು ಶಿವಪ್ರಕಾಶ್ ಅವರನ್ನು ಅಭಿನಂದಿಸಿದರು. ರಾಜೇಶ್ ಮತ್ತು ತಂಡದವರು ಶಿವಪ್ರಕಾಶ್ ಅವರಿಗೆ ತಂಬೂರಿಯನ್ನು ಉಡುಗೊರೆಯಾಗಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT