ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾಮಫಲಕಗಳಲ್ಲಿ ಕನ್ನಡ: ತ್ವರಿತ ಕ್ರಮಕ್ಕೆ ಸೂಚನೆ

Published 30 ಜನವರಿ 2024, 16:00 IST
Last Updated 30 ಜನವರಿ 2024, 16:00 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಬಳಕೆಗೆ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಅಧಿಕಾರಿಗಳಿಗೆ ಸೂಚಿಸಿದರು.

ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕನ್ನಡ ಅಳವಡಿಕೆ ಹಾಗೂ ‘ಸಹಾಯ 2.0‘ದಲ್ಲಿ ಬಂದ ದೂರುಗಳಿಗೆ ಸಂಬಂಧಿಸಿದಂತೆ ಮಂಗಳವಾರ ನಡೆದ ವರ್ಚ್ಯುವಲ್ ಸಭೆಯಲ್ಲಿ ಅವರು ಮಾತನಾಡಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 49,241 ಮಳಿಗೆಗಳಿಗೆ ನೋಟಿಸ್ ನೀಡಲಾಗಿದ್ದು, 16,813 ಮಳಿಗೆಗಳಲ್ಲಿ ಶೇ 60ರಷ್ಟು ಕನ್ನಡ ಬಳಸಿದ ನಾಮಫಲಕಗಳನ್ನು ಅಳವಡಿಸಿಕೊಳ್ಳಲಾಗಿದೆ. 32,428 ಮಳಿಗೆಗಳಲ್ಲಿ ನಾಮಫಲಕಗಳನ್ನು ಅಳವಡಿಸಬೇಕಿದೆ. ಫೆಬ್ರುವರಿ ಅಂತ್ಯದೊಳಗಾಗಿ ಎಲ್ಲಾ ಮಳಿಗೆಗಳೂ ಅಳವಡಿಸಿಕೊಳ್ಳುವಂತೆ ಆಯಾ ವಲಯಗಳಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ದೂರು ಶೀಘ್ರ ಇತ್ಯರ್ಥ: ಪಾಲಿಕೆಯ ಸಹಾಯ 2.0ರಲ್ಲಿ ಬರುವ ದೂರುಗಳನ್ನು ನಿಗದಿತ ಸಮಯದಲ್ಲಿ ಇತ್ಯರ್ಥಪಡಿಸಬೇಕು. ಪ್ರಮುಖವಾಗಿ ಕಸದ ಸಮಸ್ಯೆ, ಬೀದಿ ದೀಪಗಳ ಅಳವಡಿಕೆ ಹಾಗೂ ರಸ್ತೆ ಗುಂಡಿ ಸಮಸ್ಯೆಗಳ ಕುರಿತು ದೂರುಗಳು ಬರುತ್ತವೆ. ಇವುಗಳನ್ನು ಆದ್ಯತೆ ಮೇರೆಗೆ ಪರಿಹರಿಸಬೇಕು ಎಂದು ತುಷಾರ್‌ ಗಿರಿನಾಥ್‌ ಆದೇಶಿಸಿದರು.

ರಸ್ತೆ ಅಭಿವೃದ್ಧಿ: ಎಲ್ಲ ವಾರ್ಡ್‌ಗಳಿಗೆ ತಲಾ ₹1 ಕೋಟಿ ಹಣವನ್ನು ಮೀಸಲಿಡಲಾಗಿದ್ದು, ಚರಂಡಿಗಳಲ್ಲಿ ಹೂಳು ತೆಗೆಯುವ ಕಾಮಗಾರಿಗೆ ಇದನ್ನು ಬಳಸಿಕೊಳ್ಳಲಾಗುತ್ತಿದೆ. ಪೀಣ್ಯ ಕೈಗಾರಿಕಾ ಪ್ರದೇಶ, ಎಸ್.ಪಿ ರಸ್ತೆ, ಮಾಮೂಲ್ ಪೇಟೆ, ತರಗುಪೇಟೆ, ಸುಲ್ತಾನ್ ಪೇಟೆ ಸೇರಿದಂತೆ ಇನ್ನಿತರೆ ರಸ್ತೆಗಳನ್ನು ಆದ್ಯತೆ ಮೇರೆಗೆ ಅಭಿವೃದ್ಧಿ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಅಭಿವೃದ್ಧಿ ಆಗುತ್ತಿಲ್ಲ: ‘ನಗರದಲ್ಲಿರುವ ಕೈಗಾರಿಕಾ ಪ್ರದೇಶಗಳಿಂದ ಬಿಬಿಎಂಪಿಗೆ ಸಾಕಷ್ಟು ತೆರಿಗೆ ಪಾವತಿ ಮಾಡಲಾಗುತ್ತಿದೆ. ಆದರೆ, ನಮ್ಮ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲ. ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆಯ (ಎಫ್‌ಕೆಸಿಸಿಐ) ಅಧ್ಯಕ್ಷ ರಮೇಶ್‌ಚಂದ್ರ ಲಹೋಟಿ ಮನವಿ ಮಾಡಿದರು.

ಬಿಬಿಎಂಪಿ ಬಜೆಟ್‌ಗೆ ಎಫ್‌ಕೆಸಿಸಿಐ ಸದಸ್ಯರು ಸಲಹೆ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.

‘ಕೈಗಾರಿಕೆ ಪ್ರದೇಶಗಳಲ್ಲಿ ರಸ್ತೆ ಅಭಿವೃದ್ಧಿಯಾಗಬೇಕು, ಬೀದಿ ದೀಪಗಳ ನಿರ್ವಹಣೆಯಾಗಬೇಕು, ಸಾರಕ್ಕಿ ಮೆಟ್ರೊ ನಿಲ್ದಾಣದ ಬಳಿ ಸಂಚಾರ ದಟ್ಟಣೆ ಸಮಸ್ಯೆ ನಿವಾರಿಸಬೇಕು, ಅಪಾಯ ಸ್ಥಿತಿಯಲ್ಲಿರುವ ಮರದ ಕೊಂಬೆಗಳ ಕಟಾವು ಮಾಡಬೇಕು, ಉದ್ದಿಮೆ ಪರವಾನಗಿ ಸಮಯಕ್ಕೆ ಸರಿಯಾಗಿ ನೀಡಬೇಕು. ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಅಭಿವೃದ್ಧಿ ಕಾರ್ಯಗಳಾಗುವಂತೆ ನೋಡಿಕೊಳ್ಳಬೇಕು’ ಎಂಬ ಸಲಹೆಗಳನ್ನು ನೀಡಿದರು.

ಎಫ್‌ಕೆಸಿಸಿಐ ಹಿರಿಯ ಉಪಾಧ್ಯಕ್ಷ ಎಂ.ಜಿ ಬಾಲಕೃಷ್ಣ, ಉಪಾಧ್ಯಕ್ಷೆ ಉಮಾರೆಡ್ಡಿ  ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT