ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳೆತು ನಾರುತ್ತಿದೆ ಕನ್ನಲ್ಲಿ ಕೆರೆ

ಗ್ರಾಮ ಪಂಚಾಯಿತಿ–ಬಿಬಿಎಂಪಿ ಹಗ್ಗಜಗ್ಗಾಟದಲ್ಲಿ ಮರೆಯಾಗುತ್ತಿದೆ ಜಲಮೂಲ
Last Updated 20 ಜನವರಿ 2021, 18:15 IST
ಅಕ್ಷರ ಗಾತ್ರ

ರಾಜರಾಜೇಶ್ವರಿನಗರ: ಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕನ್ನಲ್ಲಿ ಕೆರೆ ಸಾಂಕ್ರಾಮಿಕ ರೋಗಗಳ ಉತ್ಪಾದನಾ ಕೇಂದ್ರದಂತಾಗಿದೆ. 60 ಎಕರೆ ಪ್ರದೇಶದಲ್ಲಿರುವ ಈ ಕೆರೆಯಲ್ಲಿ ಕೊಳೆ ಗಿಡಗಳು, ಜೊಂಡು, ಹುಲ್ಲು, ಗಿಡ–ಗಂಟಿಗಳು ಬೆಳೆದಿದ್ದು, ನೀರೇ ಕಾಣುತ್ತಿಲ್ಲ.

ಕನ್ನಲ್ಲಿ ಗ್ರಾಮವು ಐತಿಹಾಸಿಕ, ಧಾರ್ಮಿಕ ಸ್ಥಳವಾಗಿದೆ. ನೂರಾರು ವರ್ಷಗಳ ಪುರಾಣ ಪ್ರಸಿದ್ಧ ಶ್ರೀ ವೀರಭದ್ರಸ್ವಾಮಿ ದೇವಸ್ಥಾನ ಈ ಕೆರೆಯ ಬದಿಯಲ್ಲಿದೆ.

ಕೊಡಿಗೆಹಳ್ಳಿ, ಕನ್ನಲ್ಲಿ ಮತ್ತು ಚಿಕ್ಕಕೊಡಿಗೇಹಳ್ಳಿ, ಬ್ರಹ್ಮದೇವರ ಗುಡ್ಡ ಸುತ್ತಮುತ್ತಲ ಬಡಾವಣೆ ಮತ್ತು ಮಾಚೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಕೈಗಾರಿಕೆಗಳ ತ್ಯಾಜ್ಯ, ರಾಸಾಯನಿಕ, ಒಳಚರಂಡಿ ನೀರು ನೇರವಾಗಿ ಕೆರೆ ಸೇರುತ್ತಿದೆ. ಸತ್ತ ಪ್ರಾಣಿ ಪಕ್ಷಿಗಳ ಕಳೇಬರ, ಮಾಂಸ–ಮೂಳೆ, ಆಸ್ಪತ್ರೆ ತ್ಯಾಜ್ಯ, ಕಲ್ಮಶ, ಘನತ್ಯಾಜ್ಯ, ಕಸದ ಚೀಲ, ಕಟ್ಟಡ ಸಾಮಾಗ್ರಿಗಳನ್ನು ಸುರಿಯಲಾಗುತ್ತಿದೆ.

ಕೆರೆಯ ಸುತ್ತಮುತ್ತ ನಾಡಪ್ರಭು ಕೆಂಪೇಗೌಡ ಬಡಾವಣೆ (ಬಿಡಿಎ ಬಡಾವಣೆ), ಖಾಸಗಿ ಬಡಾವಣೆಗಳು ತಲೆ ಎತ್ತುತ್ತಿವೆ. ಈ ಬಡಾವಣೆಗಳು ತಲೆ ಎತ್ತುವ ಮೊದಲು ಕೆರೆಯ ನೀರು ಪರಿಶುದ್ಧವಾಗಿತ್ತು. ಕಾಡುಪ್ರಾಣಿಗಳು, ಪಶುಪಕ್ಷಿಗಳು, ನಾಗರಿಕರು ಈ ಕೆರೆಯ ನೀರನ್ನು ಕುಡಿಯಲು ಬಳಸುತ್ತಿದ್ದರು. ವ್ಯವಸಾಯಕ್ಕೂ ಬಳಸಲಾಗುತ್ತಿತ್ತು. ಈಗ ಕೆರೆಯ ನೀರು ಕಪ್ಪು ಬಣ್ಣಕ್ಕೆ ತಿರುಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಕಲ್ಯಾಣಿ ನಿರ್ಮಾಣ:

ಹಲವು ವರ್ಷಗಳ ಹಿಂದೆ ಮಳೆಯಿಲ್ಲದೆ ಕೆರೆ ಸಂಪೂರ್ಣವಾಗಿ ಬತ್ತಿಹೋಗಿತ್ತು. ಜಲಚರಗಳಿಗೆ, ಪಕ್ಷಿಗಳಿಗೆ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾದಾಗ ಶ್ರೀವೀರಭದ್ರಸ್ವಾಮಿ ವೀರಶೈವ ನಿತ್ಯಾನ್ನ ದಾಸೋಹ ಸಮಿತಿ ಅಧ್ಯಕ್ಷ ಡಾ.ಎಸ್.ಶಾಂತರಾಜು ಅವರು ಎರಡು ಕಲ್ಯಾಣಿ ನಿರ್ಮಿಸಿ ನೀರು ಸಂಗ್ರಹಿಸಲು ಅನುವು ಮಾಡಿಕೊಟ್ಟಿದ್ದರು.

ಈಗ ಕೆರೆಗೆ ಕೊಳೆತ ನೀರು ಸೇರುತ್ತಿರುವುದರಿಂದ ಕಲ್ಯಾಣಿಯ ನೀರು ಕಲುಷಿತಗೊಂಡಿದೆ. ನೆಲಹಾಸು ಹಾಳಾಗಿ ಹೊಸದಾಗಿ ನಿರ್ಮಿಸಲಾದ ಉದ್ಯಾನ ಸಂಪೂರ್ಣ ಹಾಳಾಗಿದೆ. ಪಾಚಿಕಟ್ಟಿ ದುರ್ವಾಸನೆ ಬೀರುತ್ತಿರುವುದರಿಂದ ಮಕ್ಕಳು ಹಾಗೂ ನಾಗರಿಕರು ಅಪಾಯಕ್ಕೆ ಸಿಲುಕುತ್ತಾರೆ ಎಂದು ಮುನ್ನೆಚ್ಚರಿಕೆಯ ಕ್ರಮವಾಗಿ ಉದ್ಯಾನದ ಸುತ್ತ ತಂತಿಬೇಲಿ ಹಾಕಲಾಗಿದೆ.

ಭರವಸೆ ಈಡೇರಿಲ್ಲ:

‘ಕೆರೆ ರಕ್ಷಿಸುತ್ತೇವೆ. ಒತ್ತುವರಿ ತೆರವುಗೊಳಿಸುತ್ತೇವೆ, ಒಳಚರಂಡಿ ನೀರು ಸೇರದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡುತ್ತಾರೆ. ಆದರೆ, ಮಾತಿನಂತೆ ಅಭಿವೃದ್ಧಿ ಕಾರ್ಯ ಕೈಗೊಳ್ಳುವುದಿಲ್ಲ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮುಂದಿನ ಪೀಳಿಗೆಗೆ ಉಳಿಯುವುದೇ ಇಲ್ಲ’ ಎಂದು ಡಾ.ಎಸ್. ಶಾಂತರಾಜು ಆತಂಕ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಸಿದ್ದಲಿಂಗಸ್ವಾಮಿ, ‘ಕೆರೆ ಅಂಗಳವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಮತ್ತೊಂದೆಡೆ ಕೆರೆಗೆ ನೀರು ಹರಿದು ಬರಲು ಸಹಕಾರಿಯಾಗಿದ್ದ ನೀರುಗಾಲುವೆಯನ್ನೇ ಮುಚ್ಚಿಹಾಕಿದ್ದಾರೆ. ಮಾಚೋಹಳ್ಳಿ ಕೈಗಾರಿಕೆ ಪ್ರದೇಶಗಳಿಂದ ರಾಸಾಯನಿಕ ನೀರು ಹರಿದು ಬರುತ್ತಿದ್ದು ಕೊಳಚೆ ನೀರು ನಿರ್ಬಂಧಕ್ಕೆ ಯಾವುದೇ ಅಧಿಕಾರಿಗಳು ಗಮನ ಹರಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಂಚಾಯ್ತಿ ಸದಸ್ಯ ಪುರುಷೋತ್ತಮ್, ‘ಬಿಡಿಎ, ಬಿಬಿಎಂಪಿ, ಗ್ರಾಮಪಂಚಾಯಿತಿ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದಲೇ ಕೆರೆಯು ವಿನಾಶದ ಅಂಚನ್ನು ತಲುಪಿದೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT