ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಕರಗ ಆಚರಣೆಗೆ ಇಲ್ಲ ಕೊರೋನಾ ಬಾಧೆ

ಸೋಂಕು ಹರಡದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮ * ಪಾಲಿಕೆ ಸಿದ್ಧತೆ
Last Updated 11 ಮಾರ್ಚ್ 2020, 23:00 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಐತಿಹಾಸಿಕ ಕರಗ ಮಹೊತ್ಸವ ಎಂದಿನಂತೆ ಈ ವರ್ಷವೂ ನಡೆಯಲಿದೆ. ಕೊರೋನಾ ವೈರಸ್‌ನಿಂದ ಹರಡುವ ಕೋವಿಡ್‌ 19 ಕಾಯಿಲೆ ನಗರದಲ್ಲೂ ಕಾಣಿಸಿಕೊಂಡಿರುವುದರಿಂದ ಈ ಬಾರಿಯ ಕರಗ ಮಹೋತ್ಸವ ರದ್ದಾಗಲಿದೆ ಎಂಬ ವದಂತಿ ಹಬ್ಬಿತ್ತು. ಇದನ್ನು ಬಿಬಿಎಂಪಿ ಅಲ್ಲಗಳೆದಿದೆ.

ಕರಗ ಮಹೋತ್ಸವದ ಸಂದರ್ಭದಲ್ಲಿ ಕೊರೋನಾ ಸೋಂಕು ಹಾಗೂ ಕಾಲರಾ ಹಬ್ಬದಂತೆ ತಡೆಯಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮೇಯರ್ ಎಂ.ಗೌತಮ್ ಕುಮಾರ್ ಅವರು ಕರಗ ಆಚರಣೆ ಸಮಿತಿಯವರು ಹಾಗೂ ಅಧಿಕಾರಿಗಳ ಜೊತೆ ಬುಧವಾರ ಸಭೆ ನಡೆಸಿದರು.

ಸಭೆ ಬಳಿಕ ಸುದ್ದಿಗಾರ ಜೊತೆ ಮಾತನಾಡಿದ ಮೇಯರ್, 'ಕರಗ ಮಹೋತ್ಸವ ಒಂದು ಸಂಪ್ರದಾಯಿಕ ಹಾಗೂ ಪಾರಂಪಾರಿಕ ಆಚರಣೆ. ಇದನ್ನು ನಿರಾತಂಕವಾಗಿ ನಡೆಸಲು ಪಾಲಿಕೆ ವತಿಯಿಂದ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈ ಬಾರಿಯೂ ಕರಗ ಮಹೋತ್ಸವ ಯಶಸ್ವಿಯಾಗಿ ನಡೆಯಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

'ಕೊರೋನಾ ವೈರಸ್‌ನಿಂದ ಸೋಂಕು ಹರಡದಂತೆ ತಡೆಯಲು ಹಾಗೂ ಕಾಲರಾ ನಿಯಂತ್ರಿಸಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕರಗ ನಡೆಯುವ ಸ್ಥಳಗಳನ್ನ ಸ್ವಚ್ಛವಾಗಿಡಲು ಕ್ರಮ ಕೈಗೊಳ್ಳಲಾಗುತ್ತಿದೆ. ನಾಳೆ ದೇವಸ್ಥಾನಕ್ಕೆ ಭೇಟಿ ನೀಡಲಿದ್ದು, ಸ್ವಚ್ಛತೆ ದೃಷ್ಟಿಯಿಂದ ಪಾಲಿಸಬೇಕಾದ ಕ್ರಮಗಳ ಬಗ್ಗೆ ಚರ್ಚಿಸತ್ತೇನೆ' ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಪಿ.ಆರ್ ರಮೇಶ್, 'ಈ ಹಿಂದೆ ಪ್ಲೇಗ್ ನಂತಹ ಮಹಾಮಾರಿ ಬಂದ ಸಮಯದಲ್ಲೂ ಕರಗ ಉತ್ಸವವನ್ನು ನಿಲ್ಲಿಸಿರಲಿಲ್ಲ. ಬ್ರಿಟೀಷರ ಸಮಯದಲ್ಲಿ ಕರ್ಫ್ಯೂ ಹೇರಿದ್ದಾಗಲೂ ಈ ಉತ್ಸವವನ್ನು ಆಚರಿಸಲಾಗಿದೆ. ದ್ರೌಪದಿ ದೇವಿಯ ಶಕ್ತಿಯಿಂದ ಈ ಬಾರಿಯೂ ಉತ್ಸವದ ಆಚರಣೆಗೆ ಯಾವುದೇ ಸಮಸ್ಯೆ ಆಗುವುದಿಲ್ಲ' ಎಂದರು.

'ಈ ಬಾರಿಯ ಕರಗ ಏಪ್ರಿಲ್ 8ರಂದು ನಡೆಯಲಿದೆ. ಉತ್ಸವವನ್ನು ಸಾಂಗವಾಗಿ ನೆರವೇರಿಸಲು ಅಗತ್ಯ ಕ್ರಮ ಕೈಗೊಳ್ಳಲು ಇನ್ನೂ ಒಂದು ತಿಂಗಳ ಕಾಲಾವಕಾಶ ಇದೆ. ಉತ್ಸವ ಸಾಗುವ ಮಾರ್ಗಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದಕ್ಕೆ ಮಿತಿ ಸಹಕರಿಸಲಿದೆ' ಎಂದರು.

ತಿಗಳರಪೇಟೆಯ ಶ್ರೀ ಧರ್ಮರಾಯಸ್ವಾಮಿ ದೇವಾಲಯ ವ್ಯವಸ್ಥಾಪನಾ ಸಮಿತಿಯು ಪ್ರತಿವರ್ಷ ಕರಗ ಶಕ್ತ್ಯೋತ್ಸವವನ್ನು ನಡೆಸಿಕೊಂಡು ಬರುತ್ತಿದೆ. ದೇಶ–ವಿದೇಶಗಳಿಂದ ಭಕ್ತರನ್ನು ಸೆಳೆಯುವ ಈ ಉತ್ಸವದಲ್ಲಿ ಲಕ್ಷಾಂತರ ಮಂದಿ ಭಾಗವಹಿಸುತ್ತಾರೆ. ಹೂವಿನ ಕರಗದ ದಿನ ಧರ್ಮರಾಯಸ್ವಾಮಿ ದೇವಾಲಯದಿಂದ ರಾತ್ರಿ 12.30ರ ಬಳಿಕ ಹೊರಡುವ ಉತ್ಸವ ಹಲಸೂರು ಪೇಟೆಯ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಿ, ನಗರ್ತಪೇಟೆ ಮಾರ್ಗವಾಗಿ ಕಬ್ಬನ್‌ ಪೇಟೆ, ಗಾಣಿಗರ ಪೇಟೆ, ಅವೆನ್ಯೂ ರಸ್ತೆ, ದೊಡ್ಡಪೇಟೆ, ಕೆ.ಆರ್‌. ಮಾರುಕಟ್ಟೆ, ಆಕ್ಕಿಪೇಟೆ, ಕುಂಬಾರಪೇಟೆ, ಗೊಲ್ಲರಪೇಟೆ, ತಿಗಳರಪೇಟೆ, ಕಬ್ಬನ್‌ಪೇಟೆ, ಸುಣ್ಣಕಲ್‌ ಪೇಟೆಗಳಲ್ಲಿ ಸಂಚರಿಸುತ್ತದೆ.

‘ಇದೇ ಅಂತಿಮ ತೀರ್ಮಾನ ಅಲ್ಲ’
‘ಕರಗ ನಡೆಸುವುದಾಗಿ ಇಂದು ತೀರ್ಮಾನ ಮಾಡಿದ್ದೇವೆ. ಆದರೆ, ಇದೇ ಅಂತಿಮ ತೀರ್ಮಾನವಲ್ಲ. ಮುಂದಿನ ಬೆಳವಣಿಗೆ ನೋಡಿಕೊಂಡು ಉತ್ಸವ ನಡೆಯುವ 24 ಗಂಟೆ ಮುಂಚೆಯೂ ಈ ತೀರ್ಮಾನ ಮರುಪರಿಶೀಲಿಸಬಹುದು’ ಎಂದು ಪಾಲಿಕೆ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ತಿಳಿಸಿದರು.

‘ಕೊರೊನಾ ವೈರಸ್ ಹಬ್ಬುವ ಆತಂಕ ನಮ್ಮಲ್ಲಿ ಇನ್ನೂ ಇದೆ. ಕರಗ ಸಾಗುವ ಮಾರ್ಗದಲ್ಲಿ ಶುಚಿತ್ವ ಕಾಪಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದ್ದೇವೆ. ಕರಗ ಮಹೋತ್ಸವದಂದೇ ಬಿಬಿಎಂಪಿ ವತಿಯಿಂದ ನಾಡಪ್ರಭು ಕೆಂಪೇಗೌಡ ದಿನಾಚರಣೆ ನಡೆಯಲಿದೆ' ಎಂದರು.

‘ಸೋಂಕು ಲಕ್ಷಣ ಕಾಣಿಸಿದರೆ ಪರೀಕ್ಷೆ ಮನ್ನಾ’
ಬೆಂಗಳೂರು:
ಕೊರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿ1ರಿಂದ 4ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ವೇಳೆ ಜ್ವರ, ಕೆಮ್ಮು ಮತ್ತು ನೆಗಡಿ ಇದ್ದಲ್ಲಿ ಅವರ ಪರೀಕ್ಷೆಯನ್ನು ಮನ್ನಾ ಮಾಡಿ, ಮುಂದಿನ ತರಗತಿಗೆ ತೇರ್ಗಡೆಗೊಳಿಸಲು ಖಾಸಗಿ ಶಾಲೆಗಳ ಒಕ್ಕೂಟ ನಿರ್ಧಾರ ಕೈಗೊಂಡಿದೆ.

ಸಿಬಿಎಸ್ಇ, ಐಸಿಎಸ್ಇ, ಸ್ಟೇಟ್ ಬೋರ್ಡ್, ಪ್ರೈವೇಟ್ ಸ್ಕೂಲ್ ಅಸೋಸಿಯೇಷನ್ ಮ್ಯಾನೇಜ್‌ಮೆಂಟ್ ನಗರದಲ್ಲಿ ಬುಧವಾರ ನಡೆಸಿದ ತುರ್ತು ಸಭೆಯಲ್ಲಿ 60ಕ್ಕೂ ಹೆಚ್ಚು ಶಾಲೆಗಳ ಆಡಳಿತ ಮಂಡಳಿಯ ಮುಖ್ಯಸ್ಥರು ಪಾಲ್ಗೊಂಡಿದ್ದರು.ಸಂಘದ ಅಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ ನೇತೃತ್ವದಲ್ಲಿವಿದ್ಯಾರ್ಥಿಗಳ ರಕ್ಷಣೆಗೆ ಯಾವ ರೀತಿಯ ಕ್ರಮ ಕೈಗೊಳ್ಳಬೇಕೆಂಬುದರ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಚಿಕ್ಕ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಎಲ್‌.ಕೆ.ಜಿ ಮತ್ತು ಯು.ಕೆ.ಜಿ ಮಕ್ಕಳಿಗೆ ರಜೆ ಘೋಷಿಸಲು ನಿರ್ಧರಿಸಲಾಯಿತು.ವಿದ್ಯಾರ್ಥಿಗಳ ಪರೀಕ್ಷೆಗಳನ್ನು ಮಾ.20ರೊಳಗೆ ಮುಗಿಸಬೇಕು. ಈ ಅವಧಿಯಲ್ಲಿ1ರಿಂದ 4ನೇ ತರಗತಿಯ ವಿದ್ಯಾರ್ಥಿಗಳಲ್ಲಿ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಲ್ಲಿ ಅವರನ್ನು ನೇರವಾಗಿ ತೇರ್ಗಡೆ ಮಾಡಬೇಕು.ಎಲ್ಲ ತರಗತಿಗಳು ಹಾಗೂ ಪರೀಕ್ಷೆಗಳನ್ನು ಇದೇ 22ಕ್ಕೆ ಮುಗಿಸಿ, ವಿದ್ಯಾರ್ಥಿಗಳಿಗೆ ಬೇಸಿಗೆ ರಜೆಯನ್ನು ನೀಡಬೇಕು. ರಜೆ ದಿನಗಳಲ್ಲಿ ಯಾವುದೇ ತರಗತಿಯನ್ನು ನಡೆಸಬಾರದು. ಬೇಸಿಗೆ ಶಿಬಿರವನ್ನೂ ಆಯೋಜಿಸಬಾರದು ಎಂದು ಸಂಘದ ಪದಾಧಿಕಾರಿಗಳು ಶಾಲೆಗಳ ಆಡಳಿತ ಮಂಡಳಿಯ ಮುಖ್ಯಸ್ಥರಿಗೆ ಸೂಚಿಸಿದರು.

ಶಾಲಾ ದಿನಗಳಲ್ಲಿಪ್ರತಿ ವಿದ್ಯಾರ್ಥಿಯೂ ಶಾಲೆಗೆ ಬಂದಾಗ ಮೊದಲು ಸೋಪಿನಿಂದ ಕೈ ತೊಳೆದು
ಕೊಳ್ಳಬೇಕು. ಶಿಕ್ಷಕರು ಈ ಬಗ್ಗೆ ಗಮನ ಹರಿಸಬೇಕು. ಮಕ್ಕಳಿಗೆ ಮಾಸ್ಕ್‌ಗಳನ್ನು ಒದಗಿಸುವ ಜತೆಗೆ ಬಿಸಿ ನೀರಿನ ವ್ಯವಸ್ಥೆಯನ್ನು ಮಾಡಬೇಕು. ಶಾಲೆಯ ಆವರಣ ಶುಚಿತ್ವದಿಂದ ಕೂಡಿರುವಂತೆ ನೋಡಿಕೊಳ್ಳಬೇಕು.ಆಕಸ್ಮಿಕವಾಗಿ ಯಾರಿಗಾದರೂ
ಕೆಮ್ಮು ಅಥವಾ ಜ್ವರ ಇದ್ದರೆ ಕೂಡಲೇ ವೈದ್ಯರ ಹತ್ತಿರ ತೋರಿಸಲು ಕ್ರಮಕೈಗೊಳ್ಳಬೇಕು ಎಂದು ಸಭೆಯಲ್ಲಿ ತಿಳಿಸಲಾಯಿತು.

ಮಕ್ಕಳ ಆರೋಗ್ಯದ ಮೇಲೆ ನಿಗಾ ಇಡಲುಪ್ರತಿ ಶಾಲೆಯಲ್ಲೂ ಒಬ್ಬ ವೈದ್ಯರನ್ನು ನೇಮಿಸಿಕೊಳ್ಳಬೇಕು. ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದರೂ ಅವರಲ್ಲಿ ತೋರಿಸಿ, ಅಗತ್ಯ ಮಾಹಿತಿ ಮತ್ತು ಚಿಕಿತ್ಸೆಯನ್ನು ಪಡೆದುಕೊಳ್ಳಲು ವಿದ್ಯಾರ್ಥಿಗಳಿಗೆ ತಿಳಿಸುವಂತೆ ನಿರ್ಧಾರ ಕೈಗೊಳ್ಳಲಾಯಿತು.

ಸಂಘದಉಪಾಧ್ಯಕ್ಷರಾದ ರವೀಂದ್ರಸ್ವಾಮಿ, ವೆಂಕಟೇಶ್, ಕಾರ್ಯದರ್ಶಿ ರಾಧಾಕೃಷ್ಣ, ಖಜಾಂಜಿ ಸ್ವರೂಪಿಣಿ, ಕಾನೂನು ವಿಭಾಗದ ಮುಖ್ಯಸ್ಥರಾದ ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT