ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಮ್ಮನಹಳ್ಳಿ ಕ್ಷೇತ್ರ: ಸತೀಶ್ ರೆಡ್ಡಿ ಪ್ರಾಬಲ್ಯಕ್ಕೆ ಕಾಂಗ್ರೆಸ್‌ ಸಡ್ಡು

ಉಳಿದ ಹಳೆ ಸಮಸ್ಯೆಗಳ ನಡುವೆ ಕಾಣುತ್ತಿರುವ ಹೊಸ ಲೆಕ್ಕಾಚಾರ
Last Updated 11 ಫೆಬ್ರುವರಿ 2023, 21:30 IST
ಅಕ್ಷರ ಗಾತ್ರ

ಬೆಂಗಳೂರು: ಮೂರು ವಿಧಾನಸಭಾ ಚುನಾವಣೆಗಳಲ್ಲೂ ತಮ್ಮ ಮತಗಳನ್ನು ಹೆಚ್ಚಿಸಿಕೊಳ್ಳುತ್ತಾ ಬಂದಿರುವ ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ. ಸತೀಶ್‌ ರೆಡ್ಡಿ ಅವರ ಪ್ರಾಬಲ್ಯಕ್ಕೆ ಸಡ್ಡು ಹೊಡೆಯಲು ಕಾಂಗ್ರೆಸ್‌ ಪಾಳಯದಲ್ಲಿ ಚಿಂತನೆ ನಡೆದಿದೆ.

ಗುಜರಾತ್ ಮಾದರಿಯನ್ನು ಕರ್ನಾಟಕದಲ್ಲಿ ಅನುಷ್ಠಾನಗೊಳಿಸುವ ಆಲೋಚನೆಯ ಭಾಗವಾಗಿ ಸತೀಶ್ ರೆಡ್ಡಿ ಅವರನ್ನು ಬಿಟಿಎಂ ಲೇಔಟ್‌ನಿಂದ ಕಣಕ್ಕೆ ಇಳಿಸಲು ಬಿಜೆಪಿ ನಿರ್ಧರಿಸಿರುವ ಒಳಸುದ್ದಿಯೂ ಇದೆ. ಅದು ಕಿವಿಮೇಲೆ ಬಿದ್ದದ್ದೇ, ಕ್ಷೇತ್ರ ಬಿಟ್ಟುಕೊಡಲು ತಾವು ಸುತರಾಂ ಸಿದ್ಧವಿಲ್ಲ ಎನ್ನುವ ಸಂದೇಶವನ್ನೂ ಸತೀಶ್‌ ರೆಡ್ಡಿ ನೀಡಿದ್ದಾರೆ.

ಪಕ್ಕದ ಬಿಟಿಎಂ ಬಡಾವಣೆಯಲ್ಲಿ ಕಾಂಗ್ರೆಸ್‌ನ ರಾಮಲಿಂಗಾರೆಡ್ಡಿ ಅವರದ್ದೇ ಪ್ರಾಬಲ್ಯ. ಅವರು ಹಾಗೂ ಸತೀಶ್‌ ರೆಡ್ಡಿ ಇಬ್ಬರೂ ಪರಸ್ಪರ ಟೀಕೆ ಮಾಡದೆ ರಾಜಕೀಯ ಮಾಡಿಕೊಂಡು ಬಂದವರು. ಈಗ ಇಬ್ಬರನ್ನೂ ಬಿಟಿಎಂ ಲೇಔಟ್‌ನಲ್ಲಿ ಪರಸ್ಪರ ಮುಖಾಮುಖಿಯಾಗಿಸಿದರೆ? ಈ ಚಿಂತೆ ಸತೀಶ್‌ ರೆಡ್ಡಿ ಅವರನ್ನು ಕಾಡಿದೆ.

2008ರಲ್ಲಿ ಸೃಷ್ಟಿಯಾದ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಸತೀಶ್‌ ರೆಡ್ಡಿ ಗೆಲುವು ಸಾಧಿಸಿದ್ದಷ್ಟೆ ಅಲ್ಲ, ಚುನಾವಣೆಯಿಂದ ಚುನಾವಣೆಗೆ ತಮ್ಮ ಮತ ಗಳಿಕೆಯ ಪ್ರಮಾಣವನ್ನು ಏರಿಸಿಕೊಳ್ಳುತ್ತಾ ಬಂದಿದ್ದಾರೆ. ಕಳೆದ ಚುನಾವಣೆಯಲ್ಲಿ ಚಲಾವಣೆಯಾದ ಮತಗಳಲ್ಲಿ ಅರ್ಧಕ್ಕೂ ಹೆಚ್ಚು ಅವರ ಬುಟ್ಟಿಗೆ ಬಿದ್ದಿದ್ದವು.

ಬೊಮ್ಮನಹಳ್ಳಿಯಿಂದ ಬೇಗೂರು ರಸ್ತೆವರೆಗೆ ವಿಸ್ತರಣೆ ಕಾಮಗಾರಿ ಪ್ರತಿ ಸಲದ ಚುನಾವಣೆಯಲ್ಲಿ ಕೇಳಿಬರುವ ಆಶ್ವಾಸನೆ. ಅದು ಇದುವರೆಗೂ ಈಡೇರದೆ ಇರಲು ಭೂಸ್ವಾಧೀನ ಪ್ರಕ್ರಿಯೆಯ ಗೋಜಲುಗಳನ್ನೇ ಅಧಿಕಾರಿಗಳು ಕಾರಣವಾಗಿ ನೀಡುತ್ತಿದ್ದಾರೆ. ಎಚ್‌ಎಸ್‌ಆರ್‌ ಲೇಔಟ್‌ ಹೊರತುಪಡಿಸಿದರೆ ಮಿಕ್ಕ ಸ್ಥಳಗಳಲ್ಲಿ ಹೇಳಿಕೊಳ್ಳುವಂಥ ಒಂದು ಉದ್ಯಾನವಾಗಲೀ, ಆಟದ ಮೈದಾನವಾಗಲೀ ಇಲ್ಲ. ಜೋರು ಮಳೆ ಬಂದರೆ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ಕೆಲವು ಮನೆ
ಗಳು ಜಲಾವೃತವಾಗುವುದು ಇನ್ನೂ ತಪ್ಪಿಲ್ಲ. ರಾಜಕಾಲುವೆ ಒತ್ತುವರಿ, ಒಂದೇ ನಿವೇಶನವನ್ನು ಕೆಲವ
ರಿಗೆ ನೋಂದಣಿ ಮಾಡಿಕೊಡುವಂತಹ ಭೂದಂಧೆಕೋರತನಕ್ಕೆ ಇಲ್ಲಿ ಕಡಿವಾಣ ಬಿದ್ದಿಲ್ಲ.

ಭೂದಾಖಲೆಗಳ ಡಿಜಟಲೀಕರಣವಾದಾಗ, ಇಲ್ಲಿನ ಬಹುತೇಕ ಭೂದಾಖಲೆಗಳ ಎಂ.ಆರ್. ಪುಸ್ತಕಗಳನ್ನೇ ಸುಟ್ಟುಹಾಕಿದ್ದರೆಂಬ ಆರೋಪ ಕೇಳಿಬಂದಿತ್ತು. ಈಗಲೂ ಡಿಜಟಲೀಕರಣ ಆಗಿಲ್ಲ. ಗುಂಡಿ ಮೂಡಿಸಿಕೊಂಡ ರಸ್ತೆಗಳು ಅಣಕಿಸುವುದು, ಬೇಸಿಗೆಯಲ್ಲಿ ಒಂದು ಒಂದೂವರೆ ಸಾವಿರ ರೂಪಾಯಿ ತೆತ್ತು ಟ್ಯಾಂಕರ್‌ ನೀರು ಹೊಡೆಸಿಕೊಳ್ಳುವುದು ಸಮಸ್ಯೆಗಳು ಉಸಿರಾಡುತ್ತಿರುವುದಕ್ಕೆ ಸಾಕ್ಷಿ.

ಸತೀಶ್‌ ರೆಡ್ಡಿ ಇಲ್ಲಿ ಬಿಜೆಪಿಯ ಯಾರನ್ನೂ ಬೆಳೆಯಲು ಬಿಟ್ಟಿಲ್ಲ. ಹಿಂದೆ ಉಪ ಮೇಯರ್‌ ಆಗಿದ್ದ ರಾಮ್‌ಮೋಹನ್‌ರಾಜು ಬೆಳೆಯುವ ಲಕ್ಷಣ ತೋರಿದ್ದರೂ, ಅದಕ್ಕೆ ಶಾಸಕರು ಅವಕಾಶ ಕೊಡಲಿಲ್ಲ ಎಂದು ಕಾರ್ಯಕರ್ತರಲ್ಲೇ ಕೆಲವರು ದೂರು
ತ್ತಾರೆ. ಕಾಂಗ್ರೆಸ್‌ನಿಂದ ತಮಗೇ ಟಿಕೆಟ್‌ ಸಿಗುವುದು ಖಚಿತ ಎನ್ನುವಂತೆ ಉಮಾಪತಿ ಶ್ರೀನಿವಾಸ
ಗೌಡ ಓಡಾಡುತ್ತಿದ್ದಾರೆ. ವಾಸುದೇವ ರೆಡ್ಡಿ ಟಿ., ಸಿ.ನಾಗಭೂಷಣ, ಕವಿತಾ ರೆಡ್ಡಿ, ಕೆ. ನಾರಾಯಣ
ರಾಜು ಕೂಡ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳು. ಜೆಡಿಎಸ್‌ನಿಂದ ನಾರಾಯಣರಾಜು ಎನ್ನುವವರು ಟಿಕೆಟ್‌ ನಿರೀಕ್ಷಿಸಿದ್ದಾರೆ. ಎಚ್‌ಎಸ್‌ಆರ್‌ ಲೇಔಟ್‌ನ ಆಟದ ಮೈದಾನವನ್ನು ಕ್ರೀಡಾಂಗಣವಾಗಿ
ಸಲು ಹೊರಟಾಗ ಎದುರಾಗಿದ್ದ ಪ್ರತಿರೋಧದ ಕಿಡಿ ಇನ್ನೂ ಹಾಗೇ ಇದೆ. ಆಡಳಿತ ವಿರೋಧಿ ಅಲೆ ಸತೀಶ್‌ ರೆಡ್ಡಿ ಅವರಿಗೆ ಯಾವ ಪರಿಯ ಸವಾಲು ಒಡ್ಡುವುದೋ ನೋಡಬೇಕು.

----

ಸತೀಶ್‌ ರೆಡ್ಡಿ

ಹಾಲಿ ಶಾಸಕ (ಬಿಜೆಪಿ)

––––––––––––––––––

ಹಾಲಿ ಮತದಾರರ ವಿವರ

ಪುರುಷರು– 2,32,487

ಮಹಿಳೆಯರು– 2,00,194

ತೃತೀಯ ಲಿಂಗಿಗಳು– 71

ಒಟ್ಟು–‌ 4,32,752

--------------------------

ಚುನಾವಣೆ ಮತಗಳ ವಿವರ

ಪಕ್ಷಗಳು; 2018;2013;2008

ಬಿಜೆಪಿ; 1,11,863 ;86,552 ;62,993

ಕಾಂಗ್ರೆಸ್; 64,701 ;60,700 ;49,353

ಜೆಡಿಎಸ್‌; 9,379 ;10,621 ;6,313

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT