ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಾಜಿನಗರ ಕ್ಷೇತ್ರ: ಬಿಜೆಪಿ ಕೋಟೆಗೆ ಲಗ್ಗೆ ಹಾಕಲು ಕೈ ಹರಸಾಹಸ

ಸಾಕ್ಷಾತ್ ಸಮೀಕ್ಷೆ: ಜೆಡಿಎಸ್‌ನಿಂದ ವೈದ್ಯ ಆಂಜನಪ್ಪ ಕಣಕ್ಕೆ
Published 7 ಮೇ 2023, 22:02 IST
Last Updated 7 ಮೇ 2023, 22:02 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಜ್ಞಾವಂತರು, ಸುಶಿಕ್ಷಿತರು, ಮಧ್ಯಮವರ್ಗದವರೇ ಹೆಚ್ಚಾಗಿರುವ ಈ ಕ್ಷೇತ್ರದಲ್ಲಿ ಅತಿ ಹೆಚ್ಚು ಸಂಖ್ಯೆಯ ಸಣ್ಣ ಉದ್ಯಮಗಳೂ ಇವೆ. ಹೀಗಾಗಿ ಇಲ್ಲಿ ಶ್ರಮಿಕವರ್ಗವೂ ಗಣನೀಯ ಪ್ರಮಾಣದಲ್ಲಿದೆ. ಬೆಂಗಳೂರಿನ ಇತರ ಕೆಲವು ಪ್ರಮುಖ ಕ್ಷೇತ್ರಗಳಂತೆ ಅಭಿವೃದ್ಧಿ ಕೆಲಸಗಳು ಆಗಿದ್ದರೂ, ಅಕ್ಕಪಕ್ಕದ ಕ್ಷೇತ್ರಗಳಿಗೆ ಹೋಲಿಸಿ ನೋಡುವ ಜನರು ಅಲ್ಲಿಗಿಂತ ಇಲ್ಲಿ ತುಸು ಕಡಿಮೆ ಎಂಬ ಭಾವನೆ ಹೊಂದಿದ್ದಾರೆ.

ಇಲ್ಲಿ ಈ ಬಾರಿ ಬಿಜೆಪಿಯ ಪ್ರಬಲ ಅಭ್ಯರ್ಥಿ ಎಸ್‌.ಸುರೇಶ್‌ಕುಮಾರ್‌ ಅವರಿಗೆ ಪೈಪೋಟಿ ನೀಡುತ್ತಿರುವುದು ಕಾಂಗ್ರೆಸ್‌ನ ಪುಟ್ಟಣ್ಣ. ಇವರು ಇತ್ತೀಚೆಗಷ್ಟೇ ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಿ ಟಿಕೆಟ್‌ ಪಡೆದು ಕಣಕ್ಕಿಳಿದಿದ್ದಾರೆ. ಜೆಡಿಎಸ್‌ನಿಂದ ಡಾ. ಆಂಜನಪ್ಪ ಅದೃಷ್ಟದ ಪರೀಕ್ಷೆ ನಡೆಸಿದ್ದಾರೆ. ಐದು ಬಾರಿ ಇಲ್ಲಿ ಶಾಸಕರಾಗಿರುವ ಸುರೇಶ್‌ ಕುಮಾರ್ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದ್ದು ರಾಜಾಜಿನಗರ ಕ್ಷೇತ್ರದಿಂದಲೇ. ಹೀಗಾಗಿ, ಕ್ಷೇತ್ರದ ಸಂದಿ ಮೂಲೆಯ ಅರಿವಿದೆ. ಒಮ್ಮೆ ಮಾತ್ರ ಅವರು ಸೋಲು ಅನುಭವಿಸಿದ್ದರು. ಈ ಬಾರಿ ಒಟ್ಟು 17 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಕಾಂಗ್ರೆಸ್‌ನಲ್ಲಿ ಈ ಬಾರಿ ಹಲವರು ಟಿಕೆಟ್‌ ಆಕಾಂಕ್ಷಿಗಳಿದ್ದರು. ಅವರಲ್ಲಿ ಪ್ರಮುಖವಾಗಿ ಪುಟ್ಟರಾಜು, ಭವ್ಯ ನರಸಿಂಹಮೂರ್ತಿ, ಪದ್ಮಾವತಿ ಕಡೇ ಹಂತದವರೆಗೆ ಟಿಕೆಟ್‌ಗೆ ಪೈಪೋಟಿ ನಡೆಸಿದ್ದರು. ಆದರೆ, ಬಿಜೆಪಿಯಿಂದ ವಲಸೆ ಬಂದ ಪುಟ್ಟಣ್ಣ ಅವರಿಗೆ ಟಿಕೆಟ್‌ ಅನಾಯಾಸವಾಗಿ ದೊರೆಯಿತು. ಇದರಿಂದ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳು ಮತ್ತು ಕಾರ್ಯಕರ್ತರಲ್ಲಿ ಅಸಮಾಧಾನ ಮನೆ ಮಾಡಿದೆ. ಇವರನ್ನೆಲ್ಲ ಸಮಾಧಾನಪಡಿಸಿ ಗೆಲುವಿನ ಗುರಿ ತಲುಪಲು ಪುಟ್ಟಣ್ಣ ಬೆವರು ಹರಿಸುತ್ತಿದ್ದಾರೆ.

ಸುರೇಶ್‌ಕುಮಾರ್ ಅವರಿಗೆ ಸಾಕಷ್ಟು ಜನರು ವೈಯಕ್ತಿಕವಾಗಿ ಪರಿಚಯವಿದೆ. ಇದು ಅವರಿಗೆ ಪ್ಲಸ್ ಪಾಯಿಂಟ್‌. ಆದರೆ, ಪುಟ್ಟಣ್ಣ ಪ್ರಬಲ ಅಭ್ಯರ್ಥಿ. ವಿಧಾನಪರಿಷತ್‌ಗೆ ಶಿಕ್ಷಕರ ಕ್ಷೇತ್ರದಿಂದ ಹಲವು ಬಾರಿ ಗೆದ್ದು, ಚುನಾವಣೆ ಹೇಗೆ ನಡೆಸಬೇಕು. ಕೊನೆ ಕ್ಷಣದ ತಂತ್ರಗಾರಿಕೆ, ಪಟ್ಟುಗಳನ್ನು ಚೆನ್ನಾಗಿ ಬಲ್ಲವರು. ಆದರೆ, 1978 ರಿಂದ ಈಚೆಗೆ ಈ ಕ್ಷೇತ್ರದಲ್ಲಿ ಎರಡು ಬಾರಿ ಮಾತ್ರ ಕಾಂಗ್ರೆಸ್‌ ಗೆದ್ದಿತ್ತು, ಲಕ್ಕಣ್ಣ (1989) ಮತ್ತು ನೆ.ಲ.ನರೇಂದ್ರ ಬಾಬು (2004) ಕಾಂಗ್ರೆಸ್‌ ಶಾಸಕರಾಗಿದ್ದರು. 

‘ರಾಜಾಜಿನಗರ ಕ್ಷೇತ್ರದ ಸಮಸ್ಯೆ ಎಂದರೆ ಸಾಕಷ್ಟು ಖಾಲಿ ಜಾಗದ ಕೊರತೆ ಇದೆ. ಇಲ್ಲಿಗೆ ಉತ್ತಮ ಕ್ರೀಡಾಂಗಣ, ಈಜುಕೊಳ ಬೇಕು ಎಂಬ ಬೇಡಿಕೆಗಳಿವೆ. ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿಸಲು ಕ್ರಮ ತೆಗೆದುಕೊಳ್ಳಬೇಕಾಗಿದೆ. ಕೊಳೆಗೇರಿ ಜನರಿಗೆ ಹಕ್ಕು ಪತ್ರ ವಿತರಿಸಬೇಕಾಗಿದೆ’ ಎನ್ನುತ್ತಾರೆ ಸುರೇಶ್‌ ಕುಮಾರ್‌.

ಪುಟ್ಟಣ್ಣ ಬೇರೆಯದೇ ಚಿತ್ರಣ ಮುಂದಿಡುತ್ತಾರೆ. ಅವರ ಪ್ರಕಾರ, ‘ಇಲ್ಲಿ ನೂರಾರು ಸಮಸ್ಯೆಗಳಿವೆ. ಒಳಚರಂಡಿ, ಡಾಂಬರ್ ಕಾಣದ ರಸ್ತೆಗಳು, ಕುಡಿಯುವ ನೀರಿನ ಕೊರತೆ, ಹೈಟೆನ್ಷನ್‌ ವೈರ್‌ಗಳ ಸ್ಪರ್ಶದಿಂದ ಹಲವರು ಮೃತಪಟ್ಟಿದ್ದಾರೆ,  ಹೀಗೆ ಸಾಲು– ಸಾಲು ಸಮಸ್ಯೆಗಳಿವೆ. ಇಲ್ಲಿ ಏನೂ ಅಭಿವೃದ್ಧಿ ಆಗಿಲ್ಲ. ಇಲ್ಲಿನ ಶಾಸಕರು ಸಚಿವರಾಗಿದ್ದರೂ ಏನೂ ಮಾಡಿಲ್ಲ. ಇವೆಲ್ಲವನ್ನೂ ಸರಿಪಡಿಸಲು ನಾನು ಬದ್ಧನಾಗಿದ್ದೇನೆ. ‘ಈ ಹಿಂದೆ ಸುರೇಶ್‌ ಅವರನ್ನು ಎದುರಿಸಲು ಪಕ್ಷದಿಂದ ಸಮರ್ಥರನ್ನು ಕಣಕ್ಕೆ ಇಳಿಸಿರಲಿಲ್ಲ. ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರಿಂದ ಅವರು ಪೈಪೋಟಿ ನೀಡಲು ಸಾಧ್ಯವಾಗಲಿಲ್ಲ’ ಎನ್ನುತ್ತಾರೆ.

ಜೆಡಿಎಸ್ ಅಭ್ಯರ್ಥಿ ಡಾ.ಆಂಜನಪ್ಪ ಅವರು ವೈದ್ಯರಾಗಿ ಹೆಸರು ಮಾಡಿದ್ದು, ಪಕ್ಷದ ಪಂಚರತ್ನ ಕಾರ್ಯಕ್ರಮ ಮತ್ತು ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಮಾಡಿದ ಕೆಲಸಗಳನ್ನೇ ನೆಚ್ಚಿಕೊಂಡು ಮತ ಯಾಚಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಒಕ್ಕಲಿಗ, ಬ್ರಾಹ್ಮಣ ಮತ್ತು ಲಿಂಗಾಯತ ಮತದಾರರ ಸಂಖ್ಯೆ ಸಾಕಷ್ಟು ಪ್ರಮಾಣದಲ್ಲಿದೆ. ಅದರಲ್ಲೂ ಉತ್ತರಕರ್ನಾಟಕ ಜನಸಂಖ್ಯೆ ಈ ಭಾಗದಲ್ಲಿ ಹೆಚ್ಚು. ಇವರನ್ನು ಒಲಿಸಿಕೊಂಡವರಿಗೇ ವಿಜಯದ ಮಾಲೆ ಬೀಳಲಿದೆ.

ಒಟ್ಟು ಮತದಾರರು – 207529

ಪುರುಷರು 104899

ಮಹಿಳೆಯರು 102619

ಇತರ 197

ಒಟ್ಟು  ಅಭ್ಯರ್ಥಿಗಳು 17

ಫಲಿತಾಂಶದ ಹಿನ್ನೋಟ 2008;2013;2018 ಬಿಜೆಪಿ;ಬಿಜೆಪಿ;ಬಿಜೆಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT