ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಾಜಿನಗರ: ಸುರೇಶ್‌ಕುಮಾರ್‌ಗೆ ಜಯ ತಂದ ‘ಮನೆ ಮನೆ ಭೇಟಿ’

Published 13 ಮೇ 2023, 20:35 IST
Last Updated 13 ಮೇ 2023, 20:35 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ಭದ್ರಕೋಟೆಯಾಗಿರುವ ರಾಜಾಜಿನಗರ ಕ್ಷೇತ್ರದಲ್ಲಿ ಈ ಬಾರಿಯೂ ‘ಕಮಲ’ ಅರಳಿದೆ. ‘ಮನೆ ಮನೆ ಭೇಟಿ’ ಕಾರ್ಯಕ್ರಮ ಹಾಗೂ ಕ್ಷೇತ್ರದ ಜನರ ಜೊತೆ ನಿರಂತರ ಒಡನಾಟವಿಟ್ಟುಕೊಂಡಿದ್ದ ಬಿಜೆಪಿಯ ಎಸ್. ಸುರೇಶ್‌ಕುಮಾರ್,  ಆರನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಬಿಜೆಪಿ ತೊರೆದು ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾಗಿ ಕಣದಲ್ಲಿದ್ದ ಪುಟ್ಟಣ್ಣ, ಕೆಲ ಸುತ್ತಿನ ಮತ ಎಣಿಕೆಯಲ್ಲಿ ಉತ್ತಮ ಪೈಪೋಟಿ ನೀಡಿದರೂ ಹಲವು ಸುತ್ತಿನಲ್ಲಿ ಹಿನ್ನೆಡೆ ಹೊಂದಿ ಪರಾಭವಗೊಂಡಿದ್ದಾರೆ.

ಮಹಾನಗರ ಪಾಲಿಕೆ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದ್ದ ಸುರೇಶ್‌ಕುಮಾರ್, ಕ್ಷೇತ್ರದ ಮೇಲೆ ಹಿಡಿತ ಹೊಂದಿದ್ದಾರೆ. ಬಹುತೇಕ ನಿವಾಸಿಗಳ ವೈಯಕ್ತಿಕ ಪರಿಚಯ ಅವರಿಗೆ ಇದೆ. ಇದೇ ಕಾರಣಕ್ಕೆ ಅವರು ಜಯ ಗಳಿಸಿದ್ದಾರೆ ಎಂಬುದು ಸ್ಥಳೀಯರ ಅಭಿಪ್ರಾಯ.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸ್ಥಾನದಿಂದ ಕೆಳಗಿಳಿದ ನಂತರ, ಸುರೇಶ್‌ಕುಮಾರ್ ಕ್ಷೇತ್ರದಲ್ಲಿ ಹೆಚ್ಚು ಓಡಾಡುತ್ತಿದ್ದರು. ಚುನಾವಣೆ ಘೋಷಣೆಗೂ ಮುನ್ನವೇ ವಾರ್ಡ್‌ವಾರು ಮನೆಗಳಿಗೆ ಭೇಟಿ ನೀಡುವುದಕ್ಕಾಗಿ ‘ಮನೆ ಮನೆ ಭೇಟಿ’ ಕಾರ್ಯಕ್ರಮ ಆರಂಭಿಸಿದ್ದರು. ಮನೆಗಳಿಗೆ ಹೋಗಿ, ಮತದಾರರ ಕ್ಷೇಮ ವಿಚಾರಿಸುತ್ತಿದ್ದರು. ಈ ಬಾರಿ ತಮಗೆ ಬೆಂಬಲ ನೀಡುವಂತೆ ಕೋರುತ್ತಿದ್ದರು. ಚುನಾವಣೆ ಘೋಷಣೆಯಾಗುತ್ತಿದ್ದಂತೆ, ತಮ್ಮ ಕೆಲಸಗಳ ಕಿರು ಹೊತ್ತಿಗೆಯನ್ನು ಮುದ್ರಿಸಿ ಹಂಚಿದ್ದರು. ಕಾರ್ಯಕರ್ತರೂ ಮತದಾರರ ಬಾಗಿಲಿಗೆ ಹೋಗಿ ಪ್ರಚಾರ ಮಾಡಿದ್ದರು. ಇದುವೇ ಗೆಲುವಿಗೆ ಕಾರಣವೆಂದು ಜನ ಹೇಳುತ್ತಿದ್ದಾರೆ.

ಕ್ಷೇತ್ರದಲ್ಲಿ ಒಕ್ಕಲಿಗ, ಬ್ರಾಹ್ಮಣ ಮತ್ತು ಲಿಂಗಾಯತ ಮತದಾರರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ. ಉತ್ತರ ಕರ್ನಾಟಕದ ಜನರೂ ನೆಲೆಸಿದ್ದಾರೆ. ಇವರೆಲ್ಲರ ಬಹುಪಾಲು ಮತ ಸೆಳೆದಿರುವ ಸುರೇಶ್‌ಕುಮಾರರ್, ವಿಜಯ ಪತಾಕೆ ಹಾರಿಸಿದ್ದಾರೆ.

ಬಿಜೆಪಿ ಸರ್ಕಾರದ ಆಡಳಿತದ ವಿರುದ್ಧ ಕ್ಷೇತ್ರದ ಹಲವು ಜನರಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ///50,306 ಮತದಾರರು ಈ ಬಾರಿ ‘ಕೈ’ಗೆ ಮತ ನೀಡಿದ್ದಾರೆ. ಇದೇ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಾ. ಆಂಜನಪ್ಪ ಕೇವಲ 4,038 ಮತ ಪಡೆದಿದ್ದಾರೆ.

‘ಅಖಂಡ’ ಕೈಹಿಡಿಯದ ಪುಲಕೇಶಿನಗರ

ಬೆಂಗಳೂರು: ಭಾರಿ ಸದ್ದು ಮಾಡಿದ ಪುಲಕೇಶಿನಗರ ಅಖಾಡದಲ್ಲಿ ಬಿಎಸ್‌ಪಿಯ ಅಖಂಡ ಶ್ರೀನಿವಾಸಮೂರ್ತಿ ಸೋಲು ಅನುಭವಿಸಿದ್ದರೆ, ಕಾಂಗ್ರೆಸ್ಸಿನ ಎ.ಸಿ. ಶ್ರೀನಿವಾಸ್‌ ಗೆಲುವಿನ ನಗೆ ಬೀರಿದ್ದಾರೆ.

2018ರ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಕಣಕ್ಕಿಳಿದಿದ್ದ ಅಖಂಡ ಶ್ರಿನಿವಾಸಮೂರ್ತಿ, ಇಡೀ ರಾಜ್ಯದಲ್ಲಿ ಅತೀ ಹೆಚ್ಚು (81,626) ಮತಗಳ ಅಂತರದಿಂದ ಗೆಲುವು ಕಂಡಿದ್ದರು. ಪಕ್ಷದಿಂದ ಮತ್ತೆ ಟಿಕೆಟ್‌
ಸಿಗದ ಕಾರಣಕ್ಕೆ ಬಿಎಸ್‌ಪಿಯಿಂದ ಕಣಕ್ಕಿಳಿದಿದ್ದ ಅವರು, ಕಾಂಗ್ರೆಸ್‌ ಅಭ್ಯರ್ಥಿಗೆ ಕಠಿಣ ಪೈಪೋಟಿ ನೀಡಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಎ.ಸಿ. ಶ್ರೀನಿವಾಸ್ ಅವರು 62,210 ಮತಗಳಿಂದ ಏಕಪಕ್ಷೀಯವಾಗಿ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ. ಇಲ್ಲಿ ಬಿಜೆಪಿಯ ಎ. ಮುರಳಿ 10,624, ಎಸ್‌ಡಿಪಿಐನ ಬಿ.ಆರ್‌. ಭಾಸ್ಕರಪ್ರಸಾದ್ 4,102 ಮತವಷ್ಟೆ ಪಡೆದಿದ್ದಾರೆ. ಈ ಯಾವ ಅಭ್ಯರ್ಥಿಗಳಿಗೂ ಎ.ಸಿ. ಶ್ರೀನಿವಾಸ್‌ಗೆ ಸರಿಸಮಾನವಾಗಿ ಸ್ಪರ್ಧೆ ನೀಡಲು ಸಾಧ್ಯವಾಗಿಲ್ಲ.

2020ರಲ್ಲಿ ಕ್ಷೇತ್ರ ವ್ಯಾಪ್ತಿಯ ಡಿ.ಜೆ. ಹಳ್ಳಿ, ಕೆ.ಜೆ. ಹಳ್ಳಿಯಲ್ಲಿ ನಡೆದ ಗಲಭೆಯ ಬಳಿಕ ಅಖಂಡ ಅವರು ಮುಸ್ಲಿಂ ಸಮುದಾಯದ ಬೆನ್ನಿಗೆ ನಿಲ್ಲಲಿಲ್ಲವೆಂಬ ಕಾರಣಕ್ಕೆ ಈ ಬಾರಿ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನಿರಾಕರಿಸಿತ್ತು. ಇದರಿಂದ ಮುನಿಸಿಕೊಂಡು ಕಾಂಗ್ರೆಸ್‌ ತ್ಯಜಿಸಿದ್ದ ಅವರು ಬಿಎಸ್‌ಪಿ ಸೇರಿದ್ದರು. ತಮ್ಮದಲ್ಲದ ತಪ್ಪಿಗೆ ಟಿಕೆಟ್‌ ನಿರಾಕರಿಸುವ ಮೂಲಕ ಕಾಂಗ್ರೆಸ್‌ ನಾಯಕರು ಅನ್ಯಾಯ ಮಾಡಿರುವುದರಿಂದ ಅನುಕಂಪದ ಅಲೆಯಲ್ಲಿ ಕ್ಷೇತ್ರ ಗೆಲ್ಲ ಬಹುದೆಂದು ಅಖಂಡ ನಿರೀಕ್ಷಿಸಿದ್ದರು. ಆದರೆ, ಮುಸ್ಲಿಂ, ದಲಿತ ಸಮುದಾಯದವರು ನಿರ್ಣಾಯಕರಾಗಿದ್ದ ಇಲ್ಲಿ, ಈ ಎರಡೂ ಸಮುದಾಯಗಳ ಮತದಾರರು ಸಾರಸಗಾಟಾಗಿ ಎ.ಸಿ. ಶ್ರೀನಿವಾಸ್‌ ಬೆನ್ನಿಗೆ ನಿಂತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT